ನವದೆಹಲಿ, ಫೆ 7,ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಬುಧವಾರ ನಡೆದ ಸಾರ್ವಜನಿಕ ಸಭೆಯೊಂದರಲ್ಲಿ ಅಸಭ್ಯ ಮತ್ತು ಸ್ವೀಕಾರ್ಹವಲ್ಲದ ಭಾಷೆ ಬಳಸಿರುವ ರಾಹುಲ್ ಗಾಂಧಿ ವಿರುದ್ಧ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳುವಂತೆ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಶುಕ್ರವಾರ ಒತ್ತಾಯಿಸಿದ್ದಾರೆ.ಲೋಕಸಭಾ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಹ್ಲಾದ್ ಜೋಶಿ, ಸಭ್ಯತೆಯ ಎಲ್ಲ ಮಿತಿಗಳನ್ನು ದಾಟಿರುವ ಗಾಂಧಿ, ಪ್ರಧಾನ ಮಂತ್ರಿಯವರನ್ನು ಕುಬ್ಜರಾಗಿಸುವ ಸಂಚು ರೂಪಿಸುತ್ತಿದ್ದಾರೆ ಎಂದು ಆರೋಪಿಸಿದರು.
ರಾಹುಲ್ ಗಾಂಧಿಯವರು ಹಲವು ರಾಜ್ಯಗಳಲ್ಲಿ ಆಡಳಿತ ನಡೆಸುತ್ತಿರುವ ತುಂಬಾ ಹಳೆಯ ಪಕ್ಷಕ್ಕೆ ಸೇರಿದವರಾಗಿದ್ದಾರೆ. ಸಾರ್ವತ್ರಿಕ ಚುನಾವಣೆಗಳಲ್ಲಿ ದೇಶದ ಜನರು ಅವರ ಪಕ್ಷವನ್ನು ಧೂಳೀಪಟ ಮಾಡಿದ್ದಾರೆ. ಎರಡನೇ ಅವಧಿಗೆ ಭಾರೀ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿರುವ ಪ್ರಧಾನ ಮಂತ್ರಿಯವರ ಬಗ್ಗೆ ಮಾತನಾಡುವಾಗ ರಾಹುಲ್ ಗಾಂಧಿ ಇಂತಹ ಮಟ್ಟಕ್ಕೆ ಇಳಿಯಬಾರದು ಎಂದು ಪ್ರಹ್ಲಾದ್ ಜೋಷಿ ಹೇಳಿದರು.
ರಾಷ್ಟ್ರ ರಾಜಧಾನಿಯಲ್ಲಿ ಬುಧವಾರ ನಡೆದ ಚುನಾವಣಾ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ್ದ ರಾಹುಲ್ ಗಾಂಧಿ, ‘ನರೇಂದ್ರಮೋದಿ ನಿರುದ್ಯೋಗದ ಬಗ್ಗೆ ಮಾತನಾಡದಿದ್ದರೆ ಆರು ತಿಂಗಳಲ್ಲಿ ಯುವಕರು ಅವರಿಗೆ ಕೋಲುಗಳಿಂದ ಹೊಡೆಯುತ್ತಾರೆ.’ ಎಂದು ಹೇಳಿದ್ದರು. ರಾಹುಲ್ ಗಾಂಧಿಯವರ ಈ ಹೇಳಿಕೆ, ಶುಕ್ರವಾರ ಲೋಕಸಭೆಯಲ್ಲಿ ಗೊಂದಲಕ್ಕೆ ಕಾರಣವಾಗಿತ್ತು. ಆಡಳಿತ ಪಕ್ಷದ ಸದಸ್ಯರು ಮತ್ತು ಪ್ರತಿಪಕ್ಷದ ಸದಸ್ಯರೊಂದಿಗೆ ವಾಗ್ವಾದ ನಡೆಸಿ ಗದ್ದಲ ನಿರ್ಮಾಣವಾಗಿದ್ದರಿಂದ ಸ್ಪೀಕರ್ ಓಂ ಬಿರ್ಲಾ ಸದನವನ್ನು ಮಧ್ಯಾಹ್ನ 1 ಗಂಟೆಗೆ ಮುಂದೂಡಿದ್ದರು.