ಬೆಂಗಳೂರು, ಜು.1: ಕೇಂದ್ರ ಸರ್ಕಾರದ ಒಂದು ವರ್ಷದ ಸಾಧನೆ ಹಾಗೂ ಕೋವಿಡ್-19ರ
ಬಗ್ಗೆ ಜನ ಸಂಪರ್ಕ ಅಭಿಯಾನ ನಡೆಸಿ ಆ ಮೂಲಕ ರಾಜ್ಯಾದ್ಯಂತ ಮನೆ - ಮನೆ ಸಂಪರ್ಕ ಹಾಗೂ ಸಾಮಾಜಿಕ ಜಾಲತಾಣಗಳ
ಮೂಲಕ ಜನಜಾಗೃತಿ ಮೂಡಿಸಬೇಕೆಂಬ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರ ಕರೆಯ ಮೇರೆಗೆ ರಾಜ್ಯದಲ್ಲಿ
ಜೂನ್ 7ರಿಂದ 30ರವರೆಗೆ 23 ದಿನಗಳ ಕಾಲ ಮನೆ ಮನೆ ಸಂಪರ್ಕ ಹಾಗೂ ವಿಡಿಯೋ ಕಾನ್ಫರೆನ್ಸ್ ಮತ್ತು ವರ್ಚ್ಯುವಲ್
ರಾಲಿಗಳನ್ನು ನಡೆಸಲಾಗಿದೆ ಎಂದು ರಾಜ್ಯ ಬಿಜೆಪಿ ಕಾರ್ಯದರ್ಶಿ, ವಿಧಾನ ಪರಿಷತ್ ಸದಸ್ಯ ಎನ್.ರವಿ ಕುಮಾರ್
ತಿಳಿಸಿದ್ದಾರೆ.
ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಒಟ್ಟು 427 ವರ್ಚ್ಯುವಲ್ ರಾಲಿ ನಡೆಸಲಾಗಿದೆ, ಈ ಪೈಕಿ ರಾಜ್ಯಮಟ್ಟದ ಒಂದು ರಾಲಿಯಲ್ಲಿ 9,50,000 ಜನರು ಭಾಗವಹಿಸಿದ್ದರು. ಜಿಲ್ಲಾಮಟ್ಟದ 35 ಕಾನ್ಫರೆನ್ಸ್ನಲ್ಲಿ 8725 ಮಂದಿ, ಮಂಡಲ ಮಟ್ಟದ 266 ವಿಡೀಯೋ ಕಾನ್ಫರೆನ್ಸ್ನಲ್ಲಿ 35280 ಮಂದಿ, ರಾಜ್ಯ ಮೋರ್ಚಾದ 97 ರಾಲಿಗಳಲ್ಲಿ 29100 ಮಂದಿ, ರಾಜ್ಯ ಫಲಾನುಭವಿಗಳ 28 ರಾಲಿಗಳಲ್ಲಿ 28421 ಮಂದಿ ಸೇರಿ ಒಟ್ಟು ಎಲ್ಲಾ ರಾಲಿಗಳಲ್ಲಿ 10,51,526 ಮಂದಿ ಪಾಲ್ಗೊಂಡಿದ್ದರು ಎಂದು ರವಿಕುಮಾರ್ ಮಾಹಿತಿ ನೀಡಿದರು.ಮನೆ ಸಂಪರ್ಕ ಕಾರ್ಯಕ್ರಮದಲ್ಲಿ 42,83,069 ಮಂದಿಯನ್ನು ಹಾಗೂ ಸ್ವದೇಶಿ ಸಂಕಲ್ಪ ಕಾರ್ಯಕ್ರಮದಲ್ಲಿ 37,00,000 ಮನೆಗಳನ್ನು ಸಂಪರ್ಕಿಸಲಾಗಿದೆ ಎಂದು ತಿಳಿಸಿದರು.
ಕೇಂದ್ರ ಸರ್ಕಾರದ ಒಂದು ವರ್ಷದ ಸಾಧನೆ
ಮತ್ತು ಕೋವಿಡ್-19ರ ಬಗ್ಗೆ ಜಾಗೃತಿ ಅಭಿಯಾನದ ಸಂದರ್ಭದಲ್ಲಿ ರಾಜ್ಯದಲ್ಲಿ 427 ರಾಲಿಗಳು ನಡೆದಿದ್ದು,
10,51,526 ಮಂದಿ ಭಾಗವಹಿಸಿದ್ದಾರೆ. ಅಭಿಯಾನದಲ್ಲಿ ಭಾಷಣಕಾರರಾಗಿ ರಾಷ್ಟ್ರೀಯ ಬಿಜೆಪಿ ಅಧ್ಯಕ್ಷ
ಜೆ.ಪಿ.ನಡ್ಡಾ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ರಾಜ್ಯಾಧ್ಯಕ್ಷ ನಳಿನ ಕುಮಾರ್ ಕಟೀಲ್, ಕೇಂದ್ರ
ಸಚಿವರಾದ ಪ್ರಲ್ಹಾದ್ ಜೋಷಿ, ಡಿ.ವಿ.ಸದಾನಂದ ಗೌಡ ಭಾಗವಹಿಸಿದ್ದರು. ಉಳಿದಂತೆ ಜಿಲ್ಲಾ ವಿಡೀಯೋ ಕಾನ್ಫರೆನ್ಸ್ಗಳಲ್ಲಿ
ಕೇಂದ್ರ ಸಚಿವರಾದ ಸುರೇಶ್ ಅಂಗಡಿ, ಪ್ರಲ್ಹಾದ್ ಜೋಷಿ, ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ, ಡಾ.ಅಶ್ವತ್ಥ
ನಾರಾಯಣ, ಲಕ್ಷ್ಮಣ ಸವದಿ, ಸಚಿವರಾದ ಕೋಟಾ ಶ್ರೀನಿವಾಸ ಪೂಜಾರಿ, ಸಿ.ಟಿ.ರವಿ, ಶಶಿಕಲಾ ಜೊಲ್ಲೆ, ಆರ್.ಅಶೋಕ,
ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಅರುಣ್ ಕುಮಾರ್
ಮತ್ತಿತರ ನಾಯಕರು ಭಾಗವಹಿಸಿದ್ದರು ಎಂದು ತಿಳಿಸಿದರು.
ಕೇಂದ್ರ ಸರ್ಕಾರದ ನೇರ ಫಲಾನುಭವಿಗಳಾದ
ರೈತರು, ಕಾರ್ಮಿಕರು ಹಾಗೂ ಮಹಿಳಾ ಫಲಾನುಭವಿಗಳ ವಿಡಿಯೋ ಕಾನ್ಫರೆನ್ಸ್ಗಳನ್ನು ಆಯೋಜಿಸಲಾಗಿತ್ತು.
ಈ ಕಾನ್ಫರೆನ್ಸ್ಗಳಲ್ಲಿ ರಾಜ್ಯದ ವಿವಿಧೆಡೆಯಿಂದ 28,421 ಫಲಾನುಭವಿಗಳು ಭಾಗಿಯಾಗಿದ್ದರು. ಇದರ ಜೊತೆಗೆ
ಆಟೋ ಚಾಲಕರು, ಟ್ಯಾಕ್ಸಿ ಚಾಲಕರು, ಸಣ್ಣ ಕೈಗಾರಿಕೆಗಳ ಮಾಲೀಕರ ವಿಡಿಯೋ ಕಾನ್ಫರೆನ್ಸ್ಗಳನ್ನೂ ಹಮ್ಮಿಕೊಳ್ಳಲಾಗಿತ್ತು.
ರಾಜ್ಯದಲ್ಲಿ ಒಟ್ಟು 427 ವಿಡೀಯೋ ಕಾನ್ಫರೆನ್ಸ್ ಗಳು ನಡೆದಿದ್ದು, ಅದರಲ್ಲಿ 176 ಗಂಟೆ 45 ನಿಮಿಷಗಳ
ಕಾಲ ವಿಡಿಯೋ ಕಾನ್ಫರೆನ್ಸ್ ಗಳಲ್ಲಿ ಚರ್ಚಿಸಲಾಗಿದೆ. ರಾಜ್ಯದಲ್ಲಿ 728 ಆಡಿಯೋ ಕಾನ್ಫರೆನ್ಸ್ ಗಳನ್ನು
ನಡೆಸಲಾಗಿದೆ. ಇದರಲ್ಲಿ 17495 ಮಂದಿ ಭಾಗಿಯಾಗಿದ್ದರು. 111 ಗಂಟೆ 21 ನಿಮಿಷಗಳ ಕಾಲ ಚರ್ಚಿಸಲಾಗಿದೆ
ಎಂದು ತಿಳಿಸಿದರು.
ಜನ ಸಂಪರ್ಕ ಅಭಿಯಾನದಲ್ಲಿ 42,83,069
ಮನೆಗಳನ್ನು ಸಂಪರ್ಕಿಸಲಾಗಿದೆ. 1 ಕೋಟಿ 29 ಲಕ್ಷ ಜನರನ್ನು ಮನೆಗಳಲ್ಲಿ ಭೇಟಿ ಮಾಡಿ ಕರಪತ್ರ ನೀಡಿ
ಕೇಂದ್ರ ಸರ್ಕಾರದ ಒಂದು ವರ್ಷದ ಸಾಧನೆ ಮತ್ತು ಕೋವಿಡ್ ಬಗ್ಗೆ ಜಾಗೃತಿ ಮೂಡಿಸಲಾಗಿದೆ. ಅದೇ ರೀತಿ
ಸಾಮಾಜಿಕ ಜಾಲತಾಣದ ಮೂಲಕ ಸುಮಾರು 11 ಲಕ್ಷ ಜನರನ್ನು ತಲುಪಲಾಗಿದೆ. ಒಟ್ಟು 1 ಕೋಟಿ 40 ಲಕ್ಷ ಜನರನ್ನು
ಜನ ಸಂಪರ್ಕ ಅಭಿಯಾನದಲ್ಲಿ ತಲುಪಲಾಗಿದೆ.
5,13,035 ಜನ ಕಾರ್ಯಕರ್ತರು 23 ದಿನಗಳ ಅಭಿಯಾನದಲ್ಲಿ
ತಮ್ಮನ್ನು ತೊಡಗಿಸಿಕೊಂಡಿದ್ದಾರೆ ಎಂದು ತಿಳಿಸಿದರು.
ರಾಜ್ಯಾದ್ಯಂತ ನಡೆದ ಕೇಂದ್ರ ಸರ್ಕಾರದ ಒಂದು ವರ್ಷದ ಸಾಧನೆ ಕುರಿತ ಜಾಗೃತಿ ಅಭಿಯಾನದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ನೀಡಿದ ಕರೆಯಂತೆ ಭಾರತ ಸ್ವಾವಲಂಬಿಯಾಗಬೇಕಾದರೆ ನಾವೆಲ್ಲರೂ ಸ್ವದೇಶಿ ವಸ್ತುಗಳನ್ನು ಉಪಯೋಗಿಸಬೇಕು. ಈ ಮೂಲಕ ಹೆಚ್ಚೆಚ್ಚು ಸ್ಥಾನೀಯ ಜನರಿಗೆ ಉದ್ಯೋಗ ಲಭಿಸುವಂತೆ ಆಗಬೇಕು. ಲೋಕಲ್ ವಸ್ತುಗಳನ್ನು ಬ್ರಾಂಡಿಂಗ್ ಮಾಡಬೇಕು ಎಂದು ಅಭಿಯಾನದ ಸಂದರ್ಭದಲ್ಲಿ 37 ಲಕ್ಷಕ್ಕಿಂತ ಹೆಚ್ಚು ಮನೆಗಳಲ್ಲಿ ಸಂಕಲ್ಪ ಮಾಡಿಸಲಾಗಿದೆ ಎಂದು ತಿಳಿಸಿದರು. ರಾಜ್ಯದಲ್ಲಿ ನಡೆದ ಜನಸಂಪರ್ಕ ಅಭಿಯಾನದ ಸಮಾರೋಪ ಸಮಾರಂಭ ಜುಲೈ 4ರಂದು ಸಂಜೆ 5 ಗಂಟೆಗೆ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ 50 ಲಕ್ಷ ಜನರು ಭಾಗವಹಿಸುವ ಗುರಿ ಇಟ್ಟುಕೊಳ್ಳಲಾಗಿದೆ. ಈ ವರ್ಚ್ಯುವಲ್ ರಾಲಿಯಲ್ಲಿ ಭಾಷಣಕಾರರಾಗಿ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್, ಮುಖ್ಯ ಅತಿಥಿಗಳಾಗಿ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ, ದಿಕ್ಸೂಚಿ ಭಾಷಣವನ್ನು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪಿ.ಮುರಳೀಧರ ರಾವ್, ಅಧ್ಯಕ್ಷತೆಯನ್ನು ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಭಾಗವಹಿಸಲಿದ್ದಾರೆ. ಕಾರ್ಯಕ್ರಮಕ್ಕೆ ಫೇಸ್ಬುಕ್, ಟ್ವೀಟರ್, ಎಸ್ಎಂಎಸ್, ಆಡಿಯೋ ಕರೆ, ಯ್ಯೂಟೂಬ್ ಇತ್ಯಾದಿಗಳ ಮೂಲಕ ಆನ್ಲೈನ್ ರಾಲಿಯನ್ನು ನಡೆಸಲಾಗುತ್ತದೆ ಎಂದು ಹೇಳಿದರು.
ನಿನ್ನೆ ಪ್ರಧಾನಿಗಳು ಗರೀಬ್ ಕಲ್ಯಾಣ್ ಯೋಜನೆಯ ವಿಸ್ತರಣೆ ಬಗ್ಗೆ ಘೋಷಿಸಿದ್ದಾರೆ. ಯೋಜನೆಯನ್ನು ನವೆಂಬರ್ ವರೆಗೆ ಯೋಜನೆ ವಿಸ್ತರಿಸಲಾಗಿದೆ. ಹಸಿವಿನಿಂದ ಜನ ಇರಬಾರದೆಂದು ಯೋಜನೆ ವಿಸ್ತರಣೆ ಮಾಡಿದ್ದು, ರಾಜ್ಯದ ಜನತೆಯ ಪರವಾಗಿ ಪ್ರಧಾನಿಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು. ಒನ್ ನೇಷನ್ ಒನ್ ಕಾರ್ಡ್ ಯೋಜನೆ ಜಾರಿಗೆ ಬರಲಿದ್ದು, ಇದರ ಅನುಷ್ಠಾನಕ್ಕೆ ಸಮಯ ಹಿಡಿಯಲಿದೆ. ಅಲ್ಲಿಯವರೆಗೂ ಅನಾನುಕೂಲತೆ ಆಗದಿರಲೆಂದು ಗರೀಬ್ ಕಲ್ಯಾಣ್ ಯೋಜನೆ ವಿಸ್ತರಣೆ ಮಾಡಲಾಗಿದೆ. ಯೋಜನೆಗೆ 90 ಸಾವಿರ ಕೋಟಿ ರೂ ವೆಚ್ಚ ಮಾಡಲಾಗುತ್ತಿದೆ. ಇದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.