ದಾಲ್ತೊಂಗಂಜ್, ಏ 26 ಪಾಲಮು ಜಿಲ್ಲೆಯ ಹರಿಹರ್ಗಂಜ್ ಪೊಲೀಸ್ ಠಾಣಾ ವ್ಯಾಪ್ತಿಯ ಹಳೆ ಬಸ್ ನಿಲ್ದಾಣದ ಬಳಿ ಇರುವ ಬಿಜೆಪಿ ಕಚೇರಿಯನ್ನು ಸಿಪಿಐ(ಮಾವೋವಾದಿ)ಗೆ ಸೇರಿದ ಉಗ್ರರು ಬಾಂಬ್ ಸ್ಫೋಟಿಸಿ ಧ್ವಂಸಗೊಳಿಸಿರುವ ಘಟನೆ ನಡೆದಿದೆ. ಮಧ್ಯರಾತ್ರಿ ಮಾವೋವಾದಿಗಳು ಘೋಷಣೆ ಕೂಗಿದ ಬಳಿಕ ಬಾಂಬ್ ಸ್ಫೋಟಿಸಿ ಕಚೇರಿ ಧ್ವಂಸಗೊಳಿಸಿ ಬಿಹಾರದ ಕಡೆಗೆ ಪಲಾಯನ ಮಾಡಿದರು ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ. ಜಾರ್ಖಂಡ್ ಮತ್ತು ಬಿಹಾರ ಗಡಿ ಭಾಗದಲ್ಲಿ ಹರಿಹರ್ಗಂಜ್ ಪ್ರದೇಶವಿದೆ. ಹಳೆ ಬಸ್ ನಿಲ್ದಾಣದ ರಾಷ್ಟ್ರೀಯ ಹೆದ್ದಾರಿ 98ರ ಬಳಿ ಎರಡು ಅಂತಸ್ತಿನ ಕಟ್ಟಡದಲ್ಲಿ ಬಿಜೆಪಿಯ ಚುನಾವಣಾ ಕಚೇರಿ ತೆರೆಯಲಾಗಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ. ಬಾಂಬ್ ಸ್ಫೋಟ ನಡೆದ ಸ್ಥಳದಿಂದ 400 ಮೀಟರ್ ದೂರದಲ್ಲಿ ಪೊಲೀಸ್ ಠಾಣೆ ಇದೆ. ಪಾಲಮುನಲ್ಲಿ ಏಪ್ರಿಲ್ 29ರಂದು ಚುನಾವಣೆ ನಡೆಯಲಿದೆ.