ಹಾರೂಗೇರಿ 09: ಪಟ್ಟಣದ ಡಾ.ಹಿಟ್ಟಣಗಿ ಆಸ್ಪತ್ರೆಯಲ್ಲಿ ಆಯುಷ್ಮಾನ ಭಾರತ ಆರೋಗ್ಯ ಕರ್ನಾಟಕ ಯೋಜನೆ ಪ್ರಾರಂಭವಾಗಿದ್ದು, ಬಿಪಿಎಲ್ ಕಾರ್ಡ್ ಹೊಂದಿರುವ ಕುಟುಂಬಕ್ಕೆ ಒಂದು ವರ್ಷಕ್ಕೆ 5 ಲಕ್ಷರೂ ವರೆಗೆ ನಗದು ರಹಿತ ಉಚಿತ ಚಿಕಿತ್ಸೆಯ ಸೌಲಭ್ಯ ಲಭ್ಯವಿದ್ದು, ಸುತ್ತಮುತ್ತಲಿನ ಗ್ರಾಮಗಳ ರೋಗಿಗಳು ಸದುಪಯೋಗ ಪಡೆದುಕೊಳ್ಳಬೇಕೆಂದು ಆರೋಗ್ಯ ಮಿತ್ರ ಡಾ.ಮಹಾಂತಯ್ಯ ಹೊಡ್ಲುರಮಠ ಹೇಳಿದರು.
ಪಟ್ಟಣದ ಶ್ರೀ ಸಿದ್ಧರಾಮೇಶ್ವರ ಮಲ್ಟಿ ಸ್ಪೇಷಾಲಿಟಿ ಆಸ್ಪತ್ರೆಯಲ್ಲಿ ಬೆಂಗಳೂರಿನ ವೈದೇಹಿ ಆಸ್ಪತ್ರೆಯ ಆಶ್ರಯದಲ್ಲಿ ಹಮ್ಮಿಕೊಳ್ಳಲಾದ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಮಾತನಾಡಿದ ಅವರು ಸುಮಾರು 150ಕ್ಕೂ ರೋಗಗಳಿಗೆ ಉಚಿತ ಚಿಕಿತ್ಸೆ ಸೌಲಭ್ಯ ಸಿಗಲಿದ್ದು, ವಿಶೇಷವಾಗಿ ಬಡ ಹಾಗೂ ಗ್ರಾಮೀಣ ಪ್ರದೇಶದ ದುರ್ಬಲ ವರ್ಗದವರಿಗೆ ಮತ್ತು ನಗರ ಪ್ರದೇಶದ ಕಾರ್ಮಿಕರ ಕುಟುಂಬಗಳು ಈ ಯೋಜನೆಯ ಲಾಭ ಪಡೆದುಕೊಳ್ಳಬೇಕೆಂದು ಹೇಳಿದರು.
ಚಿಕ್ಕಮಕ್ಕಳ ತಜ್ಞ ಡಾ.ಕಿರಣ ಹಿಟ್ಟಣಗಿ ಮಾತನಾಡುತ್ತ ಬದಲಾಗುತ್ತಿರುವ ವಾತಾವರಣ, ಜೀವನಶೈಲಿ, ಆಹಾರ ಪದ್ಧತಿಗಳಿಂದಾಗಿ ಹಲವಾರು ರೋಗಗಳು ಮನುಷ್ಯರನ್ನು ಕಾಡುತ್ತಿದ್ದು, ಆತ್ಯಮೂಲ್ಯವಾದ ಆರೋಗ್ಯವನ್ನು ಕಾಪಾಡಿಕೊಳ್ಳುವುದು ತೀರ ಅಗತ್ಯವಿದೆ. ಆರೋಗ್ಯವನ್ನು ನಿರ್ಲಕ್ಷ್ಯ ಮಾಡದೇ ಸರಿಯಾದ ಚಿಕಿತ್ಸೆ ಪಡೆಯುವ ಮೂಲಕ ಉತ್ತಮ ಆರೋಗ್ಯ ಹೊಂದಬೇಕೆಂದು ಹೇಳಿದರು.
ಶಿಬಿರದಲ್ಲಿ ಹೃದಯ ರೋಗ, ಸಕ್ಕರೆ ಕಾಯಿಲೆ, ರಕ್ತದೊತ್ತಡ, ಚಿಕ್ಕಮಕ್ಕಳ ಹೃದಯ ತೊಂದರೆ ಹಾಗೂ ಚಿಕ್ಕಮಕ್ಕಳ ಇನ್ನುಳಿದ ತೊಂದರೆ, ಸ್ತ್ರೀರೋಗ ಸಂಬಂಧಿಸಿದ ವ್ಯಾದಿಗಳು, ಚರ್ಮರೋಗ, ನರರೋಗ, ಮೂಳೆಗಳ ಸಂಬಂಧಿಸಿದ ಕಾಯಿಲೆಗಳನ್ನು ತಜ್ಞವೈದ್ಯರು ಉಚಿತವಾಗಿ ತಪಾಸಣೆ ಮಾಡಿ, ಸೂಕ್ತ ಚಿಕಿತ್ಸೆ ನೀಡಿದರು.
ಬೆಂಗಳೂರು ವೈದೇಹಿ ಆಸ್ಪತ್ರೆಯ ತಜ್ಞವೈದ್ಯರಾದ ಡಾ.ರಮೇಶ, ಡಾ.ಶಿಲ್ಪಾ ಎಸ್, ಡಾ.ಫಾಲಾ, ಡಾ.ರಶ್ಮೀ, ಡಾ.ಶಶಿಕುಮಾರ, ಡಾ.ಸಾಗರ, ಡಾ.ಈಶ್ವರ ಹಿಟ್ಟಣಗಿ, ಡಾ.ಚಿದಾನಂದ ಹಿರೇಮಠ, ಡಾ.ಸುಲೋಚನಾ ಹಿರೇಮಠ, ಶಿವಾನಂದ ಅರಕೇರಿ, ಆನಂದ ಗೋಡಕರ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಸುಮಾರು 300ಕ್ಕೂ ರೋಗಿಗಳು ಉಪಸ್ಥಿತರಿದ್ದರು.
ಮಹಾಂತೇಶ ಡಂಗಿ ಸ್ವಾಗತಿಸಿದರು. ಅಮೋಘ ಘಂಟಿ ಕಾರ್ಯಕ್ರಮ ನಿರೂಪಿಸಿದರು.