ಲೋಕದರ್ಶನ ವರದಿ
ಶಿರಹಟ್ಟಿ 26: ಎದೆಯಲ್ಲಿ ನೋವು ಉಂಟಾಗುವದು, ಎರಡು ವಾರಕ್ಕಿಂತ ಹೆಚ್ಚು ದಿನ ಸತತವಾಗಿ ಕೆಮ್ಮುವದು, ಸಂಜೆ ವೇಳೆ ಜ್ವರ ಕಾಣಿಸುವದು ಮತ್ತು ಕಫದಲ್ಲಿ ರಕ್ತ ಬೀಳುವ ಲಕ್ಷಣಗಳು ಕಂಡು ಬಂದಲ್ಲಿ ಹತ್ತಿರದ ಸರಕಾರಿ ಆಸ್ಪತ್ರೆಯಲ್ಲಿ ಸೂಕ್ತ ತಪಾಸಣೆ ಮಾಡಿಸಿ ಚಿಕಿತ್ಸೆ ಪಡೆಯುವದು ಉತ್ತಮ ಎಂದು ಪಟ್ಟಣದ ಸರಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಚಂದ್ರು ಲಮಾಣಿ ಹೇಳಿದರು.
ಅವರು ಪಟ್ಟಣದ ಸರಕಾರಿ ಆಸ್ಪತ್ರೆಯಲ್ಲಿ "ಸಕ್ರೀಯ ಕ್ಷಯರೋಗ ಪತ್ತೆ ಹಾಗೂ ಚಿಕಿತ್ಸೆ ಆಂದೋಲನ" ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಜನೇವರಿ 2019 ರಿಂದ ಇಲ್ಲಿಯವರೆಗೆ ತಾಲೂಕಿನಲ್ಲಿ 120 ಕ್ಷಯ ರೋಗಿಗಳನ್ನು ತಪಾಸಣೆ ಮಾಡಲಾಗಿದ್ದು ಅದರಲ್ಲಿ 60ಕ್ಕಿಂತ ಹೆಚ್ಚು ರೋಗಿಗಳ ಚಿಕಿತ್ಸೆ ಪೂರ್ಣವಾಗಿದೆ. ಹೆಚ್ಚಾಗಿ ಕೊಳಚೆ ಪ್ರದೇಶದಲ್ಲಿ ವಾಸಿಸುವರಿಗೆ ಈ ಕುರಿತು ಹೆಚ್ಚಿನ ಜಾಗೃತಿ ಮುಡಿಸುವ ಅವಶ್ಯಕತೆಯಿದೆ. ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ ಅಶಾ ಕಾರ್ಯಕರ್ತೆಯರು ಶಿರಹಟ್ಟಿ ಪಟ್ಟಣದ ಕೆಲವು ವಾರ್ಡಗಳಲ್ಲಿ ಮತ್ತು ಸುತ್ತಲಿನ ಗ್ರಾಮಗಳಲ್ಲಿ ರೋಗದ ಕುರಿತಾಗಿ ಮಾಹಿತಿ ಮತ್ತು ರೋಗದ ಲಕ್ಷಣಗಳನ್ನು ತಿಳಿಸುತ್ತಿದ್ದಾರೆ ಎಂದು ಹೇಳಿದರು.
ನಂತರ ತಾಲೂಕಾ ವೈದ್ಯಾಧಿಕಾರಿ ಸುಭಾಸ ದೈಗೊಂಡ ಮಾತನಾಡಿ ಮೈಕೊ ಬ್ಯಾಕ್ಟೇರಿಯಾದಿಂದ ಹರಡುವ ಒಂದು ಸಂಕ್ರಾಮಿಕ ರೋಗ ಇದಾಗಿದ್ದು ಸೋಂಕಿರುವ ವ್ಯಕ್ತಿ ಸೀನಿದಾಗ ಹರಡುತ್ತದೆ. ಒಂದು ಅಂದಾಜಿನ ಪ್ರಕಾರ ವರ್ಷದಲ್ಲಿ ಒಬ್ಬರಿಂದ 10 ಜನರಿಗೆ ಈ ರೋಗ ಹರಡುತ್ತದೆ. ನಿರಂತರ ಚಿಕಿತ್ಸೆಯಿಂದ ಈ ರೋಗವನ್ನು ತಡೆಗಟ್ಟಬಹುದು. ಸರಕಾರ ಕ್ಷಯರೋಗ ಚಿಕಿತ್ಸೆ ಪಡೆಯುವ ರೋಗಿಗಳಿಗೆ ನಿಕ್ಷಯ ಪೋಷಣ ಅಭಿಯಾನದಡಿ ಉಚಿತ ಚಿಕಿತ್ಸೆಯ ಜೋತೆಗೆ ಪೌಷ್ಟಿಕಾಂಸ ಆಹಾರ ಸೇವನೆಗೆ 500 ರೂಗಳನ್ನು ನೇರವಾಗಿ ರೋಗಿಗೆ ನೀಡುತ್ತದೆ ಎಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಮಹೇಶ ಗುಡ್ಡದವರ, ರಾಜಶೇಕರ ಅಜ್ಜಿಯವರ, ಡಾ. ಸಂಜೀವ ಬಿರಾದಾರ, ಆನಂದ ಚಳಗೇರಿ, ಎನ್.ಎಸ್.ಕಮತದ, ಎಸ್.ಎಸ್.ಪೂಜಾರ ಹಾಗೂ ಆಶಾ ಕಾರ್ಯಕತರ್ೆಯರು ಇದ್ದರು. ಕ್ಷಯರೋಗ ಚಿಕಿತ್ಸಾ ಮೇಲ್ವಿಚಾರಕ ಶಿವಕುಮಾರ ನಾಗೂರ ಕಾರ್ಯಕ್ರಮ ನಿರೂಪಿಸಿದರು.