ತಂತ್ರಜ್ಞಾನದ ಸಮರ್ಪಕ ಬಳಕೆಗೆ ಅರಿವು ಅತ್ಯಗತ್ಯ: ಟಿ.ಭೂಬಾಲನ್

Awareness is essential for adequate use of technology: T. Bhubalan

ವಿಜಯಪುರ, ಫೆ.11: ಅಂತರ್ಜಾಲವು ಒಂದು ಶಕ್ತಿಯುತ ಸಾಧನವಾಗಿದೆ. ಸರಿಯಾದ ಬಳಕೆಯು ಜೀವನವನ್ನು ಸುಲಭಗೊಳಿಸಬಹುದಾಗಿದ್ದು, ತಂತ್ರಜ್ಞಾನವನ್ನು ಜವಾಬ್ದಾರಿಯುತವಾಗಿ ಬಳಸಬೇಕು. ಸಮರ​‍್ಕ ಬಳಕೆಗೆ ಅರಿವು ಅತ್ಯಗತ್ಯವಾಗಿದೆ ಎಂದು ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಹೇಳಿದರು.  

ನಗರದ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಮಂಗಳವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ಮಾಹಿತಿ ತಂತ್ರಜ್ಞಾನ ಇಲಾಖೆಯ ಸಂಯುಕ್ತಾಶ್ರದಲ್ಲಿ ಹಮ್ಮಿಕೊಂಡಿದ್ದ ಸುರಕ್ಷಿತ ಅಂತರ್ಜಾಲ ದಿನದ  ಅಂಗವಾಗಿ ಹಮ್ಮಿಕೊಂಡ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಆಧುನಿಕ ಜಗತ್ತಿನಲ್ಲಿ ಅಂತರ್ಜಾಲವು ಮಾನವ ಬದುಕಿನ ಅವಿಭಾಜ ಅಂಗವಾಗಿದೆ. ಇದರ ನಡುವೆಯೇ ವಿವಿಧ ಮಾದರಿಗಳಲ್ಲಿ ಸೈಬರ್ ವಂಚನೆ ನಡೆಯುತ್ತಿದೆ. ಸೈಬರ್ ವಂಚನೆಗಳನ್ನು ತಡೆಗಟ್ಟಲು ಸಾರ್ವಜನಿಕರು ಜಾಗೃತಿ ಹೊಂದಬೇಕು. ದತ್ತಾಂಶ ಹಾಗೂ ಮಾಹಿತಿಯ ಸಂರಕ್ಷಣೆಯ ಅರಿವು ಹೊಂದುವುದು ಅತ್ಯವಶ್ಯಕವಾಗಿದೆ. ಸಮರ​‍್ಕವಾಗಿ ಅರಿವು ಹೊಂದಿದಾಗ ಮಾತ್ರ ಸೈಬರ್ ವಂಚನೆಯನ್ನು ತಪ್ಪಿಸಬಹುದಾಗಿದೆ ಎಂದು ಹೇಳಿದರು. 

ಜಿಲ್ಲಾ ಮಟ್ಟದ ಅಧಿಕಾರಿಗಳು ಕಚೇರಿಗಳಲ್ಲಿ ತಮ್ಮ ವೈಯಕ್ತಿಕ ಲಾಗಿನ್‌ಗಳ ಬಗ್ಗೆ ಅರಿವು ಹೊಂದಿ ಸುರಕ್ಷಿತವಾಗಿರುವುದನ್ನು ಖಾತ್ರಿಪಡಿಸಿಕೊಳ್ಳುವ ಮೂಲಕ ಬೇರೆಯವರಿಗೆ ಮಾಹಿತಿ ಹಂಚಿಕೆಯಾಗದಂತೆ ಎಚ್ಚರಿಕೆ ವಹಿಸಬೇಕು. ಅಂತರಜಾಲಯು ಮಾಹಿತಿಯ ಆಗರವಿದ್ದು, ಅದರ ಬಳಕೆ ಕುರಿತು ಸ್ವಯಂ ಅರಿವು ಹೊಂದಬೇಕು ಎಂದು ತಿಳಿಸಿದ ಅವರು, ಸೈಬರ್ ಅಪರಾಧಗಳ ಕುರಿತಾಗಿ ಗ್ರಾಮೀಣ ಭಾಗದ ಜನರಿಗೆ ಸೂಕ್ತ ತಿಳುವಳಿಕೆ ನೀಡುವ ಜನಜಾಗೃತಿ ಕಾರ್ಯಕ್ರಮ ಜಿಲ್ಲೆಯಲ್ಲಿ ಹಮ್ಮಿಕೊಂಡು ಪರಿಣಾಮಕಾರಿಯಾಗಿ ಜಾಗೃತಿ ಮೂಡಿಸಲಾಗುವುದು ಎಂದು ಅವರು ಹೇಳಿದರು. 

ಇಂದಿನ ತಂತ್ರಜ್ಞಾನದ ಯುಗದಲ್ಲಿ ಪ್ರತಿಯೊಬ್ಬರು ಯಾವುದಾದರೊಂದು ತಂತ್ರಜ್ಞಾನದ ಬಳಕೆ ದಿನನಿತ್ಯ ಮಾಡುತ್ತಿದ್ದಾರೆ. ಇದರ ಸಮರ​‍್ಕ ಬಳಕೆಯಾಗಬೇಕು. ಇದರ ದುರುಪಯೋಗವಾಗದಂತೆ, ಯಾವುದೇ ಸೈಬರ್ ವಂಚನೆಗಳಿಗೆ ಅವಕಾಶ ನೀಡದೇ, ಮೊಬೈಲ್ ಸೇರಿದಂತೆ ತಂತ್ರಜ್ಞಾನದ  ಸೂಕ್ತ ಅರಿವು-ತಿಳುವಳಿಕೆ ಹೊಂದಬೇಕು. ಸಂಶಯಾಸ್ಪದ ಕರೆಗಳಿಗೆ ಸ್ಪಂದಿಸದೇ, ಯಾವುದೇ ವೈಯಕ್ತಿಕ ವಿವರಗಳನ್ನು ಅಪರಿಚಿತರೊಂದಿಗೆ ಹಂಚಿಕೊಳ್ಳಬಾರದು. ತಂತ್ರಜ್ಞಾನದ ಸಂಪೂರ್ಣ ಮಾಹಿತಿಯನ್ನು ಅರಿತುಕೊಂಡು ಜಾಗರೂಕತೆಯಿಂದ,  ಸಮರ​‍್ಕವಾಗಿ ಬಳಕೆ ಮಾಡಬೇಕು ಎಂದು ಅವರು ಹೇಳಿದರು.  

ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದ ಅಲ್ತಾಬ್ ಬಾಲಸಿಂಗ್ ಅವರು ಮಾತನಾಡಿ, ಯಾವುದೇ ರೀತಿ ಸೈಬರ್ ವಂಚನೆಗೆ ಗುರಿಯಾದಲ್ಲಿ ಸಹಾಯವಾಣಿ 1930ಗೆ ಕರೆ ಮಾಡಿ ದೂರು ಸಲ್ಲಿಸಬಹುದು ಹಾಗೂ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಬಹುದು.ಇದೇ ಸಂದರ್ಭದಲ್ಲಿ www.cybercrime.gov.in ವೆಬ್ ಸೈಟ್ ನಲ್ಲಿ ದೂರು ನೀಡುವುದರ ಬಗ್ಗೆ ವಿವರಿಸಿದರು.   

 ದಿನನಿತ್ಯದ ಜೀವನದಲ್ಲಿ ಇಂಟರ್‌ನೆಟ್ ಬಳಕೆ, ಅದರ ಸಾಧಕ-ಬಾಧಕಗಳು, ಸೈಬರ್ ವಂಚನೆಗಳು, ವಂಚನೆಗೊಳಗಾಗದ ಸಂದರ್ಭದಲ್ಲಿ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳು, ಮೋಸ ಹೋಗದಂತೆ ಮುನ್ನೆಚ್ಚೆರಿಕೆ ಕ್ರಮಗಳ ಕುರಿತು ಪಿಪಿಟಿ ಮೂಲಕ ಮಾಹಿತಿ ನೀಡಿದರು. 

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ವಿಜಯಕುಮಾರ ಆಜೂರ, ಮುಖ್ಯ ಯೋಜನಾಧಿಕಾರಿ ನಿಂಗಪ್ಪ ಗೋಠೆ, ಯೋಜನಾ ನಿರ್ದೇಶಕ ಬಿ.ಎಸ್‌.ರಾಠೋಡ, ಮುಖ್ಯ ಲೆಕ್ಕಪತ್ರಾಧಿಕಾರಿ ರಾಮಣ್ಣ ಅಥಣಿ, ಎನ್‌ಐಸಿ ಅಧಿಕಾರಿ ಶಿವಾನಂದ ಗೂಗವಾಡ ಸೇರಿದಂತೆ ಜಿಲ್ಲಾ ಹಾಗೂ ತಾಲೂಕಾ ಮಟ್ಟದ ಅಧಿಕಾರಿ-ಸಿಬ್ಬಂದಿಗಳು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಅಂತರ್‌ಜಾಲ ಜಾಗೃತಿ ಕುರಿತ ಕರಪತ್ರಗಳನ್ನು ಬಿಡುಗಡೆಗೊಳಿಸಿದರು.