ಶ್ರೀನಗರ ವಿಮಾನ ನಿಲ್ದಾಣದಲ್ಲೇ ಆಜಾದ್ ಗೆ ನಿರ್ಬಂಧ

ನವದೆಹಲಿ, ಆಗಸ್ಟ್ 8   ರಾಜ್ಯಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ವಾಪಸ್  ತೆಗೆದುಕೊಂಡ ನಂತರ ಗುರುವಾರ ಶ್ರೀನಗರಕ್ಕೆ ಆಗಮಿಸಿದ ರಾಜ್ಯಸಭೆಯ  ಪ್ರತಿಪಕ್ಷದ ನಾಯಕ ಗುಲಾಮ್ ನಬಿ ಆಜಾದ್ ಅವರನ್ನು  ವಿಮಾನ ನಿಲ್ದಾಣದಲ್ಲಿಯೇ ತಡೆಹಿಡಿಯಲಾಗಿದೆ.   ಆಜಾದ್ ಅವರು  ಪಕ್ಷದ ನಾಯಕರ ಸಭೆಯಲ್ಲಿ  ಭಾಗವಹಿಸಲು ಇಲ್ಲಿಗೆ ಆಗಮಿಸಿದ್ದರು ಎಂದು ಪಕ್ಷದ  ಮೂಲಗಳು ತಿಳಿಸಿವೆ.   ಜಮ್ಮು ಮತ್ತು ಕಾಶ್ಮೀರ ಕಾಂಗ್ರೆಸ್ ಮುಖ್ಯಸ್ಥ ಗುಲಾಮ್ ಅಹ್ಮದ್ ಮಿರ್ ಅವರೊಂದಿಗೆ ಆಜಾದ್ ಅವರು ಇಂದು ಶ್ರೀನಗರಕ್ಕೆ ಭೇಟಿ ನೀಡಿದ್ದು ಅವರಿಬ್ಬರನ್ನೂ ವಿಮಾನ ನಿಲ್ದಾಣದಲ್ಲೇ  ನಿರ್ಬಂಧಿಸಲಾಗಿದೆ.     ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರು ಬುಧವಾರ ಕಣಿವೆಗೆ ಭೇಟಿ ನೀಡಿದ್ದ  ಸಮಯದಲ್ಲಿ ಆಜಾದ್  ನೀಡಿದ್ದ ವಿವಾದಾತ್ಮಕ ಹೇಳಿಕೆಯ ಹಿನ್ನೆಲೆಯಲ್ಲಿ  ಈ ಘಟನೆ ಜರುಗಿದೆ.     ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ವಾಪಸ್ ಪಡೆಯುವ ಮೊದಲೇ   ಮಾಜಿ ಮುಖ್ಯಮಂತ್ರಿಗಳಾದ ಮೆಹಬೂಬಾ ಮುಫ್ತಿ ಮತ್ತು ಒಮರ್ ಅಬ್ದುಲ್ಲಾ ಅವರನ್ನು ಗೃಹ ಬಂಧನದಲ್ಲಿ ಇಡಲಾಗಿತ್ತು. ಈ ನಡುವೆ ಮೇಲ್ನೋಟಕ್ಕೆ ಕಣಿವೆಯಲ್ಲಿ ಪರಿಸ್ಥಿತಿ ಸುಧಾರಿಸಿದೆ ಎಂದು ಹೇಳಲಾಗುತ್ತಿದ್ದರೂ ಬೂದಿ ಮುಚ್ಚಿದ ಕೆಂಡದಂತಿದೆ. ಮುಂದಿನ ವಾರ ಪರಿಸ್ಥಿತಿಯ ಖುದ್ದು ಅಧ್ಯಯನಕ್ಕಾಗಿ ಕೇಂದ್ರ ಗೃಹ ಕಾರ್ಯದರ್ಶಿ  ಭೇಟಿ ನೀಡಿ ಭದ್ರತಾ ವ್ಯವಸ್ಥೆಗಳನ್ನು ಪರಿಶೀಲಿಸಲಿದ್ದಾರೆ.