ಲೋಕದರ್ಶನವರದಿ
ಶಿಗ್ಗಾವಿ: ಗಳಿಕೆಯನ್ನ ಬೇರೆ ಬೇರೆ ಪದ್ದತಿಗಳಿಂದ ಮುಂದಿನ ಐದು ವರ್ಷಗಳಲ್ಲಿ ದೇಶದ ಒಟ್ಟು ಆದಾಯ ದ್ವಿಗುಣಗೊಳಿಸುವಂತೆ ದೇಶದ ಪ್ರಧಾನಿ ನರೇಂದ್ರ ಮೋದಿಯವರು ಕರೆ ನೀಡಿದ್ದಾರೆ ಎಂದು ಪಟ್ಟಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಬಿಜೆಪಿ ಸದಸ್ಯತ್ವ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ರಾಜ್ಯ ಬಿಜೆಪಿ ಸಂಘಟನಾ ಕಾರ್ಯದಶರ್ಿ ಅರುಣ್ ಕುಮಾರ ಹೇಳಿದರು.
ದೇಶದ ಆದಾಯ ದ್ವಿಗುಣಗೊಳಿಸುವದರ ಜೊತೆಗೆ ಸದಸ್ಯತ್ವ ಅಭಿಯಾನದ ಮೂಲಕ ನಮ್ಮ ಪಕ್ಷದ ಬೇರುಗಳನ್ನು ಇನ್ನಷ್ಟು ಗಟ್ಟಿಗೊಳಿಸುವಂತಹ ಕೆಲಸ ಮಾಡಬೇಕಾಗಿದೆ. ಆಂತರಿಕ ಪ್ರಜಾಪ್ರಭುತ್ವ ಅನೇಕ ಪಕ್ಷಗಳಲ್ಲಿ ಇಲ್ಲವೇ ಇಲ್ಲ. ವಂಶಪಾರಂಪರಿಕವಾಗಿ ಇನ್ನಾರಿಗೂ ಅವಕಾಶ ಕೊಡದೆ ಎಲ್ಲ ಅವಕಾಶಗಳನ್ನು ತಾವೇ ಕುಟುಂಬಕೊಸ್ಕರ ಇಟ್ಟುಕೊಂಡು ಕೆಲಸ ಮಾಡುತ್ತಿರುವ ಪಕ್ಷಗಳ ಮಧ್ಯೆ ಬಿಜೆಪಿ ಕೆಳಮಟ್ಟದಿಂದ ಸಂಘಟನೆ ಮಾಡುತ್ತಾ ಯಾರಲ್ಲಿ ನಾಯಕತ್ವ ಗುಣ ಮೂಡಿಬರುತ್ತದೆಯೋ ಅವರೆಲ್ಲರಿಗೂ ಅವಕಾಶ ಕಲ್ಪಿಸಿಕೊಡುವ ಕೆಲಸ ಮಾಡುತ್ತದೆ ಎಂದರು.
ಶಾಸಕ ಬಸವರಾಜ ಬೊಮ್ಮಾಯಿ ಮಾತನಾಡಿ, ನಮ್ಮ ನಾಯಕರಾದ ಪ್ರಧಾನಿ ನರೇಂದ್ರ ಮೋದಿ, ಅಮೀತ್ ಶಾ ಅವರು ಈ ದೇಶ ಕಂಡಂತಹ ಇತರೆ ರಾಜಕಾರಣಿಗಳನ್ನು ಹೊರತು ಪಡಿಸಿ ರಾಜಕಾರಣಕ್ಕೆ ಒಂದು ಹೊಸ ಆಯಾಮ ನೀಡಿರುವಂತ ಮಹಾನ ನಾಯಕರಾಗಿದ್ದಾರೆ.
ಬಿಜೆಪಿ ಚುನಾವಣೆಗೆ ಮಾತ್ರ ಸಿಮೀತವಾದ ಪಕ್ಷವಲ್ಲ.
ಶಾಸ್ವತವಾಗಿ ಜನರ ಮನಸ್ಸಿನಲ್ಲಿ ಉಳಿದಿರುವ ಪಕ್ಷ. ದೇಶದ ರಕ್ಷಣೆ, ಅಭಿವೃದ್ಧಿಯ ಜವಾಬ್ದಾರಿ ನಮ್ಮ ಮೇಲೆ ಇದೆ. ಆದ್ದರಿಂದ ನಮ್ಮ ಕಾರ್ಯಕರ್ತರನ್ನು ಸದಾ ಸನ್ನದ್ದರಾಗಿಸಲು ಮತ್ತು ನಮ್ಮ ಪಕ್ಷದ ವ್ಯಾಪ್ತಿಯನ್ನು ಹೆಚ್ಚಿಸುವ ಮತ್ತು ನೈತಿಕ ಬದಲಾವಣೆ ತರುವದಕ್ಕೆ ಹಾಗೂ ಸ್ಥಳೀಯವಾಗಿ ಹೊಸ ಹೊಸ ನಾಯಕತ್ವವನ್ನು ಹುಟ್ಟುಹಾಕುವ ಉದ್ದೇಶದಿಂದ ಸದಸ್ಯತ್ವ ಅಭಿಯಾನ ಆರಂಭಿಸಲಾಗಿದೆ ಎಂದರು.
ಶಾಸಕ ಸಿ.ಎಮ್.ಉದಾಸಿ, ಸಂಸದ ಶಿವಕುಮಾರ ಉದಾಸಿ, ಮಾಜಿ ಸಂಸದ ಮಂಜುನಾಥ ಕುನ್ನೂರ, ನೆಹರೂ ಓಲೆಕಾರ, ಬಿ.ಜಿ.ಬಣಕಾರ, ಶಿವರಾಜ ಸಜ್ಜನ, ರಾಜೇಂದ್ರ ಹಾವೇರಣ್ಣನವರ ಸದಸ್ಯತ್ವ ಅಭಿಯಾನದ ಕುರಿತು ಮಾತನಾಡಿದರು.
ದೇವಣ್ಣ ಚಾಕಲಬ್ಬಿ, ಮಹೇಶ ಸಾಲಿಮಠ, ಶಿವಾನಂದ ರಾಮಗೇರಿ, ಮಲ್ಲೇಶಪ್ಪ ಹರಿಜನ, ವಿಶ್ವನಾಥ ಹರವಿ, ಎನ್.ವಾಯ್ ಪಾಟೀಲ, ಶಿವಾನಂದ ಮ್ಯಾಗೇರಿ, ಪುರಸಭೆ ಸದಸ್ಯರು, ತಾಪಂ ಸದಸ್ಯರು ಹಾಗೂ ಪಕ್ಷದ ಪದಾಧಿಕಾರಿಗಳು ಉಪಸ್ಥಿತರಿದ್ದರು.