ಬೆಂಗಳೂರು, ಜು.6: ಡಾ.ಶ್ಯಾಮ ಪ್ರಸಾದ್ ಮುಖರ್ಜಿಯವರ ಜಯಂತಿ ಅಂಗವಾಗಿ ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿಂದು ಮುಖರ್ಜಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸಲಾಯಿತು.
ಈ ವೇಳೆ ಮಾತನಾಡಿದ ಪಕ್ಷದ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್, ಪಶ್ಚಿಮ ಬಂಗಾಳದ ಬಡ ಕುಟುಂಬದಲ್ಲಿ ಜನಿಸಿದ ಡಾ.ಶ್ಯಾಮ ಪ್ರಸಾದ್ ಮುಖರ್ಜಿಯವರ ತಂದೆ 36ನೇ ವಯಸ್ಸಿನಲ್ಲಿ ಸಂಸ್ಕೃತಿ ವಿಶ್ವವಿದ್ಯಾಲಯದ ಕುಲಪತಿಯಾಗಿದ್ದರು. ಸುಸಂಸ್ಕೃತ ಕುಟುಂಬದಿಂದ ಬೆಳೆದ ಮುಖರ್ಜಿಯವರು ಜನ ಸಂಘದ ಸಂಸ್ಥಾಪನಾ ಅಧ್ಯಕ್ಷರಾಗಿಯೂ ಕೆಲಸ ನಿರ್ವಹಿಸಿದ್ದರು. ಜವಾಹರ ಲಾಲ್ ನೆಹರೂ ಸಂಪುಟದಲ್ಲಿ ಸಚಿವರಾಗಿಯೂ ಕೆಲಸ ನಿರ್ವಹಿಸಿದ್ದರು. ದೇಶಾದ್ಯಂತ ಚರ್ಚೆಯಾಗಿದ್ದ ಪೌರತ್ವ ತಿದ್ದುಪಡಿ ಕಾಯ್ದೆಯ ನೆಹರೂ ಲಿಯಾಖತ್ ಪ್ಯಾಕ್ಟನ್ನು ವಿರೋಧಿಸಿ, ನೆಹರೂ ಮಂತ್ರಿಮಂಡಲಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಸಂವಿಧಾನದ 370ನೇ ವಿಧಿ ರದ್ದತಿಗೋಸ್ಕರ ದೇಶಾದ್ಯಂತ ದೊಡ್ಡ ಮಟ್ಟದ ಆಂದೋಲನ ಆಯೋಜಿಸಿದ್ದರು ಎಂದು ಹೇಳಿದರು.
ಜನಸಂಘ ಸಂಸ್ಥಾಪಕ ಅಧ್ಯಕ್ಷರಾಗಿ ಹಾಗೂ ಭಾರತೀತಯ ಜನತಾ ಪಕ್ಷದ ಸೈದ್ಧಾಂತಿಕ ಬೆಳವಣಿಗೆಯಲ್ಲೂ ಶ್ಯಾಮಪ್ರಸಾದ್ ಮುಖರ್ಜಿಯವರ ಕೊಡುಗೆ ಅನನ್ಯವಾದದ್ದು. 1901ರ ಜುಲೈ 6ರಂದು ಜನಿಸಿದ ಮುಖರ್ಜಿಯವರು 1953ರ ಜೂನ್ 23ರಂದು ದೇಶಕ್ಕಾಗಿ ಬಲಿದಾನಗೈದರು. ಸಾಮಾನ್ಯ ಕಾರ್ಯಕರ್ತರಾಗಿ ಪಕ್ಷಕ್ಕೆ ಬಂದು, ಡಾ.ಮುಖರ್ಜಿಯವರ ಸೈದ್ಧಾಂತಿಕ ನೆಲೆಗಟ್ಟಿನಲ್ಲಿ ಬೆಳೆದು ಈಗ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಡಾ.ಶ್ಯಾಮಪ್ರಸಾದ್ ಮುಖರ್ಜಿಯವರ ಕನಸಾದ ಕಾಶ್ಮೀರದ ಸಮಸ್ಯೆಗೆ ಮಂಗಳ ಹಾಡಿದ್ದಾರೆ. ಶ್ಯಾಮಪ್ರಸಾದ್ ಮುಖರ್ಜಿಯವರ ಹೋರಾಟಕ್ಕೆ ವಿಜಯವನ್ನು ತಂದುಕೊಟ್ಟಿದ್ದಾರೆ. ಅವರು ಹಾಕಿಕೊಟ್ಟ ಹೋರಾಟದ ಫಲವನ್ನು ಇಂದು ನಾವು ಕಾಣುತ್ತಿದ್ದೇವೆ. ಅವರ ಸೈದ್ಧಾಂತಿಕ ನೆಲೆಗಟ್ಟಿನಿಂದಾಗಿ ಪಕ್ಷ ಇಡೀ ದೇಶಾದ್ಯಂತ ಪಸರಿಸಿರುವುದನ್ನು ಗಮನಿಸಬಹುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ರಾಜ್ಯ ಉಪಾಧ್ಯಕ್ಷ ನಿರ್ಮಲ್ ಕುಮಾರ್ ಸುರಾನಾ, ಪ್ರಧಾನ ಕಾರ್ಯದರ್ಶಿಗಳಾದ ಮಹೇಶ್ ಟೆಂಗಿನಕಾಯಿ, ರಾಜ್ಯ ಕಾರ್ಯದರ್ಶಿಗಳಾದ ಜಗದೀಶ್ ಹಿರೇಮನಿ, ಮಾಧ್ಯಮ ಸಂಚಾಲಕ, ಎ.ಎಚ್. ಆನಂದ್, ಕಾರ್ಯಾಲಯ ಕಾರ್ಯದರ್ಶಿ ಲೋಕೇಶ್ ಅಂಬೆಕಲ್ಲು, ವಿವಿಧ ಪದಾಧಿಕಾರಿಗಳು ಉಪಸ್ಥಿತರಿದ್ದರು.