ವಿಜಯವಾಡ, ಜ 16: ಬಿಜೆಪಿ ಮತ್ತು ಜನಸೇನಾ ಪಕ್ಷಗಳ ನಡುವಿನ ಮೈತ್ರಿಯಿಂದ ಮತ್ತೊಮ್ಮೆ ಬಿಜೆಪಿ ಜೊತೆ ಮೈತ್ರಿಮಾಡಿಕೊಳ್ಳುವ ಆಸೆ ಹೊಂದಿದ್ದ ತೆಲುಗುದೇಶಂ ಅಧ್ಯಕ್ಷ ಮತ್ತು ಮಾಜಿ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಅವರಿಗೆ ದೊಡ್ಡ ಹಿನ್ನಡೆಯಾಗಿದೆ.
‘ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ’ ವಿಷಯವಾಗಿ ಮಾತ್ರ ಬಿಜೆಪಿಯೊಂದಿಗೆ ಭಿನ್ನಾಭಿಪ್ರಾಯವಿತ್ತು.’ ಎಂದು ಚಂದ್ರಬಾಬು ನಾಯ್ಡು ಹೇಳಿಕೊಳ್ಳುತ್ತಿದ್ದಾರೆ. ಆದರೆ, ತೆಲುಗುದೇಶಂ ಮೂಲಗಳ ಪ್ರಕಾರ, ಬಿಜೆಪಿ ಮತ್ತು ಜನಸೇನಾ ಎರಡೂ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳಲು ನಾಯ್ಡು ಯತ್ನಿಸುತ್ತಿದ್ದಾರೆ.
ತೆಲುಗು ದೇಶಂ ಪಕ್ಷದೊಂದಿಗೆ ಮತ್ತೆ ಮೈತ್ರಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ ಎಂದು ಆಂಧ್ರಪ್ರದೇಶ ಬಿಜೆಪಿ ಉಸ್ತುವಾರಿ ಸುನಿಲ್ ಡಿಯೋಧರ್ ಗುರುವಾರ ಸ್ಪಷ್ಟಪಡಿಸಿದ್ದಾರೆ. ಬಿಜೆಪಿ -ಜನಸೇನಾ ಮೈತ್ರಿಯೊಂದಿಗೆ ಆಂಧ್ರದಲ್ಲಿ ಮೂರು ಪ್ರಬಲ ಪಕ್ಷಗಳು ಅಸ್ತಿತ್ವದಲ್ಲಿವೆ.
‘ಆಂಧ್ರದಲ್ಲಿ ಬಿಜೆಪಿ, ಟಿಡಿಪಿಯೊಂದಿಗೆ ಯಾವುದೇ ರಾಜಕೀಯ ಸಂಬಂಧಗಳನ್ನು ಹೊಂದಿಲ್ಲ.’ ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಜಿವಿಎಲ್ ನರಸಿಂಹರಾವ್ ಹೇಳಿದ್ದಾರೆ. 2014ರ ಚುನಾವಣೆಯಲ್ಲಿ ಟಿಡಿಪಿ, ಜನಸೇನಾ ಮತ್ತು ಬಿಜೆಪಿ ಮೈತ್ರಿಕೂಟ 175 ವಿಧಾನಸಭಾ ಕ್ಷೇತ್ರಗಳ ಪೈಕಿ 105 ಸ್ಥಾನಗಳನ್ನು ಗೆದ್ದಿತ್ತು. ಆದರೆ, ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡಲು ಬಿಜೆಪಿ ಸರ್ಕಾರ ನಿರಾಕರಿಸಿದ್ದರಿಂದ ಚಂದ್ರಬಾಬು ನಾಯ್ಡು ಎನ್‍ಡಿಎ ತೊರೆದಿದ್ದರು. 2019ರ ವಿಧಾನಸಭಾ ಚುನಾವಣೆಯಲ್ಲಿ ಕೇವಲ 23 ಸ್ಥಾನಗಳನ್ನು ಗೆಲ್ಲುವ ಮೂಲಕ ಭಾರಿ ಹಿನ್ನಡೆ ಕಂಡಿದ್ದರು. ಅಲ್ಲದೆ ಲೋಕಸಭೆ ಚುನಾವಣೆಯಲ್ಲೂ ಟಿಡಿಪಿ ರಾಜ್ಯದ 23 ಲೋಕಸಭಾ ಸ್ಥಾನಗಳ ಪೈಕಿ ಕೇವಲ 3 ಸ್ಥಾನಗಳನ್ನು ಗೆದ್ದಿತ್ತು. ಈ ಹಿನ್ನೆಲೆಯಲ್ಲಿ ಬಿಜೆಪಿಯೊಂದಿಗೆ ಮರುಮೈತ್ರಿ ಮಾಡಿಕೊಳ್ಳುವಂತೆ ಟಿಡಿಪಿ ನಾಯಕರು ಚಂದ್ರಬಾಬು ನಾಯ್ಡು ಮೇಲೆ ಒತ್ತಡ ಹೇರಿದ್ದಾರೆ ಎಂದು ಮೂಲಗಳು ತಿಳಿಸಿವೆ.