ಮುಂಬೈ, ಅ 14: ಒಂದು ಕಾಲದಲ್ಲಿ ಕ್ರಿಕೆಟ್ ಸಾಮ್ರಾಜ್ಯ ಆಳಿದ್ದ ದಾದಾ ಖ್ಯಾತಿಯ ಸೌರವ್ ಗಂಗೂಲಿ ಅವರು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಅಧ್ಯಕ್ಷ ರಾಗುವುದು ಬಹುತೇಕ ಖಚಿತ ಎನ್ನಲಾಗುತ್ತಿದ್ದು ವೃತ್ತಿ ಜೀವನದ ಮತ್ತೊಂದು ಇನಿಂಗ್ಸ್ ಶುರು ಮಾಡಲಿದ್ದಾರೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಚುನಾವಣೆಗೆ ಸಂಬಂಧಪಟ್ಟಂತೆ ಮುಂಬಯಿಯಲ್ಲಿ ನಡೆದ ಹಲವು ಸುತ್ತುಗಳ ಮಾತುಕತೆಗಳ ಬಳಿಕ ಭಾರತ ಕ್ರಿಕೆಟ್ ತಂಡದ ಮಾಜಿ ಯಶಸ್ವಿ ನಾಯಕ ಸೌರವ್ ಗಂಗೂಲಿ ಮುಂದಿನ ಅವಧಿಗೆ ಬಿಸಿಸಿಐ ಅಧ್ಯಕ್ಷರಾಗಿ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ ಎನ್ನಲಾಗಿದೆ. ಸುಪ್ರೀಂ ಕೋರ್ಟ್ ನೇಮಿತಿ ಆಡಳಿತಾತ್ಮಕ ಸಮಿತಿ ಅಕ್ಟೋಬರ್ 23ರಂದು ಬಿಸಿಸಿಐ ಪದಾಧಿಕಾರಿಗಳಿಗೆ ಅಧಿಕಾರ ಹಸ್ತಾಂತರ ಮಾಡಲಿದ್ದು, ಸೌರವ್ ಗಂಗೂಲಿ ಬಿಸಿಸಿಐ ಅಧ್ಯಕ್ಷ ಹಾಗೂ ಕರ್ನಾಟಕದ ಬ್ರಿಜೇಶ್ ಪಟೇಲ್ ಐಪಿಎಲ್ ಮುಖ್ಯಸ್ಥರಾಗಿ ಆಯ್ಕೆಯಾಗುವುದು ಖಚಿತವೆನಿಸಿದೆ. ಅರುಣ್ ಧುಮಾಲ್ ನೂತನ ಖಜಾಂಜಿಯಾಗುವುದು ಎನ್ನಲಾಗಿದೆ. ಧುಮಾಲ್ ಬಿಸಿಸಿಐನ ಮಾಜಿ ಅಧ್ಯಕ್ಷರೂ, ಕೇಂದ್ರ ಸರಕಾರದಲ್ಲಿ ಹಾಲಿ ಹಣಕಾಸು ಖಾತೆ ರಾಜ್ಯ ಸಚಿವರೂ ಆಗಿರುವ ಅನುರಾಗ್ ಠಾಕೂರ್ ಅವರ ಕಿರಿಯ ಸಹೋದರ. ಬ್ರಿಜೇಶ್ ಪಟೇಲ್ ಭಾರತ ತಂಡದ ಪರ 21 ಟೆಸ್ಟ್ ಆಡಿದ್ದರು. ಟೆಸ್ಟ್ ಕ್ರಿಕೆಟ್ನಲ್ಲಿ ಅವರಿಗೆ ಹೆಚ್ಚಿನ ಯಶಸ್ಸು ದೊರೆತಿರಲಿಲ್ಲ. ಆದರೆ ಮೊದಲ ದರ್ಜೆ ಕ್ರಿಕೆಟ್ನಲ್ಲಿ ಕರ್ನಾಟಕ ತಂಡದ ಅವಿಭಾಜ್ಯ ಅಂಗವಾಗಿದ್ದರು. ಅಲ್ಲದೇ, ಹಲವು ವರ್ಷಗಳ ಕಾಲ ಕರ್ನಾಟಕ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ಹಲವಾರು ನಾಯಕೀಯ ಬೆಳವಣಿಗೆಗಳ ಬಳಿಕ ಸೌರವ್ ಗಂಗೂಲಿ ಅಧ್ಯಕ್ಷ ಗಾದಿಗೇರಲು ವೇದಿಕೆ ಸಿದ್ಧಗೊಂಡಿದೆ. ಅನುರಾಗ್ ಠಾಕೂರ್ ಹಾಗೂ ಎನ್ ಶ್ರೀನಿವಾಸ್ ನಿಕಟ ಪೈಪೋಟಿ ಎದುರಾಗಿದ್ದರೂ ಅಂತಿಮವಾಗಿ ದಾದಾ ಅಧ್ಯಕ್ಷಗಾದಿಗೆ ಹಾದಿ ಸುಗಮಗೊಂಡಿದೆ.