ಹೆಪಾಟೈಟಿಸ್ ತಡೆ ಹಾಗೂ ಅಂಗಾಂಗ ದಾನದ ಕುರಿತು ಜಾಗೃತಿ ಅಗತ್ಯ ಹಿ ಡಾ. ಪ್ರಭಾಕರ ಕೋರೆ

ಹೆಪಾಟೈಟಿಸ್ ತಡೆ ಹಾಗೂ ಅಂಗಾಂಗ ದಾನದ ಕುರಿತು ಜಾಗೃತಿ ಅಗತ್ಯ ಹಿ ಡಾ. ಪ್ರಭಾಕರ ಕೋರೆ  Awareness regarding hepatitis prevention and organ donation is essential: Dr. Prabhakar Kore

ಬೆಳಗಾವಿ ಜು. 28: ವಿಶ್ವ ಹೆಪಾಟೈಟಿಸ್ ದಿನಾಚರಣೆ ಅಂಗವಾಗಿ ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಮತ್ತು ವೈದ್ಯಕೀಯ ಸಂಶೋಧನಾ ಕೇಂದ್ರದ ಗ್ಯಾಸ್ಟ್ರೊಎಂಟ್ರಾಲಜಿ ವಿಭಾಗ, ಕಾಹೆರ ಹಾಗೂ ಜೆಎನ್ ವೈದ್ಯಕೀಯ ಮಹಾವಿದ್ಯಾಲಯದ ಸಂಯುಕ್ತ ಆಶ್ರಯದಲ್ಲಿ ಮಂಗಳವಾರ ಹೆಪಾಟೈಟಿಸ್‌-ಬಿ ಹಾಗೂ ಅಂಗಾಂಗ ದಾನದ ಕುರಿತು ಜಾಗೃತಿ ನಡಿಗೆ ನಡೆಯಿತು.  

ಕಾಹೆರ ಕುಲಪತಿ ಪದ್ಮಶ್ರೀ ಡಾ. ಪ್ರಭಾಕರ ಕೋರೆ ಅವರು ಹಸಿರು ನಿಶಾನೆ ತೋರಿಸುವ ಮೂಲಕ ಜಾಗೃತಿ ನಡಿಗೆಗೆ ಚಾಲನೆ ನೀಡಿದರು.  ಬಳಿಕ ಮಾತನಾಡಿದ ಅವರು, ಆರೋಗ್ಯ ಮತ್ತು ಅಂಗಾಂಗ ದಾನದ ಕುರಿತು ಸಮಾಜದಲ್ಲಿ ನಿರಂತರ ಜಾಗೃತಿ ಮೂಡಿಸುವ ಅಗತ್ಯವಿದೆ. ವಿಶೇಷವಾಗಿ ಅಂಗಾಂಗ ದಾನದ ಮಹತ್ವವನ್ನು ಹೆಚ್ಚಿನ ಜನರಿಗೆ ತಲುಪಿಸಬೇಕು ಎಂದರು.  

ಪುಣೆ, ಮುಂಬೈ ಹಾಗೂ ಬೆಂಗಳೂರಿನಂತಹ ಮಹಾನಗರಗಳಲ್ಲಿ ದೊರೆಯುವ ಅತ್ಯಾಧುನಿಕ ವೈದ್ಯಕೀಯ ಸೌಲಭ್ಯಗಳನ್ನು ಸ್ಥಳೀಯ ಜನರಿಗೆ ಕೈಗೆಟಕುವ ವೆಚ್ಚದಲ್ಲಿ ಒದಗಿಸಲಾಗುತ್ತಿದೆ. ವಿಶೇಷವಾಗಿ ಯಕೃತ್ತು (ಲೀವರ) ಕಸಿ ಚಿಕಿತ್ಸೆಯನ್ನು ಕಡಿಮೆ ವೆಚ್ಚದಲ್ಲಿ ಯಶಸ್ವಿಯಾಗಿ ನೀಡಲಾಗುತ್ತಿದ್ದು, ಗುಣಮಟ್ಟದ ಆರೋಗ್ಯ ಸೇವೆ ನೀಡುವುದು ಆಸ್ಪತ್ರೆಯ ಪ್ರಮುಖ ಧ್ಯೇಯವಾಗಿದೆ ಎಂದು ತಿಳಿಸಿದರು.  

ಡಿಸಿಪಿ ನಾರಾಯಣ ಭರಮನಿ ಮಾತನಾಡಿ, ಡಾ. ಪ್ರಭಾಕರ ಕೋರೆ ಆಸ್ಪತ್ರೆಯಲ್ಲಿ ಅತ್ಯಾಧುನಿಕ ವೈದ್ಯಕೀಯ ಸೌಲಭ್ಯಗಳು ಹಾಗೂ ಗುಣಮಟ್ಟದ ಚಿಕಿತ್ಸೆ ಲಭ್ಯವಿದೆ. ತಾವು ಸಹ ಇಲ್ಲಿ ಚಿಕಿತ್ಸೆ ಪಡೆದ ಅನುಭವ ಹೊಂದಿದ್ದು, ವೈದ್ಯರು ಮತ್ತು ಸಿಬ್ಬಂದಿಯ ಸೇವೆ ಅತ್ಯಂತ ಕಾಳಜಿಪೂರ್ಣ ಹಾಗೂ ಶ್ಲಾಘನೀಯವಾಗಿದೆ ಎಂದು ಹೇಳಿದರು.  

ನಂತರ ಆಸ್ಪತ್ರೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಿರಿಯ ಗ್ಯಾಸ್ಟ್ರೊಎಂಟ್ರಾಲಾಜಿಸ್ಟ್‌ ಡಾ. ಸಂತೋಷ ಹಜಾರೆ ಮಾತನಾಡಿ, ಹೆಪಾಟೈಟಿಸ್‌-ಬಿ ಮತ್ತು ಸಿ ಯಕೃತ್ತಿನ ಗಂಭೀರ ಕಾಯಿಲೆಗಳು ಹಾಗೂ ಸಾವಿಗೆ ಪ್ರಮುಖ ಕಾರಣಗಳಾಗಿವೆ. ಲಸಿಕಾಕರಣ, ಆರಂಭಿಕ ಹಂತದಲ್ಲೇ ತಪಾಸಣೆ ಮತ್ತು ಸಮಯೋಚಿತ ಚಿಕಿತ್ಸೆ ಮೂಲಕ ಈ ಸೋಂಕನ್ನು ಪರಿಣಾಮಕಾರಿಯಾಗಿ ತಡೆಯಬಹುದು ಎಂದರು.