ಪ್ರಜೆಗಳ ರಾಜ, ಪ್ರಜಾರಾಜ್ಯ ಪಾಲಕ ಅಯೋಧ್ಯೆಯ ಶ್ರೀರಾಮ. ಇಂತಹ ಮಹಿಮಾ ಪುರುಷನಿಗೆ ಜನ್ಮ ನೀಡಿದ ಪರಮಪಾವನ ಭೂಮಿ ಅಯೋಧ್ಯೆ!
ಹಿಂದುಸ್ಥಾನದ ಪುಣ್ಯ ಕ್ಷೇತ್ರಗಳಲ್ಲಿ ಹಾಗೂ ಮುಕ್ತಿದಾಯಕವಾದ ಸಪ್ತಪುರಿಗಳಲ್ಲಿ ಮೊದಲು ಕರೆಯಿಸಲ್ಪಡುವ ಈ ಅಯೋಧ್ಯೆಯನ್ನು ಮನುವಿನ 9 ಮಕ್ಕಳಲ್ಲಿ ಪ್ರಥಮನು, ಈತನ ಸಂತತಿಯೇ ಮುಂದೆ ಇಕ್ಷ್ವಾಕು ವಂಶದ ರಾಜರೆಂದು ನಂತರ ಬಂದ ಯುವನಾಶ್ವ, ಮಾಂಧಾತ, ಹರಿಶ್ಚಂದ್ರ, ಸಗರ, ದೀಲೀಪ, ರಘು. ಈ ರಘು ಅತ್ಯಂತ ಶ್ರೇಷ್ಠ ರಾಜನಾಗಿ, ಮಹಾ ಶೂರನಾಗಿ, ದಯಾವಂತನಾಗಿದ್ದುದರಿಂದ ಮುಂದೆ ಇದಕ್ಕೆ ರಘುವಂಶವೆಂದು, ಸೂರ್ಯ ಎಂಬುವನು ಪ್ರಖ್ಯಾತನಾಗಿದ್ದುದರಿಂದ ಸೂರ್ಯವಂಶಜರೆಂದು ಕರೆಯಲ್ಪಡುವ, ಪವಿತ್ರ ವಂಶಜರೆಲ್ಲರೂ ಅನೇಕ ಯಜ್ಞ ಯಾಗಗಳನ್ನು ಮಾಡಿದ ಪುಣ್ಯ ಕ್ಷೇತ್ರ ಈ ಅಯೋಧ್ಯೆ. ಅಷ್ಟೇ ಏಕೆ ಸತ್ಯಕ್ಕಾಗಿ ತನ್ನ ಹೆಂಡತಿಯನ್ನೇ ಒತ್ತೆಯಿಟ್ಟ ಹರಿಶ್ಚಂದ್ರ, ಕೊಟ್ಟ ಮಾತಿಗಾಗಿ ತನ್ನ ಪ್ರೀತಿಯ ಮಗನನ್ನೆ ಕಾಡಿಗೆ ಕಳುಹಿಸಿದ ದಶರಥ, ಸ್ವತಃ ಅಣುರೇಣು ತೃಣಕಾಷ್ಟದಲ್ಲಿ ತುಂಬಿರುವ ಸಾಕ್ಷಾತ್ ಶ್ರೀಮನ್ ನಾರಾಯಣನಾದ ಪರಮಾತ್ಮನು 7ನೇ ಅವತಾರಿಯಾಗಿ ಶ್ರೀ ರಾಮಚಂದ್ರ ಪ್ರಭು ಅಶ್ವಮೇಧಯಾಗ ಮಾಡಿದ ದೇವಭೂಮಿ ಈ ಅಯೋಧ್ಯೆ.
ವಿಷ್ಣು ಭಗವಾನನ ಕಣ್ಗಳಿಂದ ಹುಟ್ಟಿದ ಸರಯೂ ನದಿಯು “ನೇತ್ರಾ” ಎಂಬ ಹೆಸರಿನಿಂದ ಮತ್ತೆ ವಶಿಷ್ಠರನ್ನು ಸೇವಿಸಿದ್ದರಿಂದ ವಾಶಿಷ್ಠೀ ಎಂದು ಕರೆಯುವ ಸರಿಯೂ ನದಿಯು ಮಾನಸ ಸರೋವರದಿಂದ ಅಯೋಧ್ಯೆಗೆ ಆಗಮಿಸಿ ಪರಮ ಪಾವನೆಯಾದ ಸರಯೂ ಮಯ್ಯಾ ಶ್ರೀ ರಾಮನ ಸೇವೆಗೈದಿದ್ದಾಳೆ. ರಾಮ ನವಮಿಯ ದಿನ ಸರಯೂ ನದಿಯ ಸ್ನಾನ ಮಾಡಿದರೆ ಪುನರ್ ಜನ್ಮವಿಲ್ಲವೆಂಬ ಪ್ರತೀತಿ ಇದೆ.
ಅಯೋಧ್ಯೆ ಕೇವಲ ಹಿಂದುಗಳಿಗೆ ಅಷ್ಟೇ ಪುಣ್ಯ ಕ್ಷೇತ್ರವಲ್ಲ; ಜೈನರ ಶ್ರದ್ಧಾ ಭಕ್ತಿಯ ಕೇಂದ್ರವೂ ಆಗಿದೆ. ಈ ಸೂರ್ಯವಂಶದವರಿಂದಲೇ ಜೈನಧರ್ಮ ಹುಟ್ಟಿದ್ದು. ಜೈನರು ಹೇಳುವ 24 ತೀರ್ಥಂಕರರಲ್ಲಿ 22 ಜನರು ಈ ಪವಿತ್ರ ವಂಶದಲ್ಲಿ ಹುಟ್ಟಿದ ಹಿಂದೂ ರಾಜರೇ ಎಂಬುದನ್ನು ಮರೆಯಬಾರದು. ಮೊದಲನೆ ತೀರ್ಥಂಕರರಾದ ಆದಿನಾಥನು ಅಯೋಧ್ಯೆ ರಾಜನಾದ ನಾಭಿಯ ಮಗನು. ಇದೇ ಸರಯೂ ನದಿಯಲ್ಲಿಯೇ ಮಿಂದು ಎದ್ದವನು. ಜ್ಞಾನದ ದೀಪ ಬೆಳಗಿಸಿ, ಸರ್ವರಿಗೂ ಬೆಳಕು ತೋರಿದವನು. ಅಜಿತ, ಅಭಿನಂದನ, ಸುಮಿತಿ, ಅಚಲ ಅನಂತ ಈ ತೀರ್ಥಂಕರೂ ಕೂಡಾ ಅಯೋಧ್ಯೆಯಲ್ಲಿಯೇ ಜನಿಸಿದವರು. ಹೀಗೆ ಇರುವಾಗ ಈ ಪವಿತ್ರವಾದ ಹಿಂದೂ ಧರ್ಮದಲ್ಲಿ ಜನಿಸಿದ ಮಹಾನುಭಾವರ ಪ್ರಜ್ಞೆಯಿಂದಾಗಿ ಹೊಸ ಪಂಥಗಳು ಹುಟ್ಟಿಕೊಂಡಿವೆ. ಆದರೆ ಅವೆಲ್ಲವುಗಳು ಹಿಂದೂ ಧರ್ಮದ ಕವಲುಗಳು ಎಂಬುದನ್ನು ಮರೆಯಬಾರದು.
ಅಯೋಧ್ಯೆಯಲ್ಲಿ ಜಾಗೃತ ಹನುಮಾನ ಮಂದಿರವು ಬಹು ದೊಡ್ಡದಾಗಿದೆ. ಈ ಸ್ಥಳಕ್ಕೆ ಹನುಮಾನ ಘಡ ಎನ್ನುವರು. ಎತ್ತರವಾದ ಗುಡಿಗೆ ಅನೇಕ ಮೆಟ್ಟಿಲುಗಳು ಇವೆ. ಆಂಜನೇಯನು ಇಲ್ಲಿ ಸದಾ ಜಾಗೃತನಾಗಿರುವುದರಿಂದ ಜಾಗೃತ ಹನುಮಾನವೆನ್ನುವರು. ಸರಯೂ ನದಿಯಲ್ಲಿ ರಾಮಘಾಟಕ್ಕೆ ಸ್ವರ್ಗ ದ್ವಾರವೆನ್ನುವರು. ಇಲ್ಲಿ ಶಿವನ ಮಂದಿರವಿದೆ. ನದಿಯು ಬಹಳ ಅಗಲವಾಗಿದೆ. ಅಲ್ಲದೆ ಆಳವಾಗಿದೆ. ನದಿಗೆ ಬೃಹತ್ ಸೇತುವೆ ಕಟ್ಟಿದ್ದಾರೆ. ಹಿಂದೆ ಈ ನಗರವು ಹನ್ನೆರಡು ಯೋಜನ ಉದ್ದ ಮೂರು ಯೋಜನ ಅಗಲವಾಗಿತ್ತೆಂದು ಉಲ್ಲೇಖಗಳಿವೆ. ತುಳಸೀದಾಸರಂತೂ ಈ ಅಯೋಧ್ಯೆಯನ್ನು ವರ್ಣಿಸುತ್ತ “ವೇದ ಪುರಾಣಗಳು ವೈಕುಂಠ ನಗರದ ವರ್ಣನೆ ಮಾಡಿದರೂ ಅಯೋಧ್ಯೆಗಿಂತ ಮಿಗಿಲಾದುದು ಇನ್ನೆಲ್ಲಿಯೂ ದೊರಕದು ಎಂದಿದ್ದಾರೆ.
ಇಲ್ಲಿ ಈಗ ನೋಡುವಂತ ಅತ್ಯಂತ ಪ್ರೇಕ್ಷಣೀಯ ಸ್ಥಳಗಳೆಂದರೆ ದಶರಥ ರಾಜನ ಒಡ್ಡೋಲಗ(ದಶರಥ ಮಹಲ್), ಕನಕ ಭವನ ಇದು ಮುಖ್ಯ ಮಂದಿರವಾಗಿದೆ. ಇಲ್ಲಿ ಹವನಗಳು ನಡೆಯುತ್ತವೆ ಹಾಗೂ ಕೈಕೇಯಿಯ ಕೋಪಗೃಹ (ಹಿಂದೆ ಕೈಕೆಯ ಭವನ), ಲವಕುಶ ನಿವಾಸ, ಸೀತಾರಾಮ ಮಹಲ, ವಶಿಷ್ಠ ಕುಂಡ, ಸೀತಾಕೂಪ, ತುಳಸಿದಾಸರ ಆಶ್ರಮ, ವಾಲ್ಮಿಕಿ ಋಷಿಯ ಆಶ್ರಮ ಅತ್ಯಂತ ವಿಶಾಲವಾದ ಭವ್ಯವಾದ ಕಟ್ಟಡಗಳಿಂದ ಕೂಡಿವೆ. ಇಲ್ಲಿ ಸಹಸ್ರಾರು ಸಾಧುಗಳು ತಂಗಲು ವ್ಯವಸ್ಥೆ ಇದೆ. ಊಟ, ಉಪಚಾರದ ವ್ಯವಸ್ಥೆ ಇದೆ. ರಾಮನುಜಾಚಾರ್ಯರ ಮಠವಿದೆ. ರಾಮಜನ್ಮ ಭೂಮಿಯ ಕಾವಲಕ್ಕಾಗಿ ಸುಮಾರು 12000 ಸಿಆರಿ್ಪಗಳು ಇದುವರೆಗೆ ಇದ್ದರು. ಕಬ್ಬಿಣದ ಕಟಂಜರಿಯ ಜಾಲರಿಯಲ್ಲಿ ಒಬ್ಬರೇ ಹೋಗುವ ಇಕ್ಕಟ್ಟಾದ ದಾರಿಯಲ್ಲಿ ನಡೆದು ಹೋಗಿ ರಾಮಲಲ್ಲಾನ ದರ್ಶನ ಪಡೆಯಬೇಕಾಗುತಿತ್ತು. ಹೆಜ್ಜೆ ಹೆಜ್ಜೆಗೆ ಯಾತ್ರಿಕರನ್ನು ತಪಸಣೆಗೆ ಒಳಪಡಿಸುತ್ತಿದ್ದರು (ಇಂದಿನವರೆಗೂ). ಅಯೋಧ್ಯೆಯಲ್ಲಿ ನೋಡಿದ ಕಡೆಯಲ್ಲೆಲ್ಲ ಮಂಗಗಳು ತುಂಬಿ ತುಳುಕುತ್ತವೆ. ಯಾತ್ರಿಕರು ಬಹಳ ಜಾಗರೂಕತೆಯಿಂದ ಇರಬೇಕು. ತಿಂಡಿಗಳನ್ನಾಗಲಿ, ಹಣ್ಣು ಹಂಪಲಗಳನ್ನಾಗಲಿ ಖರೀದಿಸಿದಾಗ ಅವುಗಳಿಗೆ ಕಾಣದಂತೆ ಇಡಬೇಕು. ಅಯೋಧ್ಯೆಯಲ್ಲಿ ಯಾತ್ರಾರ್ಥಿಗಳ ವಾಸ್ತವ್ಯಕ್ಕೆ ಇಲ್ಲಿ ಧರ್ಮಶಾಲೆಗಳು ಬಹಳ. ಬಿರ್ಲಾ ಧರ್ಮಶಾಲೆ, ಗುಜರಾಥ ಧರ್ಮಶಾಲೆ, ಸಿಂಧಿ ಧರ್ಮಶಾಲೆ ಹೀಗೆ ಹಲವಾರು ಧರ್ಮಶಾಲೆಗಳಿವೆ. ಅನೇಕ ಹೊಟೇಲ್‌ಗಳಿವೆ. ಅಯೋಧ್ಯೆಯಲ್ಲಿ ನೋಡಬೇಕಾದ ಇನ್ನೊಂದು ಸ್ಥಳವೆಂದರೆ ಶ್ರೀರಾಮನ ಭವ್ಯವಾದ ಮಂದಿರ ನಿರ್ಮಾಣಕ್ಕಾಗಿ ಮಾಡುವ ಬೃಹತ್ ಶಿಲೆಗಳನ್ನು ನಿರ್ಮಿಸುತ್ತಿರುವ ಸ್ಥಳ ಹಾಗೂ ವಿನ್ಯಾಸದ ಮಾಡಲ್ ನೋಡುವುದು ಅಗತ್ಯವಾಗಿದೆ. ಇಪ್ಪತ್ತು ವರ್ಷಗಳಿಂದ ಅನೇಕ ಶಿಲ್ಪಿಗಳು ಈ ಕೆಲಸದಲ್ಲಿ ನಿರತರಾಗಿದ್ದರು.
ಅಯೋಧ್ಯೆ ಪುನರ್ ನಿರ್ಮಾಣ ಮತ್ತು ಮತಾಂಧರ ದಾಳಿ
ಅಯೋಧ್ಯೆಯನ್ನು ಪುನರ್ ನಿರ್ಮಾಣ ಮಾಡಿದವನು ರಾಜಾ ವಿಕ್ರಮಾದಿತ್ಯನು. ರಾಮಲಲ್ಲಾನ (ರಾಮಜನ್ಮ ಭೂಮಿ) ಗುಡಿಯನ್ನು ದೊಡ್ಡದಾಗಿ ಕಟ್ಟಿಸಿದ ಶ್ರೇಯಸ್ಸು ರಾಜಾ ವಿಕ್ರಮಾದಿತ್ಯನಿಗೆ ಸಲ್ಲುತ್ತದೆ ಎಂದು ಉಲ್ಲೇಖಗಳಿವೆ. ಈ ಬೃಹತ್ ಮಂದಿರದ ಮೇಲೆ ಇಲ್ಲಿಯ ಪುರಾತನ ಸಂಸ್ಕೃತಿಯ ಕಟ್ಟಡಗಳ ಮೇಲೆ ಮುಸಲ್ಮಾನರ ದಾಳಿ ಅನೇಕ ಸಲವಾಗಿದೆ ಎಂದು ನಮಗೆ ಇತಿಹಾಸ ಹೇಳುತ್ತದೆ.
1193ರಲ್ಲಿ ಶಹಾಬುದ್ದೀನ್ ಘೋರಿ ಅಯೋಧ್ಯೆಯನ್ನು ವಶ ಪಡಿಸಿಕೊಂಡನಂತೆ. ನಂತರ ಬಾಬರನು ಅಯೋಧ್ಯೆಯನ್ನು 1528ರಲ್ಲಿ ಆಕ್ರಮಿಸಿಕೊಂಡು, ಅಲ್ಲಿ ಇರುವಂತ ಫಜಲ್ ಅಬ್ಬಾಸ ಕಲಂದರ ಎಂಬ ಫಕೀರರನ್ನು ಕಂಡನಂತೆ. ಆಗ ಆ ಫಕೀರ್ ಬಾಬರನನ್ನು ಹರಿಸಿ ಕಳಿಸುವದನ್ನು ಬಿಟ್ಟು ತನಗೆ ಒಂದು ಮಸೀದಿ ಬೇಕು; ಅದು ಹಿಂದುಗಳ ಆರಾಧ್ಯ ದೈವವಾದ ಶ್ರೀರಾಮನ ಜನ್ಮ ಸ್ಥಾನದ ಮಂದಿರವನ್ನು ನೆಲಸಮಗೊಳಿಸಿ ಅಲ್ಲಿ ಮಸೀದಿಯನ್ನು ಬಾಬರನ ಆದೇಶದಂತೆ ಮೀರ್ ಬಾಕಿಖಾನ್ ತಾಶಂದಿ ಅನೇಕ ಹಿಂದುಗಳೊಂದಿಗೆ ಯುದ್ಧ ಮಾಡಿ ಸಹಸ್ರಾರು ಜನರನ್ನು ಕೊಂದು ಮೂರು ಗುಮ್ಮಜ್‌ಗಳಿರುವ ಮಸೀದಿಯನ್ನು ನಿರ್ಮಿಸಿದನೆಂದು ಬ್ರಿಟಿಷ ಇತಿಹಾಸಕಾರರಾದ ಕನ್ನಿಂಗ್ ಹ್ಯಾಮ್ ಎಂಬವನು ಲಕ್ನೋ ಗೆಜೆಟಿಯರನಲ್ಲಿ ಬರೆದಿದ್ದಾನೆ.
ಹೀಗೆ ಹಿಂದುಗಳ ಪವಿತ್ರ ಭಾವನೆಗಳ ಜೊತೆ ಚೆಲ್ಲಾಟ ಆಡಿದ ಮುಸಲ್ಮಾನ ಅರಸರು ಅನೇಕರಿದ್ದಾರೆ. ಅಯೋಧ್ಯೆಗಂತೂ ದುಂಬಾಲು ಬಿದ್ದಿದ್ದಾರೆ. ಅಕ್ಬರ್ ನಂತಹವನೇ 20 ಸಲ ಯುದ್ಧ ಮಾಡಿದ್ದಾನೆಂದರೆ, ಇನ್ನೂ ಓರಂಗಜೇಬನು 30 ಬಾರಿ ಯುದ್ಧ ಮಾಡಿದವನಾಗಿದ್ದಾನೆ. ಇಷ್ಟೊಂದು ಬೃಹತ್ ನಗರವಾದ ಅಯೋಧ್ಯೆ ಹೆಸರನ್ನು ಕ್ಷೀಣಗೊಳಿಸಿ ಫೈಜಾಬಾದ ಎಂಬ ದೊಡ್ಡ ನಗರ ಪ್ರಚಲಿತಗೊಂಡಿದೆ. ಈಗ ಇಲ್ಲಿ ದೊಡ್ಡ ರೈಲ್ವೆ ಜಂಕ್ಷನ್ ಆಗಿದೆ. ಇಷ್ಟೆಲ್ಲ ಆದರೂ ಇಂದಿಗೂ ಸರಿಯೂ-ತೀರೋಪರಿ ಅಯೋಧ್ಯಾ ಮನು ನಿರ್ಮಿತ ನಗರಿ ಎಂದು ಹಿಂದುಗಳ ಪವಿತ್ರವು, ಪಾವನವು ಆದ ನಗರದಲ್ಲಿ ಈ ದೇಶದ ಪ್ರಧಾನಿ ಶ್ರೀ ನರೇಂದ್ರ ಮೋದಿಯು ರಾಮಲಲ್ಲಾನನ ಭವ್ಯವಾದ ಮಂದಿರವನ್ನು ಜಗತ್ತಿನಲ್ಲಿಯೇ ಅತ್ಯಂತ ಸುಂದರ ವಿನ್ಯಾಸಗಳಿಂದ ಕೂಡಿದ ಮಂದಿರ ನಿರ್ಮಾಣದ ಶಿಲಾನ್ಯಾಸ ಮಾಡಿ ಪೂಜಿಸಲಿದ್ದಾರೆ. ಶ್ರೀ ರಾಮಚಂದ್ರ್ರಭು, ಪರಮ ಪಾವನೆ ಸೀತಾ ಮಾತೆ, ಪವನಪುತ್ರ ಜಾಗೃತ ಹನುಮ ಇವರೆಲ್ಲರೂ ಶ್ರೀ ನರೇಂದ್ರ ಮೋದಿಯವರಿಗೆ ಆರೋಗ್ಯ ಭಾಗ್ಯ, ಆಯುಷ್ಯ ಭಾಗ್ಯ ನೀಡಿ ಇನ್ನೂ ಹಲವಾರು ವರ್ಷ ಭಾರತಾಂಭೆಯ ಪ್ರಧಾನಿಯಾಗಿ ಇರಲೆಂದು ಹರಸಲಿ. ಸರ್ವರಿಗೂ ಶ್ರೀರಾಮ ಆರೋಗ್ಯ ಭಾಗ್ಯ ಕರುಣಿಸಲಿ... ಶ್ರೀರಾಮ ನವಮಿಯ ಹಾರ್ದಿಕ ಶುಭಾಶಯಗಳೊಂದಿಗೆ ನನ್ನ ಚಿಕ್ಕ ಲೇಖನಕ್ಕೆ ವಿರಾಮ ಹೇಳುತ್ತೇನೆ.
"|| ಜೈ ಶ್ರೀರಾಮ || ಜೈ ಜಾಗೃತ ಹನುಮಾನ || || ಜೈ ಸರಿಯೂ ಮಯ್ಯಾ ||"
- * * * -