ಬೆಂಗಳೂರು: ಆಷಾಢ ಮುಗಿಯುತ್ತಿದ್ದಂತೆ ರಾಜ್ಯ ಪ್ರವಾಸಕ್ಕೆ ಹೊರಡಲು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸಿದ್ಧತೆ ನಡೆಸುತ್ತಿದ್ದಾರೆ. ಶ್ರಾವಣ ಮಾಸದಲ್ಲಿ ರಾಜ್ಯ ಸುತ್ತಿ ಲೋಕಸಭಾ ಚುನಾವಣೆಗೆ ಅಧಿಕೃತವಾಗಿ ರಣಕಹಳೆ ಮೊಳಗಿಸಲಿದ್ದಾರೆ.
ಹೌದು, ಜಂದಾಲ್ ಪ್ರಕೃತಿ ಚಿಕಿತ್ಸಾ ಕೇಂದ್ರದಲ್ಲಿ ವಿಶ್ರಾಂತಿ ಪಡೆಯುತ್ತಿರುವ ಯಡಿಯೂರಪ್ಪ, ಲೋಕಸಭಾ ಚುನಾವಣೆಗೆ ಪೂರ್ವಭಾವಿಯಾಗಿ ಮೊದಲ ರಾಜ್ಯ ಪ್ರವಾಸಕ್ಕೆ ಮುಹೂರ್ತ ಫಿಕ್ಸ್ ಮಾಡಿದ್ದಾರೆ. ಜ್ಯೋತಿಷಿಗಳ ಸಲಹೆಯಂತೆ ಶ್ರಾವಣ ಮಾಸ ಆರಂಭಗೊಳ್ಳುತ್ತಿದ್ದಂತೆ ರಾಜ್ಯ ಪ್ರವಾಸ ಆರಂಭಿಸಲಿದ್ದಾರೆ. ರಾಜ್ಯ ಪ್ರವಾಸದ ವೇಳೆ ಆರೋಗ್ಯ ಸಮಸ್ಯೆ ಎದುರಾಗಬಾರದು ಎನ್ನುವ ಕಾರಣಕ್ಕೆ ಪ್ರಕೃತಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.
ವಿಧಾನ ಸಭಾ ಚುನಾ ವಣೆಯಲ್ಲಿ ಎಲ್ಲಾ ಜಿಲ್ಲೆಗಳಲ್ಲಿ ಪ್ರವಾಸ ಮಾಡಿದ್ದ ಬಿಎಸ್ವೈ ಈ ಬಾರಿ ಜಿಲ್ಲಾ ಕೇಂದ್ರ ಮಾತ್ರವಲ್ಲ ಪ್ರತಿ ವಿಧಾನಸಭಾ ಕ್ಷೇತ್ರಕ್ಕೂ ಭೇಟಿ ನೀಡಲಿದ್ದಾರೆ. ವಿಧಾನಸಭಾ ಕ್ಷೇತ್ರವಾರು ಪಕ್ಷದ ಸ್ಥಿತಿಗತಿ, ಸಂಘಟನಾ ಶಕ್ತಿ ಇತ್ಯಾದಿಗಳ ಸಮಗ್ರ ಮಾಹಿತಿ ಪಡೆದುಕೊಳ್ಳಲಿದ್ದಾರೆ.
ವಿಧಾನ ಸಭಾ ಚುನಾ ವಣೆ ವೇಳೆ ಕೆಲ ಕ್ಷೇತ್ರಗಳಲ್ಲಿ ಅಪಸ್ವರ, ಭಿನ್ನಮತದಂತಹ ಘಟನೆಗಳು ನಡೆದಿದ್ದು, ಈ ಬಾರಿ ಅಂತಹ ಪರಿಸ್ಥಿತಿ ತಲೆದೂರದಂತೆ ಮುನ್ನೆಚ್ಚರಿಕೆ ವಹಿಸಲಿದ್ದಾರೆ. ಪ್ರತಿ ಜಿಲ್ಲೆಯಲ್ಲೂ ಪಕ್ಷದಲ್ಲಿನ ಅಸಮಾಧಾನಿತರನ್ನು ಕರೆದು ಮಾತುಕತೆ ನಡೆಸಿ ಎಲ್ಲರ ಮನವೊಲಿಸುವ ದೊಡ್ಡ ಜವಾಬ್ದಾರಿಯನ್ನು ಯಡಿಯೂರಪ್ಪ ನಿಭಾಯಲಿಸಲಿದ್ದಾರೆ.
ಈಗಾಗಲೇ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ರಾಜ್ಯ ಘಟಕಕ್ಕೆ ಕೆಲವೊಂದು ಟಾಗರ್ೆಟ್ ನೀಡಿದ್ದು, ಅವರು ರಾಜ್ಯಕ್ಕೆ ಬರುವ ಮುನ್ನ ಅದರ ವರದಿಯನ್ನು ಸಿದ್ಧಪಡಿಸಬೇಕಿದೆ.
ಪಕ್ಷದಲ್ಲಿ ಇರುವ ಅಸಮಾಧಾನ, ಭಿನ್ನಮತದಂತಹ ಚಟುವಟಿಕೆಗೆ ಕಡಿವಾಣ ಹಾಕಲು ಶಾ ಸೂಚನೆ ನೀಡಿದ್ದು, ಅದಕ್ಕೆ ಹೆಚ್ಚಿನ ಅಧಿಕಾರವನ್ನೂ ಯಡಿಯೂರಪ್ಪಗೆ ನೀಡಿದ್ದಾರೆ.
ಪಕ್ಷದ ವಿರುದ್ಧ ನಿಲುವು ತಳೆವ ಹಾಗೂ ಪಕ್ಷದ ಪರ ಕೆಲಸ ಮಾಡದ ಪದಾಧಿಕಾರಿಗಳಿಗೆ ಕೊಕ್ ನೀಡಿ ಹೊಸಬರಿಗೆ ಮಣೆ ಹಾಕುವ ಸೂಚನೆ ನೀಡಿದ್ದಾರೆ ಎಂದು ಬಿಜೆಪಿ ಆಪ್ತ ಮೂಲಗಳಿಂದ ತಿಳಿದುಬಂದಿದೆ.
28 ಲೋಕಸಭಾ ಕ್ಷೇತ್ರಗಳಲ್ಲಿ 25 ಸ್ಥಾನಕ್ಕೆ ಟಾಗರ್ೆಟ್ ನೀಡಿ ಕನಿಷ್ಠ 20 ಸ್ಥಾನವನ್ನಾದರೂ ಗೆಲ್ಲಿಸಿಕೊಂಡೇ ಬರಬೇಕು ಎಂದು ಯಡಿಯೂರಪ್ಪಗೆ ಅಮಿತ್ ಶಾ ಹೊಸ ಗುರಿ ನಿಗದಿಪಡಿಸಿದ್ದಾರೆ. ಹಾಗಾಗಿ ಯಡಿಯೂರಪ್ಪ ರಾಜ್ಯ ಪ್ರವಾಸಕ್ಕೆ ಮುಂದಾಗಿದ್ದಾರೆ ಎನ್ನಲಾಗಿದೆ