ಬೆಂಗಳೂರು : ಭಾರತ್ ಬಂದ್ ಯಾವುದೇ ಪರಿಣಾಮ ಬೀರದು: ಯಡಿಯೂರಪ್ಪ

ಬೆಂಗಳೂರು 7: [ಯುಎನ್ಐ] ವಿವಿಧ ಕಾರ್ಮಿಕ ಸಂಘಟನೆಗಳು ಬುಧವಾರ ಕರೆ ನೀಡಿರುವ ಭಾರತ್ ಬಂದ್ ರಾಜ್ಯದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದಾರೆ. “ರಾಜ್ಯದ ಎಲ್ಲಾ ನಗರಗಳು, ಅದರಲ್ಲೂ ಬೆಂಗಳೂರಿನಲ್ಲಿ ಜನಜೀವನ ಎಂದಿನಂತೇ ಸಾಮಾನ್ಯವಾಗಿರುತ್ತದೆ. ದೈನಂದಿನ ಕೆಲಸ, ಕಾರ್ಯಗಳಿಗೆ ಯಾವುದೇ ತಡೆ ಇರುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಯಡಿಯೂರಪ್ಪ, ಶಾಲಾ-ಕಾಲೇಜು ಎಂದಿನಂತೆ ಕಾರ್ಯನಿರ್ವಹಿಸುತ್ತವೆ. ಸಾರಿಗೆ ವ್ಯವಸ್ಥೆ ಕೂಡ ಸಾಮಾನ್ಯವಾಗಿರಲಿದೆ. ಯಾವುದೇ ಸಮಾಜ ವಿರೋಧಿ ಶಕ್ತಿಗಳು ಬಂದ್ ನಲ್ಲಿ ಭಾಗವಹಿಸಲು ಒತ್ತಾಯ ಮಾಡಿದರೆ ಅಥವಾ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿಸಲು ಪ್ರಯತ್ನಿಸಿದರೆ ಅಂತಹವರ ವಿರುದ್ಧ ಪೊಲೀಸರು ಕಠಿಣ ಕ್ರಮ ಕೈಗೊಳ್ಳಲಿದ್ದಾರೆ ಎಂದಿದ್ದಾರೆ. ಬಂದ್ ಗಳು ಜನವಿರೋಧಿಯೆಂದು ಹಿಂದೆ ಸವೋಚ್ಛ ನ್ಯಾಯಾಲಯ ಹೇಳಿದೆ. ಈ ವಿಷಯ ಬಂದ್ ಗೆ ಕರೆ ಕೊಟ್ಟವರ ಗಮನದಲ್ಲಿ ಇರಬೇಕು. ಜನರು ಯವುದೇ ಪ್ರಚೋದನೆಗೆ ಒಳಗಾಗದೆ ಶಾಂತಿ ಕಾಪಾಡಿಕೊಂಡು ತಮ್ಮ ಕೆಲಸ ಕಾರ್ಯಗಳನ್ನು ನಿರ್ವಹಿಸಬೇಕು ಎಂದು ಮನವಿ ಮಾಡಿದ್ದಾರೆ.