ಬೆಂಗಳೂರು: ಜ 26ರಂದು ಎಲ್ಲ 300 ಮಂಡಲಗಳಲ್ಲಿ ತ್ರಿವರ್ಣ ಧ್ವಜಾರೋಹಣಕ್ಕೆ ಬಿಜೆಪಿ ಭರದ ಸಿದ್ಧತೆ

ಬೆಂಗಳೂರು 24: ಗಣರಾಜ್ಯೋತ್ಸವ ದಿನವಾದ ಜ 26ರಂದು ರಾಜ್ಯದ ಎಲ್ಲ 300 ಮಂಡಲಗಳಲ್ಲಿ ತ್ರಿವರ್ಣ ಧ್ವಜಾರೋಹಣ ನಡೆಸುವ ಕಾರ್ಯಕ್ರಮದ ಸಿದ್ಧತೆಯ ಭಾಗವಾಗಿ ನಗರದ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಶುಕ್ರವಾರ ಎಲ್ಲ ಜಿಲ್ಲೆಗಳ ಪಕ್ಷದ ಅಧ್ಯಕ್ಷರು ಹಾಗೂ ಪ್ರಧಾನ ಕಾರ್ಯದರ್ಶಿಗಳೊಂದಿಗೆ ವಿಡಿಯೋ ಸಂವಾದ ಕಾರ್ಯಕ್ರಮ ಆಯೋಜಿಸಲಾಗಿತ್ತು. 

ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಅರುಣ್‍ಕುಮಾರ್ ಹಾಗೂ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ) ಪರ ಅಭಿಯಾನದ ಸಂಚಾಲಕ ಎನ್.ರವಿಕುಮಾರ್ ಅವರು ಎಲ್ಲ ಜಿಲ್ಲೆಗಳ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳೊಂದಿಗೆ ವಿಡಿಯೋ ಸಂವಾದ ನಡೆಸಿ ಆಯಾ ಜಿಲ್ಲೆಗಳ ಮತ್ತು ಮಂಡಲಗಳಲ್ಲಿ ಜ 26ರಂದು ತ್ರಿವರ್ಣ ಧ್ವಜಾರೋಹಣ ಕಾರ್ಯಕ್ರಮಗಳ ಸಿದ್ಧತೆಗಳ  ಬಗ್ಗೆ ಮಾಹಿತಿ ಪಡೆದರು.

ಪ್ರತಿ ಬೂತ್‍ಗೆ ಅಗತ್ಯವಿರುವ ಧ್ವಜಗಳ ಬಗ್ಗೆ, “ಉಟ್ಟ ಬಟ್ಟೆಯಲ್ಲಿ ಹೊರಟು ಬಂದವರು” ಪುಸ್ತಕಗಳನ್ನು ಮತ್ತು ಧ್ವಜಗಳನ್ನು ಬೂತ್‍ಗಳಿಗೆ ತಲುಪಿಸುವ ಯೋಜನೆ ಕುರಿತು, ಪ್ರತಿ ಬೂತ್‍ನಲ್ಲಿ ಭಾಷಣಕಾರರ ಕುರಿತು, ಧ್ವಜ ಇಳಿಸುವ ಕುರಿತು, ಮಂಡಲಗಳಲ್ಲಿ ಎಲ್ಲ ಕಾರ್ಯಕರ್ತರು ದ್ವಿಚಕ್ರ ವಾಹನಗಳಲ್ಲಿ ಓಡಾಡುವ ಕುರಿತು ರಾಜ್ಯದ 37 ಸಂಘಟನಾತ್ಮಕ ಜಿಲ್ಲೆಗಳ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು ಹಾಗೂ ಪಕ್ಷದ ಪ್ರಮುಖರೊಂದಿಗೆ ವಿಡಿಯೋ ಸಂವಾದದ ಮೂಲಕ ಯೋಜನೆ ರೂಪಿಸಲಾಯಿತು.  ರಾಜ್ಯದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ) ಅಭಿಯಾನ ಕುರಿತು ಯಾವುದೇ ಮಾಹಿತಿ ಪಡೆಯಲು ಬೆಂಗಳೂರಿನ ಬಿಜೆಪಿ ರಾಜ್ಯ ಕಾರ್ಯಾಲಯದಲ್ಲಿ ಪ್ರತ್ಯೇಕ ವಿಭಾಗವನ್ನು ಸ್ಥಾಪಿಸಲಾಗಿದೆ. ಕಾರ್ಯಕರ್ತರು ಈ ವಿಭಾಗವನ್ನು ಸಂಪರ್ಕಿಸಬಹುದಾಗಿದೆ ಎಂದು ಎನ್.ರವಿಕುಮಾರ್ ಮಾಧ್ಯಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.