ಬಾಗಲಕೋಟೆ ಜಿಲ್ಲೆಯ ಪ್ರವಾಹ ಪೀಡಿತ ಪ್ರದೇಶಗಳಿಗೆ ಬಿಎಸ್ವೈ ಭೇಟಿ

ಬಾಗಲಕೋಟೆ, ಆ 9     ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಇಂದು ಬಾಗಲಕೋಟೆ ಜಿಲ್ಲೆಯ ಕೃಷ್ಣ, ಘಟಪ್ರಭಾ ಹಾಗೂ ಮಲ್ಲಪ್ರಭಾ ನದಿಯಿಂದ ಉಂಟಾಗಿರುವ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ. 

ಇಂದು ಬೆಳ್ಳಿಗೆ ಶಾಸಕ ಮುರಗೇಶ ನಿರಾಣಿ ಅವರ ಮನೆಯಿಂದ ಎರಡು ಕೀ. ಮೀ. ವಾಕ್ ಮಾಡಿದ ಯಡಿಯೂರಪ್ಪ, ಘಟಪ್ರಭಾ ನದಿಯ ಪ್ರವಾಹ ದಿಂದ ಸಂತ್ರಸ್ಥರಾಗಿದ್ದ ಮುಧೋಳ ನಿವಾಸಿಗಳು ನಿರಾಶ್ರಿತರ ಕೇಂದ್ರ ಕ್ಕೆ ಭೇಟಿ ನೀಡಿ, ಸಂತ್ರಸ್ತರ ಸಮಸ್ಯೆಯನ್ನು ಆಲಿಸಿದರು. ಶಾಶ್ವತ ಪರಿಹಾರ ಸೇರಿದಂತೆ ಇತರ ಸೌಲಭ್ಯಗಳನ್ನು ನೀಡುವಂತೆ ಸಂತ್ರಸ್ತರು ಸಿಎಂಗೆ ಮನವಿ ಸಲ್ಲಿಸಿದರು. ಈ ವೇಳೆ  ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಸೂಕ್ತ ಕ್ರಮ ತೆಗೆದುಕೊಳ್ಳುವುದಾಗಿ ಬಿಎಸ್ವೈ ಭರವಸೆ ನೀಡಿದರು.  

ನಂತರ ಕೃಷ್ಣ ನದಿ ಪ್ರವಾಹ ಪ್ರದೇಶ ಚಿಕ್ಕಪಡಸಲಗಿ ಬ್ಯಾರೇಜ್, ಹಿಪ್ಪರಗಿ ಬ್ಯಾರೇಜ್ ಹಾಗೂ ಘಟಪ್ರಭಾ ನದಿಯ ಪ್ರವಾಹ ಉಂಟಾಗಿರುವ ಡವಳೇಶ್ವರ ಗ್ರಾಮಕ್ಕೆ ಭೇಟಿ ನೀಡಲಿದ್ದಾರೆ. ತದನಂತರ ಬಾಗಲಕೋಟೆ ಮೂಲಕ ಕೂಡಲಸಂಗಮಕ್ಕೆ ಭೇಟಿ ನೀಡಿ, ಬಾದಾಮಿ ತಾಲೂಕಿನಲ್ಲಿ ಮಲ್ಲಪ್ರಭಾ ನದಿಯಿಂದ ಉಂಟಾಗಿರುವ ಪ್ರವಾಹ ಪೀಡಿತ ಪ್ರದೇಶಗಳ ಸಂತ್ರಸ್ತರ ಸಮಸ್ಯೆ ಆಲಿಸಲಿದ್ದಾರೆ.  

ತದನಂತರ ಬಾಗಲಕೋಟೆ ಜಿಲ್ಲಾಡಳಿತ ಭವನದಲ್ಲಿ ಅಧಿಕಾರಿಗಳ ಸಭೆ ನಡೆಸಿ, ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಎಲ್ಲ ವ್ಯವಸ್ಥೆ ಕ್ರಮ ತೆಗೆದುಕೊಳ್ಳುವಂತೆ ಸೂಚನೆ ನೀಡಲಿದ್ದಾರೆ.