ನವದೆಹಲಿ 24: ಬಿಜೆಪಿ ದಲಿತ ವಿರೋಧಿ ಮತ್ತು ಸಿಖ್ ವಿರೋಧಿ ಮನಸ್ಥಿತಿಯನ್ನು ಹೊಂದಿದೆ ಎಂದು ದೆಹಲಿ ಮಾಜಿ ಮುಖ್ಯಮಂತ್ರಿ ಮತ್ತು ದೆಹಲಿ ವಿಧಾನಸಭೆಯ ವಿರೋಧ ಪಕ್ಷದ ನಾಯಕಿ ಅತಿಶಿ ಅವರು ಆರೋಪಿಸಿದ್ದಾರೆ.
ದೆಹಲಿ ಮಾಜಿ ಮುಖ್ಯಮಂತ್ರಿ ಸೋಮವಾರ ತಮ್ಮ ಕೊಠಡಿಯಲ್ಲಿ ಹೊಸದಾಗಿ ಆಯ್ಕೆಯಾದ ಮುಖ್ಯಮಂತ್ರಿ ರೇಖಾ ಗುಪ್ತಾ ಅವರನ್ನು ಭೇಟಿಯಾದರು. ಸಭೆಯ ನಂತರ ಸಿಎಂ ಪತ್ರಿಕಾಗೋಷ್ಠಿ ನಡೆಸಿ, ಪ್ರಸ್ತುತ ಅಧಿಕಾರಿಗಳು ಪ್ರತಿ ಕಚೇರಿಯಿಂದ ಬಾಬಾ ಸಾಹೇಬ್ ಅಂಬೇಡ್ಕರ್ ಮತ್ತು ಭಗತ್ ಸಿಂಗ್ ಅವರ ಫೋಟೋಗಳನ್ನು ತೆಗೆದುಹಾಕಿದ್ದಾರೆ ಎಂದು ಆರೋಪಿಸಿದರು.
ಭಾರತೀಯ ಜನತಾ ಪಕ್ಷದ ದಲಿತ ವಿರೋಧಿ ಮನಸ್ಥಿತಿ ಎಲ್ಲರಿಗೂ ತಿಳಿದಿದೆ. ಇಂದು, ಅದರ ದಲಿತ ವಿರೋಧಿ ಮನಸ್ಥಿತಿಗೆ ಪುರಾವೆ ನೀಡಲಾಗಿದೆ. ಅರವಿಂದ್ ಕೇಜ್ರಿವಾಲ್ ದೆಹಲಿ ಸರ್ಕಾರದ ಪ್ರತಿಯೊಂದು ಕಚೇರಿಯಲ್ಲೂ ಬಾಬಾ ಸಾಹೇಬ್ ಅಂಬೇಡ್ಕರ್ ಮತ್ತು ಭಗತ್ ಸಿಂಗ್ ಅವರ ಫೋಟೋಗಳನ್ನು ಹಾಕಿದ್ದರು ಎಂದು ಅತಿಶಿ ಹೇಳಿದರು.
ಏತನ್ಮಧ್ಯೆ, ಸೋಮವಾರ ದೆಹಲಿ ವಿಧಾನಸಭೆಯ ವಿರೋಧ ಪಕ್ಷದ ನಾಯಕಿ, ಮಹಿಳಾ ಸಮ್ಮಾನ್ ಯೋಜನೆಗೆ ಸಂಬಂಧಿಸಿದ ಭರವಸೆಯನ್ನು ಈಡೇರಿಸದಿರುವ ಬಗ್ಗೆ ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಅವರ ನಡೆ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ದೆಹಲಿ ಸರ್ಕಾರ, ಪ್ರಧಾನಿ ನರೇಂದ್ರ ಮೋದಿ ನೀಡಿದ ಭರವಸೆಯನ್ನು ಈಡೇರಿಸುವಲ್ಲಿ ವಿಫಲವಾಗಿದೆ ಎಂದು ಅತಿಶಿ ಒತ್ತಿ ಹೇಳಿದರು.
ಆದಾಗ್ಯೂ, ಡಾ. ಬಿ.ಆರ್. ಅಂಬೇಡ್ಕರ್ ಮತ್ತು ಭಗತ್ ಸಿಂಗ್ ಅವರ ಚಿತ್ರಗಳನ್ನು ಸಿಎಂ ಕಚೇರಿಯಿಂದ ತೆಗೆದುಹಾಕಲಾಗಿದೆ ಎಂಬ ವಿರೋಧ ಪಕ್ಷದ ನಾಯಕಿ ಅತಿಶಿ ಅವರ ಆರೋಪವನ್ನು ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಅವರು ತಳ್ಳಿಹಾಕಿದ್ದು, ಅವರು ಸುಳ್ಳು ಹೇಳುತ್ತಿದ್ದಾರೆ. ಇದು ಭ್ರಷ್ಟಾಚಾರದಿಂದ ಗಮನವನ್ನು ಬೇರೆಡೆ ಸೆಳೆಯುವ ತಂತ್ರ ಎಂದು ತಿರುಗೇಟು ನೀಡಿದ್ದಾರೆ.
ಈ ಮಧ್ಯೆ, ಮುಖ್ಯಮಂತ್ರಿ ಕಚೇರಿಯ ಫೋಟೋವನ್ನು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ ದೆಹಲಿ ಬಿಜೆಪಿ, ಅಂಬೇಡ್ಕರ್ ಮತ್ತು ಭಗತ್ ಸಿಂಗ್ ಅವರ ಚಿತ್ರಗಳು ಇನ್ನೂ ಅಲ್ಲೇ ಇವೆ. ಆದರೆ ವಿರುದ್ಧ ಗೋಡೆಗಳ ಮೇಲೆ ಹಾಕಲಾಗಿದೆ.
ದೆಹಲಿ ಮುಖ್ಯಮಂತ್ರಿ ಮತ್ತು ಎಲ್ಲಾ ಸಚಿವರ ಕೊಠಡಿಗಳಲ್ಲಿ ಮಹಾತ್ಮ ಗಾಂಧಿ, ಬಿ.ಆರ್. ಅಂಬೇಡ್ಕರ್, ಭಗತ್ ಸಿಂಗ್, ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಭಾವ ಚಿತ್ರಗಳಿವೆ ಎಂದು ಬಿಜೆಪಿ ಹೇಳಿದೆ.