ಮಲಯಾಳಂ ಸುದ್ದಿ ವಾಹಿನಿಗಳ ಮೇಲಿನ ನಿಷೇಧ ತೆರವು

ನವದೆಹಲಿ, ಮಾರ್ಚ್ 7, ದೇಶಾದ್ಯಂತ ಕೋಮು ಸಂಘರ್ಷಗಳನ್ನು ಹೆಚ್ಚಿಸುವ ವರದಿಗಳನ್ನು ಪ್ರಸಾರ ಮಾಡಿವೆ ಎಂಬ ಕಾರಣಕ್ಕಾಗಿ ಕೇಂದ್ರ ಸರ್ಕಾರ ಮಲಯಾಳಂನ ಎರಡು ಸುದ್ದಿ ವಾಹಿನಿಗಳ ಮೇಲೆ ಶುಕ್ರವಾರ ಹೇರಿದ್ದ 48 ತಾಸಿನ ನಿಷೇಧವನ್ನು ತೆರವುಗೊಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.ಎರಡೂ ವಾಹಿನಗಳ ಮೇಲಿನ ನಿಷೇಧವನ್ನು ಶನಿವಾರ ಮುಂಜಾನೆ ತೆರವುಗೊಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.ಕಳೆದ ತಿಂಗಳು ದೆಹಲಿಯಲ್ಲಿ ನಡೆದ ಕೋಮು ಹಿಂಸಾಚಾರ ಘಟನೆಗಳ ಕುರಿತಂತೆ ಈ ವಾಹಿನಿಗಳ ಪ್ರಸಾರವನ್ನು   48 ಗಂಟೆಗಳ ಕಾಲ ಸ್ಥಗಿತಗೊಳಸಲಾಗಿತ್ತು. ಫೆ 25 ರಂದು ನಡೆದ ಘಟನೆಗಳ ಕುರಿತ ಸುದ್ದಿಗಳಲ್ಲಿ ನಿರ್ದಿಷ್ಟ ಸಮುದಾಯದ ಪ್ರಾರ್ಥನಾ ಸ್ಥಳಗಳ ಮೇಲೆ ಮಾತ್ರ ದಾಳಿ ನಡೆದಿರುವಂತೆ ಪ್ರಸಾರಮಾಗಿದೆ ಎಂದು ಅಧಿಕೃತ ಆದೇಶ ಹೇಳಿತ್ತು.

‘ದೆಹಲಿ ಹಿಂಸಾಚಾರದ ಬಗ್ಗೆ ವಾಹಿನಿಗಳ ವರದಿಗಳು  ಪಕ್ಷಪಾತದಿಂದ ಕೂಡಿವೆ ಎಂದು ತೋರುತ್ತದೆ. ಏಕೆಂದರೆ, ಈ ವರದಿಗಳು ಸಿಎಎ ಬೆಂಬಲಿಗರ ಹಿಂಸಾಚಾರ ಕೃತ್ಯವನ್ನು ಮಾತ್ರ ಉದ್ದೇಶಪೂರ್ವಕವಾಗಿ ಕೇಂದ್ರೀಕರಿಸಿವೆ. ವರದಿಗಳು ಆರ್ ಎಸ್ಎಸ್ ಹೊಣೆ ಎಂಬಂತೆ ಬಿಂಬಿಸಿ ದೆಹಲಿ ಪೊಲೀಸರ ನಿಷ್ಕ್ರಿಯತೆ ಘಟನೆಗಳಿಗೆ ಕಾರಣ ಆರೋಪಿಸಿವೆ. ದೆಹಲಿ ಪೊಲೀಸರು ಮತ್ತು ಆರ್ಎಸ್ಎಸ್. ಅನ್ನು ವಾಹಿನಿಗಳು  ಗುರಿಯಾಗಿಸಿಕೊಂಡಿರುವುದು ಕಂಡು ಬಂದಿದೆ ಎಂದು  ಕೇಂದ್ರ ವಾರ್ತಾ ಮತ್ತು ಮಾಹಿತಿ ಖಾತೆ ಸಚಿವಾಲಯದ ಆದೇಶ ತಿಳಿಸಿದೆ.ದೇಶಾದ್ಯಂತ ಯಾವುದೇ ವೇದಿಕೆಯಲ್ಲಿ 48 ಗಂಟೆಗಳ ಕಾಲ ಮೀಡಿಯಾ ಒನ್ ಮತ್ತು ಏಷ್ಯಾನೆಟ್ ನ್ಯೂಸ್ ವಾಹಿನಿ ಪ್ರಸಾರವನ್ನು ಸಚಿವಾಲಯ ನಿಷೇಧಿಸಿ ಆದೇಶ ಹೊರಡಿಸಿತ್ತು. ಶುಕ್ರವಾರ ಸಂಜೆ 7.30ರಿಂದ ಭಾನುವಾರ ಸಂಜೆ 7.30ರವರೆಗೆ ನಿಷೇಧ ಜಾರಿಗೊಳಿಸಲಾಗಿತ್ತು. ಮೀಡಿಯಾ ಒನ್ ಮತ್ತು ಏಷ್ಯಾನೆಟ್ ನ್ಯೂಸ್  ವಾಹಿನಿಗಳ ಪ್ರಸಾರ ಸ್ಥಗಿತಗೊಳಿಸಿರುವ ಕುರಿತು  ಕಾಂಗ್ರೆಸ್ ಸರ್ಕಾರವನ್ನು ಟೀಕಿಸಿದೆ. ಸರ್ಕಾರದ ಕ್ರಮ ಪತ್ರಿಕಾ ಸ್ವಾತಂತ್ರ್ಯವನ್ನು ದಮನಗೊಳಿಸುವ ಯತ್ನವಾಗಿದೆ ಎಂದು ಕಾಂಗ್ರೆಸ್ ಕಿಡಿಕಾರಿದೆ.