ಬೆಂಗಳೂರು, ಮಾ 25 : ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಲ್ಲಿ ಕಳೆದ ಐದು ವರ್ಷಗಳಿಂದ ಉತ್ತಮ ಸಾಧನೆ ಮಾಡಿದ್ದು, ಜತೆಗೆ ಪ್ರಧಾನಿ ಮೋದಿ ನೇತೃತ್ವದ ಎನ್.ಡಿ.ಎ ಸರ್ಕಾರದ ಸಾಧನೆಯಿಂದಾಗಿ ಕಳೆದ ಬಾರಿಗಿಂತ ಹೆಚ್ಚು ಅಂತರದ ಗೆಲುವು ಸಾಧಿಸುವುದಾಗಿ ಕೇಂದ್ರ ಸಚಿವ ಡಿ.ವಿ ಸದಾನಂದಗೌಡ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ನಗರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಪತ್ನಿ ಡಾಟಿ, ಮತ್ತು ಪಕ್ಷದ ಮುಖಂಡರ ಜತೆ ತೆರಳಿ ಬೆಂಗಳೂರು ಉತ್ತರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಉಮೇದುವಾರಿಕೆ ಸಲ್ಲಿಕೆ ಮಾಡಿದ ನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು, ಅತಿ ಹೆಚ್ಚು ಅಂತರದಿಂದ ಗೆಲ್ಲುತ್ತೇನೆ. ಆದರೆ ಈ ಬಗ್ಗೆ ಅತಿಯಾದ ಆತ್ಮ ವಿಶ್ವಾಸ ಹೊಂದಿಲ್ಲ ಎಂದರು.
ನಾಮಪತ್ರ ಸಲ್ಲಿಸುವ ಮುನ್ನ ಕ್ಷೇತ್ರದಲ್ಲಿ ಪ್ರವಾಸ ಕೈಗೊಂಡಿದ್ದು ಮಾತ್ರವಲ್ಲ, ಫೆ.3 ರಂದು ನಮ್ಮ ಉತ್ತರ ಕ್ಷೇತ್ರದ ಮುಖಂಡರ ಸಭೆ ನಡೆಸಿದ್ದೆ. ಮುನಿರಾಜುಗೌಡ, ಡಾ.ಅಶ್ವತ್ಥನಾರಾಯಣ, ನಾರಾಯಣಸ್ವಾಮಿ ಸೇರಿ ಆ ಭಾಗದ ಮುಖಂಡರು ಪಾಲ್ಗೊಂಡಿದ್ದರು. ಅಂದಿನಿಂದ ನಿರಂತರವಾಗಿ ಪಕ್ಷದ ಕಾರ್ಯಕರ್ತರ ಜೊತೆ ಬೂತ್ ಮಟ್ಟದಿಂದ ಹಿಡಿದು, ಮಂಡಲ್, ಕ್ಷೇತ್ರ ಮಟ್ಟದ ಸಭೆಗಳನ್ನು ಬೇರೆ ಬೇರೆ ಹಂತದಲ್ಲಿ ಮಾಡಿದ್ದೇವೆ, ವಾತಾವರಣ ಚನ‌್ನಾಗಿದೆ, ಮೋದಿ ಸಾಧನೆ ಈ ಚುನಾವಣೆಯಲ್ಲಿ ವಿಶೇಷ ಶಕ್ತಿ ಕೊಟ್ಟಿದೆ ಎಂದರು.
ಮೋದಿ ಮತ್ತೆ ಪ್ರಧಾನಿ ಆಗಬೇಕು ಎಂದು ಸಾಮಾನ್ಯ ಜನ ಬಯಸುತ್ತಿದ್ದಾರೆ. ಕಾರ್ಯಕರ್ತರು, ಜನರ ಜೊತೆ ಐದು ವರ್ಷ ಅಂತಃಕರಣ ಮತ್ತು ಆತ್ಮ ಸಾಕ್ಷಿಯಿಂದ ಕೆಲಸ ಮಾಡಿದ್ದೇನೆ. ಮೋದಿ ಪ್ರಧಾನಿಯಾಗಬೇಕು ಅದಕ್ಕಾಗಿ ಸದಾನಂದಗೌಡರಿಗೆ ಮತ ಎನ್ನುವ ಅಪೇಕ್ಷೆ ಸಾಮಾನ್ಯ ಜನರಿಂದ ವ್ಯಕ್ತವಾಗುತ್ತಿದೆ. ಹಾಗಾಗಿ ಕಳೆದ ಬಾರಿಗಿಂತ ಉತ್ತಮ ವಾತಾವರಣ ನಮಗೆ ಇದೆ. ಕಾರ್ಯಕರ್ತರು ಕೂಡ ಅದಕ್ಕಾಗಿ ಚನ್ನಾಗಿ ತಯಾರಿ ನಡೆಸಿದ್ದಾರೆ. ನಮ್ಮ ನಾಯಕರು ಚುನಾವಣೆಯನ್ನು ಅತ್ಯಂತ ವ್ಯವಸ್ಥಿತವಾಗಿ ಎದುರಿಸಲು ಕಾರ್ಯತಂತ್ರ ರೂಪಿಸಿದ್ದಾರೆ. ಕಳೆದ ಬಾರಿಗಿಂತ ಹೆಚ್ಚು ಅಂತರದ ಗೆಲುವು ಸಿಗಲಿದೆ. ಇದು ಅತಿಯಾದ ಆತ್ಮ ವಿಶ್ವಾಸವಲ್ಲ. ಕ್ಷೇತ್ರದ ಮತದಾರರ ನಾಡಿ ಮಿಡಿತ ಎಂದರು.
ನಮ್ಮ ಕ್ಷೇತ್ರದಲ್ಲಿ ಎದುರಾಳಿ ಇನ್ನೂ ಬಂದಿಲ್ಲ, ಅವರು ಯಾರು ಎಂದು ಗೊತ್ತಿಲ್ಲ, ಮೈತ್ರಿ ಅಭ್ಯರ್ಥಿ ಯಾರು ಎಂದು ಗೊತ್ತಾದ ನಂತರ ನಾಮಪತ್ರ ಹಿಂಪಡೆಯುವ ಕಾಲಾವಕಾಶ ಮುಕ್ತಾಯದ ಬಳಿಕ ನಮ್ಮ ನಾಯಕರು ಕುಳಿತು ಚರ್ಚೆ ಮಾಡು ನಮ್ಮ ಮುಂದಿನ ರಾಜಕೀಯ ತಂತ್ರಗಾರಿಕೆ ಸಿದ್ದಪಡಿಸಲಿದ್ದೇವೆ ಎಂದರು.