ಬೆಂಗಳೂರು, ಬಿಬಿಎಂಪಿ ವ್ಯಾಪ್ತಿಯಲ್ಲಿ ಇಂದಿರಾ ಕ್ಯಾಂಟೀನ್ ಮುಚ್ಚುವ ಪರಿಸ್ಥಿತಿ ಎದುರಾದರೆ ಬಡ ಜನರಿಗೆ ರಿಯಾಯಿತಿ ದರದಲ್ಲಿ ಊಟ, ಉಪಹಾರ ನೀಡುವ ಇಂದಿರಾ ಕ್ಯಾಂಟಿನ್ ಗಳನ್ನು ಬಿಬಿಎಂಪಿ ನಡೆಸಲಿದೆ ಎಂದು ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್ ಸ್ಪಷ್ಟವಾಗಿ ಹೇಳಿದ್ದಾರೆ.
ಉತ್ತರ ಕರ್ನಾಟಕ ಪ್ರವಾಹ ಸಂತ್ರಸ್ತರಿಗೆ ಚಿಕಿತ್ಸೆ ನೀಡುವ ಉದ್ದೇಶದಿಂದ ಹೋಮಿಯೋ ಕೇರ್ ಸಂಸ್ಥೆ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದಿರಾ ಕ್ಯಾಂಟಿನ್ ನಡೆಸಲು ಸರ್ಕಾರ ಹಣ ನೀಡಲು ಸಾಧ್ಯವೇ ಇಲ್ಲ ಎಂದರೆ ಪಾಲಿಕೆಯೇ ಇಂದಿರಾ ಕ್ಯಾಂಟೀನ್ ನಡೆಸುತ್ತದೆ. ಈ ಬಗ್ಗೆ ಅನುಮಾನ ಬೇಡ ಎಂದರು.
ಇಂದಿರಾ ಕ್ಯಾಂಟೀನ್ ನಡೆಸಲು ಸರ್ಕಾರ ಅನುದಾನ ಕೊಡಬೇಕಿತ್ತು. ನೆರವು ಪಡೆಲು ಪೂರಕ ಬಜೆಟ್ ನಲ್ಲಿ ಬಜೆಟ್ ನಲ್ಲಿ ಹಣ ನಿಗದಿ ಮಾಡಲಾಗಿತ್ತು. ಆದರೆ ಹಾಲಿ ಬಿಜೆಪಿ ಸರ್ಕಾರ ಸರ್ಕಾರ ಬಂದ ಬಳಿಕ ಕ್ಯಾಂಟಿನ್ ಗೆ ಹಣ ನೀಡುವುದನ್ನು ಕೈಬಿಟ್ಟಿದೆ. ಯಾಕೆ ಹಣ ಕೊಡುತ್ತಿಲ್ಲ ಎಂಬ ಬಗ್ಗೆ ತಮ್ಮ ಬಳಿ ಮಾಹಿತಿ ಇಲ್ಲ ಎಂದರು.
ಆದರೆ ಯಶಸ್ವಿಯಾಗಿ ನಡೆಯುತ್ತಿರುವ ಇಂದಿರಾ ಕ್ಯಾಂಟಿನ್ ಮುಚ್ಚುವುದು ಸಾಧ್ಯವೇ ಇಲ್ಲ. ಸರ್ಕಾರ ಹಣ ಕೊಡದಿದ್ದರೆ ಬಿಬಿಎಂಪಿ ಇಂದಿರಾ ಕ್ಯಾಂಟಿನ್ ನಡೆಸುತ್ತದೆ ಎಂದು ಮೇಯರ್ ಹೇಳಿದರು.