ಶಿವಮೊಗ್ಗ, ಆ 11 ರಾಜ್ಯದಲ್ಲಿ ಜನರು ಕಂಡು ಕೇಳರಿಯದಂತಹ ಜಲಪ್ರಳಯ ರಾಜ್ಯದಲ್ಲಿ ಕಂಡುಬಂದಿದ್ದು, ನೋಡ ನೋಡುತ್ತಿದ್ದಂತೆ ಪ್ರವಾಹದ ನೀರು, ರೈತರ, ಜನ ಸಾಮಾನ್ಯರ ಬದುಕನ್ನು ಅಸ್ತವ್ಯಸ್ತಗೊಳಿಸಿದೆ ಎಂದು ಬಿಜೆಪಿ ಹಿರಿಯ ಮುಖಂಡ ಶಾಸಕ ಕೆ ಎಸ್ ಈಶ್ವರಪ್ಪ ಹೇಳಿದ್ದಾರೆ. ತೀರ್ಥಹಳ್ಳಿಯಲ್ಲಿಂದು ನೆರೆ ಹಾನಿ ಪ್ರದೇಶಕ್ಕೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಸಕರ ನೇತೃತ್ವದ ತಂಡ ಕೊಡಗು, ಹಾಸನ, ಶಿವಮೊಗ್ಗ ಜಿಲ್ಲೆಯ ವಿವಿಧ ಪ್ರವಾಹ ಹಾಗೂ ಅತಿವೃಷ್ಟಿ ಸಂತ್ರಸ್ತ ಪ್ರದೇಶಗಳಿಗೆ ಭೇಟಿ ನೀಡಿದ್ದೇವೆ, ಆಯಾ ಜಿಲ್ಲಾಡಳಿತ ಎಲ್ಲಾ ಜಿಲ್ಲೆಗಳಲ್ಲಿ ನಿರೀಕ್ಷೆಗೂ ಪರಿಹಾರ ಹಾಗೂ ನೆರೆ ಸಂತ್ರಸ್ತರಿಗೆ ನೆರವಾಗಿದೆ ಎಂದರು. ಸರ್ಕಾರದ ಮುನ್ನೆಚ್ಚರಿಕೆಯಿಂದಾಗಿ ಹೆಚ್ಚಿನ ಪ್ರಾಣ ಹಾನಿ ಉಂಟಾಗಿಲ್ಲ, ಸರ್ಕಾರದ ಈ ಪ್ರಯತ್ನ ನಿಜಕ್ಕೂ ಸಮಾಧಾನ ತಂದಿದೆ. ಈ ಮಧ್ಯೆ ಅಲ್ಲಲ್ಲಿ ಗುಡ್ಡ ಕುಸಿತ, ಪ್ರವಾಹದಿಂದ ತಪ್ಪಿಸಿಕೊಳ್ಳುವ ಯತ್ನದಲ್ಲಿ ಸಾವು ನೋವು ಸಂಭವಿಸಿದೆ. ಅಂತಹ ಕುಟುಂಬಗಳಿಗೆ ಸರ್ಕಾರದಿಂದ ಪರಿಹಾರ ನೀಡಲಾಗುವುದು. ಕೇಂದ್ರ ಸರ್ಕಾರ 180 ಕೋಟಿ, ರಾಜ್ಯ ಸರ್ಕಾರ 100 ಕೋಟಿ ಅನುದಾನವನ್ನು ಪರಿಹಾರ ಕಾರ್ಯಗಳಿಗೆ ಈಗಾಗಲೇ ಬಿಡುಗಡೆ ಮಾಡಿದೆ ಎಂದು ಅವರು ಹೇಳಿದರು. ತಾತ್ಕಾಲಿಕವಾಗಿ ಸಮಸ್ಯೆ ಪರಿಹರಿಸಲು ಪ್ರಾಮಾಣಿಕ ಕೆಲಸ ಮಾಡಲಾಗುತ್ತಿದೆ. ಶಿವಮೊಗ್ಗ ಜಿಲ್ಲೆಯಲ್ಲಿ 5 ಜನರು ಮೃತಪಟ್ಟಿದ್ದು, 721 ಮನೆಗಳು ಬಿದ್ದಿವೆ, 100 ಕ್ಕೂ ಹೆಚ್ಚು ಜಾನುವಾರುಗಳು ಸಾವನ್ನಪ್ಪಿವೆ, ನೆರೆ ನಿಂತ ಬಳಿಕ ಶಾಶ್ವತ ಪರಿಹಾರಕ್ಕೆ ಸರ್ಕಾರದಿಂದ ಸೂಕ್ತ ಯೋಜನೆ ರೂಪಿಸಲಾಗುವುದು ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಮುಖ್ಯಮಂತ್ರಿಗಳು ಈಗಾಗಲೇ 5 ಸಾವಿರ ಕೋಟಿ ಪರಿಹಾರ ಕೋರಿ ಕೇಂದ್ರಕ್ಕೆ ಮನವಿ ಸಲ್ಲಿಸಿದ್ದಾರೆ. ಸ್ವತಃ ಮುಖ್ಯಮಂತ್ರಿ ಅವರೇ ನೆರೆ ಹಾನಿ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲಿಸುತ್ತಿದ್ದಾರೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತರಾಮನ್ ಸಹ ನೆರೆ ಹಾವಳಿ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕೇಂದ್ರಕ್ಕೆ ವರದಿ ನೀಡಲಿದ್ದಾರೆ. ಇಂದು ಕೇಂದ್ರ ಗೃಹ ಸಚಿವರು ಪ್ರವಾಹ ಪೀಡಿತ ಪ್ರದೇಶಗಳಲ್ಲಿ ವೈಮಾನಿಕ ಸಮೀಕ್ಷೆ ನಡೆಸಲಿದ್ದು, ತಮ್ಮ ತಂಡದ ಪರಿಶೀಲನೆ ನಡೆಸಿದ ವರದಿಯನ್ನು ಶೀಘ್ರದಲ್ಲೇ ಸಕರ್ಾರಕ್ಕೆ ಸಲ್ಲಿಸಲಾಗುವುದು ಎಂದು ಕೆ.ಎಸ್ ಈಶ್ವರಪ್ಪ ತಿಳಿಸಿದರು.