ಮೀಸಲಾತಿ ಕುರಿತ ಬಿಜೆಪಿ ಮುಖ್ಯಸ್ಥರ ಹೇಳಿಕೆಗೆ ಬಿಜೆಪಿ ಸಂಸದ ವಿ. ಶ್ರೀನಿವಾಸ್ ಪ್ರಸಾದ್ ಬೇಸರ

 ಮೈಸೂರು,  ಆಗಸ್ಟ್  27     ಬಿಜೆಪಿ  ಹಾಗೂ ರಾಷ್ಟ್ರೀಯ ಸ್ವಯಂ ಸೇವಕ ಸಂಘದೊಳಗೆ  ನಡೆಯುತ್ತಿರುವ ಕೆಲ ಬೆಳವಣಿಗೆಗಳ  ಬಗ್ಗೆ  ಚಾಮರಾಜನಗರ ಕ್ಷೇತ್ರದ   ಬಿಜೆಪಿ  ಸಂಸದ, ಹಿರಿಯ ರಾಜಕಾರಣಿ    ವಿ. ಶ್ರೀನಿವಾಸ್ ಪ್ರಸಾದ್   ಅಸಮಧಾನ ವ್ಯಕ್ತಪಡಿಸಿದ್ದಾರೆ. ಮೀಸಲಾತಿ  ಕುರಿತು  ಆರೆಸ್ಸೆಸ್ ಮುಖ್ಯಸ್ಥ   ಮೋಹನ್ ಭಾಗವತ್ ನೀಡಿದ ಹೇಳಿಕೆ ಹಾಗೂ ಬಿಜೆಪಿಯೊಳಗೆ ಅಧಿಕಾರಕ್ಕಾಗಿ ನಡೆಯುತ್ತಿರುವ ಕಚ್ಚಾಟಗಳ ಬಗ್ಗೆಯೂ ಶ್ರೀನಿವಾಸ ಪ್ರಸಾದ್  ಬೇಸರ ವ್ಯಕ್ತಪಡಿಸಿದ್ದಾರೆ. ಮೈಸೂರಿನಲ್ಲಿ   ಸುದ್ದಿಗಾರರೊಂದಿಗೆ  ಮಾತನಾಡಿದ ಅವರು, ಜಾತೀಯತೆ ಎಲ್ಲಿಯವರೆಗೆ ಇರುತ್ತೋ ಅಲ್ಲಿಯವರೆಗೂ ಮೀಸಲಾತಿ ಇರಲೇಬೇಕು ಎಂದು  ಅವರು ಸ್ಪಷ್ಟಪಡಿಸಿದ್ದಾರೆ. ಆರ್ ಎಸ್ ಎಸ್  ಮುಖ್ಯಸ್ಥ ಭಾಗವತ್   ಅವರು ಮೀಸಲಾತಿ ಬಗ್ಗೆ ಮಾತನಾಡುವ ಮೊದಲು ಜಾತೀಯತೆ ಬಗ್ಗೆ ಮಾತನಾಡಬೇಕು. ಮೀಸಲಾತಿಯ  ವಿಚಾರವನ್ನೇ ವಿರೋಧಿಸುವವರ  ಜೊತೆ ಚರ್ಚೆ ಮಾಡುವುದು ಏನಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ. ಮೋಹನ್ ಭಾಗವತ್ ಅವರ  ಸಲಹೆಯನ್ನು  ಬಿಜೆಪಿ  ಒಪ್ಪುತ್ತದೋ  ಇಲ್ಲವೋ ಗೊತ್ತಿಲ್ಲ.  ಒಂದೊಮ್ಮೆ ಬಿಜೆಪಿ ಮೀಸಲಾತಿ ಬಗ್ಗೆ ಮಾತನಾಡಿದರೆ  ಅದನ್ನು ನಾನು  ಆಕ್ಷೇಪಿಸುವುದು ನಿಶ್ಚಿತ  ಎಂದು ಸ್ಪಷ್ಟಪಡಿಸಿದರು. ಭಾಗವತ್ ಹೇಳಿಕೆ ಬಗ್ಗೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ   ಅಮಿತ್ ಶಾ   ಅವರಂತವರೂ  ಮೌನ ವಹಿಸಿದರೂ ನಾವು  ಮೌನ ವಹಿಸಲು ಸಾಧ್ಯವಿಲ್ಲ ಎಂದೂ ಶ್ರೀನಿವಾಸ ಪ್ರಸಾದ್ ಎಚ್ಚರಿಕೆ ನೀಡಿದ್ದಾರೆ. ಪರಿಶಿಷ್ಟಜಾತಿಯಲ್ಲಿ  ಒಳ ಮೀಸಲಾತಿ ಕಲ್ಪಿಸಲು  ನಾನು ವಿರೋಧಿಸುವುದಿಲ್ಲ, ಕೆಲವರು ರಾಜಕೀಯ ತೆವಲಿಗಾಗಿ ಒಳ ಮೀಸಲಾತಿ ಕಲ್ಪಿಸುವುದಾಗಿ  ಭರವಸೆ ನೀಡುತ್ತಿದ್ದಾರೆ.  ನ್ಯಾಯಾಲಯ ಇದನ್ನು ಮಾನ್ಯ ಮಾಡುವುದಿಲ್ಲ. ಒಳಮೀಸಲಾತಿಯ ಅನುಷ್ಠಾನಕ್ಕೆ ಸಂವಿಧಾನದ ಮಾನ್ಯತೆ ಬೇಕಿದೆ.  ಇದನ್ನು ವೈಜ್ಞಾನಿಕ ತಳಹದಿಯ ಮೇಲೆ ರೂಪಿಸಬೇಕಿದೆ. ಮೀಸಲಾತಿ ಬಗ್ಗೆ ರಾಷ್ಟ್ರಮಟ್ಟದಲ್ಲಿ    ಮಂಡಲ್ ಆಯೋಗದ ರೀತಿ   ಉನ್ನತ ಮಟ್ಟದ ಆಯೋಗ ರಚಿಸಬೇಕು ಎಂದು ಶ್ರೀನಿವಾಸ ಪ್ರಸಾದ್  ಒತ್ತಾಯಿಸಿದ್ದಾರೆ.