ನವದೆಹಲಿ, ಜ.21: ದೆಹಲಿ ವಿಧಾನಸಭಾ ಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ತಡರಾತ್ರಿ ಬಿಡುಗಡೆಗೊಳಿಸಿದ್ದು, ದೆಹಲಿ ಮುಖ್ಯಮಂತ್ರಿ, ಎಎಪಿ ಮುಖಂಡ ಅರವಿಂದ ಕೇಜ್ರಿವಾಲ್ ವಿರುದ್ಧ ಬಿಜೆಪಿ ಯುವ ಮೋರ್ಚಾದ ದೆಹಲಿ ಘಟಕದ ಅಧ್ಯಕ್ಷ ಸುನೀಲ್ ಯಾದವ್ ಅವರನ್ನು ಕಣಕ್ಕಿಳಿಸಿದೆ.
ಈ ಮೂಲಕ ಕೇಜ್ರಿವಾಲ್ ಅವರ ಎದುರು ಅಭ್ಯರ್ಥಿ ಯಾರಾಗಲಿದ್ದಾರೆ ಎಂಬ ಕುತೂಹಲಕ್ಕೆ ತೆರೆ ಬಿದ್ದಿದೆ, ಅಳೆದ ತೂಗಿ ಬಿಜೆಪಿ ಯುವ ನಾಯಕ ಸುನಿಲ್ ಯಾದವ್ ಅವರ ಹೆಸರನ್ನು ಅಂತಿಮಗೊಳಿಸಿದೆ.
ದೆಹಲಿಯ ಹರಿ ನಗರ ಕ್ಷೇತ್ರದಿಂದ ಪಕ್ಷದ ವಕ್ತಾರ ತಜಿಂದರ್‌ಪಾರ್ ಸಿಂಗ್ ಬಗ್ಗಾ ಅವರನ್ನು ಕಣಕ್ಕಿಳಿಸಲಾಗಿದೆ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ತಿಳಿಸಿದ್ದಾರೆ.
ಅದೇ ರೀತಿ ಶಾಹ್‌ದರಾ ಕ್ಷೇತ್ರದಿಂದ ಇಡಿಎಂಸಿ ಮಾಜಿ ಉಪ ಮೇಯರ್ ಸಂಜಯ್ ಗೋಯಲ್ ಅವರ ಹೆಸರನ್ನು ಅಂತಿಮಗೊಳಿಸಲಾಗಿದೆ. ಎಎಪಿ ಮುಖ್ಯಸ್ಥ ಅರವಿಂದ ಕೇಜ್ರಿವಾಲ್ ಅವರ ಎದುರು ಯುವ ನಾಯಕನನ್ನು ಕಣಕ್ಕಿಳಿಸಿರುವ ಬಿಜೆಪಿ ಹೊಸ ಪ್ರಯೋಗಕ್ಕೆ ಮುಂದಾಗಿದೆ.
ಪ್ರತಿಷ್ಠಿತ ನವದೆಹಲಿ ಕ್ಷೇತ್ರದಿಂದ ಕಾಂಗ್ರೆಸ್ ಹೊಸ ಮುಖ ರೋಮೇಶ್ ಸಭರ್ವಾಲ್ ಅವರನ್ನು ಕಣಕ್ಕಿಳಿಸಿದೆ.
ತಜಿಂದರ್ ಸಿಂಗ್ ಬಗ್ಗಾ ಅವರು ಟ್ವೀಟ್ ಮಾಡಿ" ಎಲ್ಲರಿಗೂ ಧನ್ಯವಾದಗಳು" ಎಂದು ತಿಳಿಸಿದ್ದಾರೆ.
ಇನ್ನುಳಿದಂತೆ, ನಂಗ್ಲೋಯಿ ಜಾಟ್ ಕ್ಷೇತ್ರದಿಂದ ಸುಮನ್‌ಲತಾ ಶೌಕಿನ್, ರಜೌರಿ ಗಾರ್ಡನ್ ಕ್ಷೇತ್ರದಿಂದ ರಮೇಶ್ ಖನ್ನಾ, ದೆಹಲಿ ಕಂಟೋನ್ಮೆಂಟ್‌ನಿಂದ ಮನೀಶ್ ಸಿಂಗ್, ಕಸ್ತೂರ್ಬಾ ನಗರದಿಂದ ರವೀಂದ್ರ ಚೌಹುರಿ, ಮೆಹ್ರೌಲಿ ಕ್ಷೇತ್ರದಿಂದ ಕುಸುಮ್ ಖಾತ್ರಿ, ಕಲ್ಕಜಿ ಕ್ಷೇತ್ರದಿಂದ ಧರಮ್‌ವೀರ್ ಸಿಂಗ್ ಮತ್ತು ಕೃಷ್ಣ ನಗರದಿಂದ ಅನಿಲ್ ಗೋಯಲ್ ಅವರಿಗೆ ಟಿಕೆಟ್ ನೀಡಲಾಗಿದೆ.
ಮೊದಲ ಪಟ್ಟಿಯಲ್ಲಿ ಬಿಜೆಪಿ 57 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರನ್ನು ಬಿಡುಗಡೆ ಮಾಡಿತ್ತು. ದೆಹಲಿಯ 70 ವಿಧಾನಸಭಾ ಕ್ಷೇತ್ರಗಳ ಪೈಕಿ ಬಿಜೆಪಿ ಇದುವರೆಗೆ 67 ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಿದೆ.
ಎರಡನೇ ಪಟ್ಟಿ ಇಂದು ಬೆಳಗ್ಗಿನ ಜಾವ 1 ಗಂಟೆ ವೇಳೆಗೆ ಬಿಡುಗಡೆಯಾಗಿದ್ದು, ಪಟ್ಟಿಯಲ್ಲಿರುವ ಹೆಸರುಗಳನ್ನು ಗಮನಿಸುವಾಗ ಅಕಾಲಿದಳದೊಂದಿಗೆ ಬಿಜೆಪಿ ನಡೆಸಿದ ಮಾತುಕತೆ ವಿಫಲವಾಗಿರುವುದನ್ನು ತೋರಿಸುತ್ತದೆ. ಏಕೆಂದರೆ ಅಕಾಲಿ ದಳದ ಭದ್ರಕೋಟೆ ಎಂದೇ ಪರಿಗಣಿಸಲಾಗಿರುವ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳ ಹೆಸರು ಕಂಡುಬಂದಿದೆ.