ಬೆಂಗಳೂರು,ಮಾ.11, ಸಚಿವ ಡಾ.ಕೆ. ಸುಧಾಕರ್ ಮತ್ತು ಕಾಂಗ್ರೆಸ್ ಶಾಸಕ, ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರ ನಡುವೆ ನಿನ್ನೆ ನಡೆದ ಜಟಾಪತಿ ಹಾಗೂ ಮಾತಿನ ಚಕಮಕಿ ವಿಷಯ ಇಂದು ವಿಧಾನಸಭಾ ಅಧಿವೇಶನದಲ್ಲಿ ಪ್ರತಿಧ್ವನಿಸಿ ಗದ್ದಲ ಉಂಟಾದುದರಿಂದ ಬೆಳಗಿನ ಕಲಾಪವನ್ನು ಸ್ಪೀಕರ್ ಎರಡು ಬಾರಿ ಮುಂದೂಡಬೇಕಾಯಿತು. ಬೆಳಗ್ಗೆ ಕಲಾಪ ಆರಂಭಗೊಳ್ಳುತ್ತಿದ್ದಂತೆ ಸಿದ್ದರಾಮಯ್ಯ ಅವರು ತಾವು ನಿನ್ನೆ ಸಲ್ಲಿಸಿರುವ ಹಕ್ಕುಚ್ಯುತಿ ನೋಟಿಸ್ ನಡಿ ವಿಷಯ ಪ್ರಸ್ತಾಪಿಸಲು ಅವಕಾಶ ನೀಡಬೇಕು ಎಂದು ಮನವಿ ಮಾಡಿದರು.ಆಗ ಸಚಿವ ಈಶ್ವರಪ್ಪ, ಕೀಳು ಭಾಷೆ ಬಳಿಸಿದ ರಮೇಶ್ ಕುಮಾರ್ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದರು. ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ಉಭಯ ಕಡೆಯವರಿಂದಲೂ ತಮಗೆ ಹಕ್ಕುಚ್ಯುತಿ ನೋಟಿಸ್ ತಲುಪಿದೆ. ತಾವು ನಿಯಮಾವಳಿ ಪ್ರಕಾರ ಪ್ರಶ್ನೋತ್ತರ ಅವಧಿ ಮುಗಿದ ನಂತರ ಮಾತನಾಡಲು ಇಬ್ಬರಿಗೂ ಅವಕಾಶ ಮಾಡಿಕೊಡುತ್ತೇನೆ ಎಂದು ಭರವಸೆ ನೀಡಿದರು.ಆಗ ಸಿದ್ದರಾಮಯ್ಯ, ತಾವು ಹಿಂದಿನ ದಿನವೇ ನೋಟಿಸ್ ನೀಡಿದ್ದು, ತಮಗೆ ಈಗಲೇ ಮಾತನಾಡಲು ಅವಕಾಶ ನೀಡಬೇಕು ಎಂದು ಒತ್ತಾಯಿಸಿದರು.
ಪ್ರಶ್ನೋತ್ತರ ಅವಧಿ ಮುಗಿದ ನಂತರ ಅವಕಾಶ ನೀಡುತ್ತೇನೆ ಎಂದು ಸ್ಪೀಕರ್ ಹೇಳಿದಾಗ, ಅದಕ್ಕೆ ಒಪ್ಪಿ ಕುಳಿತುಕೊಂಡರು.ಇದನ್ನೊಪ್ಪದ ಬಿಜೆಪಿ ಸದಸ್ಯರು ತಮ್ಮ ಪಟ್ಟು ಮುಂದುವರಿಸಿ, ಸದನದಿಂದ ಒಂದು ದಿನದ ಮಟ್ಟಿಗಾದರೂ ರಮೇಶ್ ಕುಮಾರ್ ಅವರನ್ನು ಅಮಾನತು ಮಾಡಬೇಕು ಎಂದು ಪುನರುಚ್ಚರಿಸಿದರು.ಜೊತೆಗೆ, ಸದನದಲ್ಲಿ ಹಾಜರಿಲ್ಲದ ರಮೇಶ್ ಕುಮಾರ್ ಅವರು ಓರ್ವ ಪಲಾಯನವಾದಿ. ಅವರನ್ನು ಹುಡುಕಿ ಕರೆತಂದು ಅಮಾನತು ಮಾಡಿ ಎಂದು ರೇಣುಕಾಚಾರ್ಯ ಸೇರಿದಂತೆ ಇತರ ಬಿಜೆಪಿ ಸದಸ್ಯರು ಒತ್ತಾಯಿಸಿದರು. ಎರಡೂ ಪಕ್ಷಗಳ ಸದಸ್ಯರ ಗದ್ದಲ ಮುಂದುವರಿದಾಗ ಸ್ಪೀಕರ್ ಕಲಾಪವನ್ನು 15 ನಿಮಿಷಗಳ ಕಾಲ ಮುಂದೂಡಿದರು. ನಂತರ 12.55ಕ್ಕೆ ಕಲಾಪ ಪುನಾರಂಭಗೊಂಡಾಗಲೂ ಸಿದ್ದರಾಮಯ್ಯ ಮಾತನಾಡಲು ಅವಕಾಶ ಕೋರಿದರು. ಅದಕ್ಕೆ ಬಿಜೆಪಿ ಸದಸ್ಯರು ಒಪ್ಪದೆ ಗದ್ದಲ ಸೃಷ್ಟಿಸಿದರು. ಎರಡೂ ಪಕ್ಷಗಳ ಸದಸ್ಯರನ್ನು ಸಮಾಧಾನಪಡಿಸಲು ಸ್ಪೀಕರ್ ಪ್ರಯತ್ನಿಸಿದರಾದರೂ, ಅದು ಸಫಲವಾದ ಹಿನ್ನೆಲೆಯಲ್ಲಿ ಸ್ಪೀಕರ್ ಕಲಾಪವನ್ನು ಮಧ್ಯಾಹ್ನ ಮೂರು ಗಂಟೆಗೆ ಮುಂದೂಡಿದರು. ಕಲಾಪ ಮುಂದೂಡಿಕೆಯಾದ ಮೇಲೂ ಉಭಯ ಪಕ್ಷಗಳ ಸದಸ್ಯರು ಪರಸ್ಪರ ಆರೋಪ, ಪ್ರತ್ಯಾರೋಪದಲ್ಲಿ ತೊಡಗಿದ್ದು ಕಂಡುಬಂತು.