ರಾಷ್ಟ್ರಪತಿ ಆಡಳಿತ ಹೇರಲು ಬಿಜೆಪಿ ಸಂಚು; ಶಿವಸೇನಾ ಗಂಭೀರ ಆರೋಪ

ಮುಂಬೈ,  ನ 11 :   ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಡಳಿತ ಹೇರಲು ಬಿಜೆಪಿ ಸಂಚು ರೂಪಿಸಿದೆ ಎಂದು ಶಿವಸೇನಾ ಆರೋಪಿಸಿದೆ.   ಸೋಮವಾರ ಸಂಜೆ 7: 30 ರೊಳಗೆ  ಸರ್ಕಾರ  ರಚಿಸುವಂತೆ   ರಾಜ್ಯಪಾಲ ಭಗತ್ ಸಿಂಗ್ ಕೊಶ್ಯಾರಿ   ವಿಧಿಸಿರುವ  ಅಂತಿಮ ಗಡುವಿನ  ಹಿಂದೆ   ಬಿಜೆಪಿಯ  ಒಳಸಂಚು  ಅಡಗಿದೆ  ಎಂದು   ಶಿವಸೇನಾ  ಹಿರಿಯ ಮುಖಂಡ ಸಂಜಯ್ ರಾವತ್ ಆರೋಪಿಸಿದ್ದಾರೆ.     ರಾಜ್ಯಪಾಲರು  ವಿಧಿಸಿರುವ   24 ಗಂಟೆಗಳ   ಗಡುವಿಗೆ      ಶಿವಸೇನಾ    ಸ್ಪಂದಿಸಲು  ಸಾಧ್ಯವಾಗದಿದ್ದರೆ,  ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ   ರಾಜ್ಯದಲ್ಲಿ ರಾಷ್ಟ್ರಪತಿ  ಆಡಳಿತ ಹೇರುವ  ಸಾಧ್ಯತೆಯಿದೆ  ಎಂದು ರಾವತ್  ಹೇಳಿದರು.    ಸೋಮವಾರ   ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಜಯ್ ರಾವತ್, ರಾಜ್ಯಪಾಲರು ನಮಗೆ  ಇನ್ನೂ ಹೆಚ್ಚಿನ ಸಮಯ ನೀಡಿದ್ದರೆ ಸರ್ಕಾರ ರಚಿಸಲು  ಸುಲಭವಾಗುತ್ತಿತ್ತು. ಬಿಜೆಪಿಗೆ 72 ಗಂಟೆ ಕಾಲಾವಕಾಶ ನೀಡಿದ್ದ ರಾಜ್ಯಪಾಲರು, ನಮಗೆ ಮಾತ್ರ  ಕೇವಲ  24   ತಾಸುಗಳನ್ನು  ನೀಡಿರುವುದು  ನೋಡಿದರೆ,  ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಹೇರುವ ಬಿಜೆಪಿಯ  ಹುನ್ನಾರ ಸ್ಪಷ್ಟವಾಗಿ ಅನಾವರಣಗೊಳ್ಳುತ್ತಿದೆ ಎಂದು ದೂರಿದರು.   ಮುಖ್ಯಮಂತ್ರಿ  ಸ್ಥಾನದ   ಮೇಲೆ   ಮಿತ್ರ   ಶಿವಸೇನಾ ಕಣ್ಣಿಟ್ಟಿರುವದರಿಂದ  ಉಂಟಾಗಿರುವ   ಭಿನ್ನಾಭಿಪ್ರಾಯಗಳಿಂದಾಗಿ ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸಲು ಬಿಜೆಪಿ ಹಿಂದೇಟು ಹಾಕಿದೆ ... ವಿಧಾನಸಭೆಯಲ್ಲಿ ಎರಡನೇ ಅತಿದೊಡ್ಡ ಪಕ್ಷವಾಗಿರುವ ಶಿವಸೇನೆಗೆ ರಾಜ್ಯಪಾಲರು  ಸರ್ಕಾರ ರಚಿಸುವ   ಆಹ್ವಾನ ನೀಡಿ  ಸೋಮವಾರ ಸಂಜೆ 7: 30ರೊಳಗೆ  ಪ್ರಕ್ರಿಯೆ  ಮುಗಿಸಲು ಗಡುವು ವಿಧಿಸಿದ್ದಾರೆ.     24 ಗಂಟೆಗಳ ಗಡುವಿನೊಳಗೆ ಶಿವಸೇನೆ,  ಕಾಂಗ್ರೆಸ್ ಮತ್ತು ಎನ್ಸಿಪಿ ಪಕ್ಷಗಳ  ಬೆಂಬಲ ಪಡೆಯಲು ವಿಫಲವಾದರೆ,    ಆಗ   ರಾಜ್ಯದಲ್ಲಿ    ರಾಷ್ಟ್ರಪತಿ ಆಡಳಿತ   ಹೇರಲು  ಅವಕಾಶವಾಗಲಿದೆ.  ಒಮ್ಮೆ  ರಾಷ್ಟ್ರಪತಿ ಆಡಳಿತ  ಹೇರಿದರೆ.  ಆರು ತಿಂಗಳೊಳಗೆ ಮತ್ತೆ ಹೊಸದಾಗಿ ಚುನಾವಣೆ  ನಡೆಸಬೇಕಾಗುತ್ತದೆ. ಶಿವಸೇನೆ ಹಿಂದುತ್ವ ರಾಜಕಾರಣದ ಹೆಸರಿನಲ್ಲಿ ಮತದಾರರಿಗೆ ಮೋಸ ಮಾಡಿದೆ,  ಮೈತ್ರಿ ಧರ್ಮವನ್ನು  ಉಲ್ಲಂಘಿಸಿದೆ ಎಂದು  ಎಂದು ಬಿಜೆಪಿ  ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.