ವಿಧಾನಮಂಡಲ ಅಧಿವೇಶನ ಹಿನ್ನೆಲೆ: ಇಂದು ಜೆಡಿಎಸ್ ಮಹತ್ವದ ಶಾಸಕಾಂಗ ಸಭೆ

ಬೆಂಗಳೂರು, ಅ.9:  ಚಳಿಗಾಲದ ಅಧಿವೇಶನ ಹಿನ್ನೆಲೆಯಲ್ಲಿ ಜೆಡಿಎಸ್ ಮಹತ್ವದ ಶಾಸಕಾಂಗ ಸಭೆ ಇಂದು ನಡೆಯಲಿದೆ. ಇಂದು 11 ಗಂಟೆಗೆ ಜೆಡಿಎಸ್ ಪ್ರಧಾನ ಕಚೇರಿ ಜೆ.ಪಿ.ಭವನದಲ್ಲಿ ಜೆಡಿಎಸ್ ಶಾಸಕಾಂಗ ನಾಯಕ ಎಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ಸಭೆ ನಡೆಯಲಿದೆ. ಅಧಿವೇಶದಲ್ಲಿ ಸರ್ಕಾರವನ್ನು ಯಾವ ಕಟ್ಟಿಹಾಕಬೇಕು, ಸರ್ಕಾರದ ವೈಫಲ್ಯಗಳ ಕುರಿತು ಸದನದ ಒಳಗೆ ಮತ್ತು ಹೊರಗೆ ಯಾವ ರೀತಿಯಲ್ಲಿ ಹೋರಾಟ ರೂಪಿಸಬೇಕು ಎಂಬುದರ ಬಗ್ಗೆ ಸಭೆಯಲ್ಲಿ ಶಾಸಕರ ಜೊತೆ ಕುಮಾರಸ್ವಾಮಿ ತಂತ್ರ ರೂಪಿಸಲಿದ್ದಾರೆ ಎಂದು ತಿಳಿದುಬಂದಿದೆ. ವಿಧಾನಮಂಡಲದ ಅಧಿವೇಶನದಲ್ಲಿ ಸರ್ಕಾರದ ವಿರುದ್ಧದ ಹೋರಾಟಕ್ಕೆ ಕಾಂಗ್ರೆಸ್  ಜೊತೆ ಸಾಥ್ ನೀಡಬೇಕೇ ಅಥವಾ ಬೇಡವೇ ಎನ್ನುವ ಬಗ್ಗೆ ಇಂದಿನ ಸಭೆಯಲ್ಲಿ ಚರ್ಚೆ ನಡೆಯಲಿದೆ. ಒಂದು ವೇಳೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರೇ ಪ್ರತಿಪಕ್ಷ ನಾಯಕರಾಗಿ ಆಯ್ಕೆಯಾದರೆ, ಕಾಂಗ್ರೆಸ್ ಜೊತೆ ಜೆಡಿಎಸ್ ಅಂತರ ಕಾಯ್ದುಕೊಳ್ಳಬಹುದು ಅಥವಾ ಬೇರೆ ಯಾರಾದರೂ ನಾಯಕರಾದಲ್ಲಿ ಅವರಿಗೆ ಯಾವ ರೀತಿ ಸರ್ಕಾರದ ವಿರುದ್ಧದ ಹೋರಾಟದಲ್ಲಿ ಜೊತೆ ಆಗಬೇಕೆಂಬ ಬಗ್ಗೆ ಸಹ ಇಂದಿನ ಜೆಡಿಎಸ್ ಶಾಸಕಾಂಗ ಸಭೆಯಲ್ಲಿ ಮಹತ್ವದ ಚರ್ಚೆ ನಡೆಯಲಿದೆ. ಹಾಗೆಯೇ ಉಪಚುನಾವಣೆ ಸಂಬಂಧ ಪಕ್ಷ ಸಂಘಟನೆ ಕುರಿತು ಚರ್ಚೆ ನಡೆಯಲಿದೆ ಎಂದು ಜೆಡಿಎಸ್ ಮೂಲಗಳು ತಿಳಿಸಿವೆ.