ಬೆಂಗಳೂರು, ಜ 6, ಬಿಎಂಟಿಸಿ ಬಸ್ಸೊಂದರ ಬ್ರೇಕ್ ವಿಫಲಗೊಂಡ ಪರಿಣಾಮ ಸರಣಿ ಅಪಘಾತ ಸಂಭವಿಸಿ ಇಬ್ಬರು ಮೃತಪಟ್ಟು, ಹಲವರು ಗಾಯಗೊಂಡಿರುವ ದಾರುಣ ಘಟನೆ ಸುಮನಹಳ್ಳಿ ಮೇಲ್ಸೇತುವೆ ಸಮೀಪ ಇಂದು ಬೆಳಗ್ಗೆ ನಡೆದಿದೆ.ಬಿಎಂಟಿಸಿ ಬಸ್ಸಿನ ಬ್ರೇಕ್ ವಿಫಲಗೊಂಡ ಪರಿಣಾಮ ಮುಂದೆ ಸಾಗುತ್ತಿದ್ದ ಕಾರು, ಆಟೋ, ದ್ವಿ ಚಕ್ರ ವಾಹನಗಳಿಗೆ ಡಿಕ್ಕಿ ಹೊಡೆದ ಬಳಿಕ ಬಸ್ ನಿಂತಿದೆ. ಇಬ್ಬರು ಸಾವನ್ನಪ್ಪಿ, ಹಲವು ಮಂದಿ ಗಾಯಗೊಂಡಿದ್ದಾರೆ.ಕೊಟ್ಟಿಗೆ ಪಾಳ್ಯ ಜಂಕ್ಷನ್ ಬಳಿಯ ಇಳಿಜಾರಿನಲ್ಲಿ ಇಂದು ಬೆಳಗ್ಗೆ ಬಿಎಂಟಿಸಿ ಬಸ್ ವೇಗವಾಗಿ ಹೋಗುತ್ತಿತ್ತು. ಬಸ್ ಚಾಲಕ ಬ್ರೇಕ್ ಹಾಕಿದಾಗ ಬಸ್ಸ್ ನಿಂತಿಲ್ಲ. ಇದರಿಂದ ಚಾಲಕ ಗಾಬರಿಗೊಂಡು, ಬಸ್ಸನ್ನು ರಸ್ತೆ ಬದಿಗೆ ಇಳಿಸಲು ಯತ್ನಿಸಿದ್ದಾರೆ. ಆದರೆ ಅಷ್ಟರಲ್ಲಿ ಬಸ್ ಮುಂದೆ ಹೋಗುತ್ತಿದ್ದ ಬೈಕ್ಗಳು, ಆಟೋ ಸೇರಿದಂತೆ ಹಲವು ವಾಹನಗಳಿಗೆ ಡಿಕ್ಕಿ ಹೊಡೆದಿದೆ. ಬೈಕ್‌ನಲ್ಲಿದ್ದ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ. ಸರಣಿ ಅಪಘಾತದಲ್ಲಿ ಹತ್ತಕ್ಕೂ ಹೆಚ್ಚು ವಾಹನಗಳು ಜಖಂಗೊಂಡಿವೆ.
ಗಾಯಗೊಂಡವರ ಸ್ಥಿತಿ ಗಂಭೀರವಾಗಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ವಿಷಯ ತಿಳಿಯುತ್ತಿದ್ದಂತೆ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ ಬಸ್ಸನ್ನು ರಸ್ತೆ ಬದಿಗೆ ಸರಿಸಿ ಸುಗಮ ವಾಹನ ಸಂಚಾರಕ್ಕೆ ವ್ಯವಸ್ಥೆ ಮಾಡಿದ್ದಾರೆ.ಪಶ್ಚಿಮ ಸಂಚಾರ ವಿಭಾಗದ ಡಿಸಿಪಿ ಸೌಮ್ಯಲತಾ ಕೂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸದ್ದಾರೆ.ಬಸ್ಸಿನ ಬ್ರೇಕ್ ಸಮಸ್ಯೆ ಇದೆ ಎಂದು ಬಸ್ ಚಾಲಕ ಹಲವು ಬಾರಿ ಡಿಪೋ ಮ್ಯಾನೇಜರ್‌ಗೆ ತಿಳಿಸಿದ್ದರು. ಆದರೆ ಅಡ್ಜೆಸ್ಟ್ ಮಾಡುವಂತೆ ಅವರು ತಿಳಿಸಿದ್ದರು ಎನ್ನಲಾಗಿದೆ. ಬಿಎಂಟಿಸಿ ಅಧಿಕಾರಿಗಳ ನಿರ್ಲಕ್ಷ್ಯವೇ ಇದಕ್ಕೆ ಕಾರಣ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.