ನವದೆಹಲಿ, ಆಗಸ್ಟ್ 6 ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಇಂದು ಇಲ್ಲಿನ ಕರ್ನಾಟಕ ಭವನ ನೂತನ ಕಟ್ಟಡ ನಿರ್ಮಾಣದ ಪ್ರಗತಿ ಪರಿಶೀಲನೆ ನಡೆಸಿದರು.
ಹೊಸ ಕಟ್ಟಡದ ನೀಲನಕ್ಷೆ ಬಗ್ಗೆ ಹಿರಿಯ ಅಧಿಕಾರಿಗಳ ಜೊತೆ ನವದೆಹಲಿಯ ಕರ್ನಾಟಕ ಭವನದಲ್ಲಿ ವಿಸ್ತೃತ ಚರ್ಚೆ ನಡೆಸಿದ ಮುಖ್ಯಮಂತ್ರಿ, ಹಳೆಯ ನಕಾಶೆಯಲ್ಲಿ ಕಚೇರಿ ಕಟ್ಟಡಕ್ಕೆ ಎರಡು ಅಂತಸ್ತುಗಳನ್ನು ಕಾಯ್ದಿರಿಸಲಾಗಿದೆ. ಕರ್ನಾಟಕ ಸಂಸ್ಕೃತಿ ಬಿಂಬ ಕಾಣುತ್ತಿಲ್ಲ, ಹೀಗಾಗಿ ಇರುವ ನಕಾಶೆಯಲ್ಲಿ ಬದಲಾವಣೆ ಮಾಡಿ, ಕಚೇರಿ ಕಟ್ಟಡ ಒಂದು ಅಂತಸ್ತಿಗೆ ಮಾತ್ರ ಸೀಮಿತವಾಗಿರಿಸಿ ಕೊಂಡು, ಅತಿಥಿಗಳ ಕೊಠಡಿ ಮತ್ತು ಸಂಸ್ಕೃತಿಯ ಪ್ರತಿಬಿಂಬಿಕ್ಕೆ ಆದ್ಯತೆ ನೀಡುವ ಹೊಸ ನೀಲಿನಕ್ಷೆಯನ್ನು ನಾಳೆ ಸಂಜೆಯೊಳಗೆ ಸಿದ್ಧಪಡಿಸುವಂತೆ ಸೂಚಿಸಿದರು. ಆಗಸ್ಟ್ 15 ರ ಬಳಿಕ ಹಳೆಯ ಕಟ್ಟಡ ತೆರವಿನ ಕೆಲಸಕ್ಕೆ ಚಾಲನೆ ನೀಡಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.
ಇಂದು ಮತ್ತು ನಾಳೆ ದೆಹಲಿಯಲ್ಲಿಯೇ ಉಳಿದುಕೊಳ್ಳಲಿರುವ ಯಡಿಯೂರಪ್ಪ, ಹೈಕಮಾಂಡ್ ಭೇಟಿಗೆ ಪ್ರಯತ್ನಿಸಲಿದ್ದಾರೆ. ಹೈಕಮಾಂಡ್ ಹಸಿರು ನಿಶಾನೆ ತೋರುತ್ತಿದ್ದಂತೆ ಬೆಂಗಳೂರಿಗೆ ವಾಪಸ್ ಬಂದು ಸಚಿವ ಸಂಪುಟ ರಚನೆ ಮಾಡುವ ಲೆಕ್ಕಾಚಾರದಲ್ಲಿ ಇದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಭೇಟಿಗೆ ಯಡಿಯೂರಪ್ಪ ಈಗಾಗಲೇ ಸಮಯ ಕೇಳಿದ್ದಾರೆ. ಆದರೆ, ಕಾಶ್ಮೀರ ವಿಚಾರಕ್ಕೆ ಸಂಬಂಧಿಸಿ ಮೋದಿ ಮತ್ತು ಅಮಿತ್ ಶಾ ಸಂಸತ್ ಅಧಿವೇಶನದಲ್ಲಿ ತೊಡಗಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದು ಸಂಜೆ ಅಥವಾ ನಾಳೆ ಹೈಕಮಾಂಡ್ ಭೇಟಿಯಾಗುವ ಸಾಧ್ಯತೆ ಇದೆ.