ಅಮರಾವತಿ, ಜುಲೈ 19 ಮೆಗಾಸ್ಟಾರ್ ಚಿರಂಜೀವಿ ಅವರು ಬಿಜೆಪಿಗೆ ಸೇರುವ ಬಗ್ಗೆ ತಮ್ಮನ್ನು ಸಂಪರ್ಕಿಸಿಲ್ಲ. ಅವರು ಪಕ್ಷದ ರಾಷ್ಟ್ರೀಯ ನಾಯಕರೊಂದಿಗೆ ಮಾತುಕತೆ ನಡೆಸುತ್ತಿರಬಹುದೇನೋ ತಮಗೆ ಗೊತ್ತಿಲ್ಲ ಎಂದು ಆಂಧ್ರಪ್ರದೇಶ ಬಿಜೆಪಿ ಮುಖಂಡ ಹಾಗೂ ವಿಧಾನಪರಿಷತ್ ಸದಸ್ಯ ಮಾಧವ್ ಶುಕ್ರವಾರ ಸ್ಪಷ್ಟಪಡಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಆಗಸ್ಟ್ 11 ರ ನಂತರ ಪಕ್ಷದಲ್ಲಿ ಪ್ರಮುಖ ಬದಲಾವಣೆಗಳು ನಡೆಯಲಿದ್ದು, ಅತಿಗಣ್ಯ ವ್ಯಕ್ತಿಗಳು ಪಕ್ಷ ಸೇರ್ಪಡೆಗೊಳ್ಳಬಹುದು ಎಂಬ ಮುನ್ಸೂಚನೆ ನೀಡಿದ್ದಾರೆ.
ತೆಲುಗುದೇಶಂ ಪಕ್ಷದಿಂದ ಹೆಚ್ಚಿನ ಸಂಖ್ಯೆಯ ವಿಧಾನಪರಿಷತ್ ಸದಸ್ಯರು ಬಿಜೆಪಿ ಸಂಪರ್ಕದಲ್ಲಿದ್ದು, ಅವರು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿ ಬಿಜೆಪಿಗೆ ಸೇರಲಿದ್ದಾರೆ ಎಂದರು.
ಆಂಧ್ರ ಪ್ರದೇಶ ಮಾಜಿ ಮುಖ್ಯಮಂತ್ರಿ ಕಿರಣ್ ಕುಮಾರ್ ರೆಡ್ಡಿ ಬಿಜೆಪಿ ಸಂಪರ್ಕದಲ್ಲಿದ್ದಾರೆ.
ರಾಜ್ಯಕ್ಕೆ ಮತ್ತೊಂದು ಕೇಂದ್ರ ಸಚಿವ ಸ್ಥಾನ ದೊರೆಯುವ ಸಾದ್ಯತೆಯಿದೆ. ರಾಜ್ಯದಲ್ಲಿ ಬಿಜೆಪಿ ಸಾಮಾಜಿಕ ನ್ಯಾಯ ಆಧಾರದ ಮೇಲೆ ಮುನ್ನೆಡಯಲಿದೆ. ಬಿಜೆಪಿ ರಾಜ್ಯ ಅಧ್ಯಕ್ಷರ ಅವಧಿ ಮೂರು ವರ್ಷಗಳಾಗಿದ್ದು, ಕನ್ನಾ ಲಕ್ಷ್ಮೀನಾರಾಯಣ ಅವರು ಅಧ್ಯಕ್ಷರಾಗಿ ಕೇವಲ ಎರಡು ವರ್ಷಗಳಾಗಿವೆ ಎಂದು ಮಾಧವ್ ಹೇಳಿದರು.