ನವದೆಹಲಿ, ಅ.24: ಮಹಾರಾಷ್ಟ್ರ ಮತ್ತು ಹರ್ಯಾಣ ವಿಧಾನಸಭಾ ಕ್ಷೇತ್ರಗಳಿಗೆ ಇದೇ ಸೋಮವಾರ ನಡೆದ ಮತದಾನದ ಮತ ಎಣಿಕೆ ಪ್ರಗತಿಯಲ್ಲಿದ್ದು, ಎರಡೂ ರಾಜ್ಯಗಳಲ್ಲಿ ಬಿಜೆಪಿ ಮುನ್ನಡೆಯಲ್ಲಿದೆ. ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ಗಿಂತ ಎನ್ಸಿಪಿ ಉತ್ತಮ ಪ್ರದರ್ಶನ ತೋರುತ್ತಿರುವುದು ಕಂಡುಬಂದಿದೆ. ಇದುವರೆಗೆ ಸಿಕ್ಕಿದ ಫಲಿತಾಂಶದ ಆಧಾರದಲ್ಲಿ, ಮಾಜಿ ಮುಖ್ಯಮಂತ್ರಿ ಶರದ್ ಪವಾರ್ ಅವರ ನೇತೃತ್ವದ ಎನ್ಸಿಪಿ 38 ಕ್ಷೇತ್ರಗಳಲ್ಲಿ, ಕಾಂಗ್ರೆಸ್ 30 ಸ್ಥಾನಗಳಲ್ಲಿ ಮುನ್ನಡೆಯಲ್ಲಿದೆ. ಬಿಜೆಪಿ-ಶಿವಸೇನೆ 60 ಸ್ಥಾನಗಳಲ್ಲಿ ಮುನ್ನಡೆಯಲ್ಲಿದೆ. ಈ ಬಾರಿಯ ಚುನಾವಣೆಯಲ್ಲಿ ಮರಾಠದ ಪ್ರಬಲ ನಾಯಕ ಎಂದೇ ಖ್ಯಾತಿಯಾಗಿರುವ ಪವಾರ್ ಅವರು 21 ಜಿಲ್ಲೆಗಳಲ್ಲಿ 60 ಸಭೆಗಳನ್ನು ಉದ್ದೇಶಿಸಿ ಮಾತನಾಡಿದ್ದಾರೆ, ಆದ್ದರಿಂದ ಈ ಬಾರಿ ಹೆಚ್ಚಿನ ಸ್ಥಾನಗಳು ಲಭಿಸಲಿವೆ ಎಂದು ಎನ್ಸಿಪಿ ಮೂಲಗಳು ಹೇಳಿವೆ. ಎನ್ಸಿಪಿ ಮುಖ್ಯಸ್ಥ ಮತ್ತು ಅವರ ಕುಟುಂಬವು 2019 ರ ಚುನಾವಣೆಗೆ ಮುನ್ನ ಈ ಬಾರಿ ದೊಡ್ಡ ಸವಾಲನ್ನು ಎದುರಿಸಿತು, ಅವರ ಹಲವಾರು ಆಪ್ತರು ಇತ್ತೀಚೆಗೆ ಬಿಜೆಪಿ ಅಥವಾ ಶಿವಸೇನೆ ಸೇರ್ಪಡೆಗೊಂಡಿದ್ದಾರೆ. ಅವರ ಸಂಬಂಧಿ ಅಜಿತ್ ಪವಾರ್ ಅವರು ಶರದ್ ವಿರುದ್ಧ ಭ್ರಷ್ಟಾಚಾರದ ಆರೋಪ ಕೂಡ ಹೊರಿಸಿದ್ದರು. ಅದೇನೇ ಇದ್ದರೂ, ಪ್ರಸ್ತುತ ಫಲಿತಾಂಶದ ಪ್ರಕಾರ, ಕೆಲವು ಕ್ಷೇತ್ರಗಳಲ್ಲಿ ಅವರು ತಮ್ಮ ಹಿಡಿತವನ್ನು ಉಳಿಸಿಕೊಂಡಿರುವುದು ಕಂಡುಬಂದಿದೆ. ಆದರೆ ಆಡಳಿತಾರೂಢ ಬಿಜೆಪಿ ಮತ್ತು ಶಿವಸೇನೆ ಹೆಚ್ಚಿನ ಮುನ್ನಡೆ ಕಾಯ್ದೆಕೊಂಡು ಅಧಿಕಾರದ ಗದ್ದುಗೆಗೇರಲು ಸಿದ್ಧತೆ ನಡೆಸುತ್ತಿದೆ. ಮಹಾರಾಷ್ಟ್ರ ವಿಧಾನಸಭೆಯ ಚುನಾವಣೆಗೆ ಬಿಜೆಪಿ 44 ವಿಧಾನಸಭಾ ಸ್ಥಾನಗಳಲ್ಲಿ ಮುನ್ನಡೆಯಲ್ಲಿದ್ದರೆ, ಅದರ ಮಿತ್ರರಾಷ್ಟ್ರ ಶಿವಸೇನೆ 20 ಸ್ಥಾನಗಳಲ್ಲಿ ಮುನ್ನಡೆಯಲ್ಲಿದೆ. ವಿರೋಧ ಪಕ್ಷಗಳಾದ ಕಾಂಗ್ರೆಸ್ ಮತ್ತು ಎನ್ಸಿಪಿ ಕ್ರಮವಾಗಿ ಒಂಬತ್ತು ಮತ್ತು 13 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿವೆ. 90 ಸದಸ್ಯ ಬಲದ ಹರ್ಯಾಣದಲ್ಲಿ ಬಿಜೆಪಿ 30 ಸ್ಥಾನಗಳಲ್ಲಿ, ಕಾಂಗ್ರೆಸ್ 7 ಸ್ಥಾನಗಳಲ್ಲಿ ಮುನ್ನಡೆಯಲ್ಲಿದೆ. ಹೊಸ ಪಕ್ಷವಾದ ಜೆಜೆಪಿ 2 ಸ್ಥಾನಗಳಲ್ಲಿ ಮುನ್ನಡೆಯಲ್ಲಿದೆ. ಉಭಯ ರಾಜ್ಯಗಳಲ್ಲೂ ಕೇಸರಿ ಪಡೆ ಬಹಳ ಮುಂದಿರುವುದರಿಂದ ಅಧಿಕಾರದ ಗದ್ದುಗೆಯನ್ನು ಏರುವ ಸಾಧ್ಯತೆ ಕಂಡುಬರುತ್ತಿದೆ.