ಗಂಗಾವತಿಯಲ್ಲಿ ಕೇಂದ್ರ ಪುರಸ್ಕೃತ ಯೋಜನೆಗಳ ಜಾಗೃತಿ ಅಭಿಯಾನ
ಕೊಪ್ಪಳ 19: ಬಳ್ಳಾರಿಯ ಕೇಂದ್ರ ಸಂವಹನ ಇಲಾಖೆ ವತಿಯಿಂದ ಕೊಪ್ಪಳ ಜಿಲ್ಲೆಯ ಗಂಗಾವತಿಯ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಕೇಂದ್ರ ಪುರಸ್ಕೃತ ಯೋಜನೆಗಳ ಛಾಯಾಚಿತ್ರ ಪ್ರದರ್ಶನ ಹಾಗೂ ಜನ ಜಾಗೃತಿ ಕಾರ್ಯಕ್ರಮ ಬುಧವಾರ ಆಯೋಜಿಸಲಾಯಿತು. ಛಾಯಾಚಿತ್ರ ಪ್ರದರ್ಶನದ ಉದ್ಘಾಟನೆ ನೆರವೇರಿಸಿ ಮಾತನಾಡಿದ ನಗರಸಭೆ ಅಧ್ಯಕ್ಷರಾದ ಮೌಲಾಸಾಬ ದಾದೆಸಾಬ ಅವರು, ಗ್ರಾಮೀಣ ಭಾಗಗಳ ಜನರಿಗೆ ಸರ್ಕಾರದ ಯೋಜನೆಗಳ ಮಾಹಿತಿ ತಲುಪಬೇಕು. ಇಂತಹ ಛಾಯಾಚಿತ್ರ ಪ್ರದರ್ಶನಗಳು ಈ ನಿಟ್ಟಿನಲ್ಲಿ ಮಾಹಿತಿಪೂರ್ಣವಾಗಿವೆ ಎಂದರು. ಕೇಂದ್ರ ಸರ್ಕಾರದ ಪಿಂಚಣಿ ಹಾಗೂ ವಿಮಾ ಯೋಜನೆಗಳ ಕುರಿತು ಮಾಹಿತಿ ನೀಡಿದ ಎಸ್.ಬಿ.ಐ ಬ್ಯಾಂಕ್‌ನ ಆರ್ಥಿಕ ಸಲಹೆಗಾರರಾದ ಆಂಜನೇಯ ಅವರು ಮಾತನಾಡಿ, ಕೇಂದ್ರ ಸರ್ಕಾರದ ಸಾಮಾಜಿಕ ಭದ್ರತಾ ಯೋಜನೆಗಳು ತಳಮಟ್ಟದ ಜನರಿಗೆ ಆರ್ಥಿಕ ಭದ್ರತೆ ಕಲ್ಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಅಟಲ್ ಪಿಂಚಣಿ ಯೋಜನೆ ವಯಸ್ಕರಿಗೆ ಹಣಕಾಸು ಭದ್ರತೆ ಒದಗಿಸುತ್ತದೆ. ಜನರ ಸುರಕ್ಷೆಯ ಹಿತಕ್ಕಾಗಿ ಕೇಂದ್ರ ಸರ್ಕಾರ ಸುರಕ್ಷಾ ವಿಮಾ ಯೋಜನೆ ಹಾಗೂ ಪ್ರಧಾನ ಮಂತ್ರಿ ಜೀವನ ಜ್ಯೋತಿ ವಿಮಾ ಯೋಜನೆ ಪರಿಚಯಿಸಿದೆ. ಅಟಲ್ ಪಿಂಚಣಿ ಯೋಜನೆ ಅಡಿ ವಯೋವೃದ್ಧರು ಆರ್ಥಿಕ ಭದ್ರತೆ ಪಡೆಯಬಹುದಾಗಿದೆ ಎಂದರು. ಆಯುಷ್ಮಾನ್ ಭಾರತ ಹಾಗೂ ಕ್ಷಯ ಮುಕ್ತ ಭಾರತ ಕುರಿತು ಆರೋಗ್ಯ ಇಲಾಖೆಯ ಆಶಾ ಬೇಗಂ ಮಾತನಾಡಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ರುದ್ರೇಶ್ ಅವರು ಮಾತನಾಡಿ, ಮಹಿಳೆಯರು ಮತ್ತು ಮಕ್ಕಳ ಹಿತಕ್ಕಾಗಿ ಕೇಂದ್ರ ಸರ್ಕಾರದ ಅನುಷ್ಟಾನಕ್ಕೆ ತಂದಿರುವ ಯೋಜನೆಗಳ ಮಾಹಿತಿಯನ್ನು ಛಾಯಾಚಿತ್ರ ಪ್ರದರ್ಶನದಲ್ಲಿ ನೀಡಲಾಗಿದ್ದು ಗ್ರಾಮೀಣ ಹಾಗೂ ನಗರ ಭಾಗಗಳ ಮಹಿಳೆಯರು ಇದರ ಪ್ರಯೋಜನ ಪಡೆಯಬೇಕು ಎಂದರು. ಉಪ ತಹಶೀಲ್ದಾರ್ ರವಿ ಕುಮಾರ್, ಶಿಕ್ಷಣ ಇಲಾಖೆಯ ಉಮಾ ದೇವಿ ಪಾಟೀಲ್ ಹಾಗೂ ಶ್ರೀ. ಡಿ. ಆಂಜನೇಯ ಸ್ವಾಮಿ. ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಪ್ರಸನ್ನ, ಕೇಂದ್ರ ಸಂವಹನ ಇಲಾಖೆಯ ಕ್ಷೇತ್ರ ಪ್ರಚಾರ ಅಧಿಕಾರಿ ಅಕ್ಷತಾ ಸಿ.ಹೆಚ್., ಇಲಾಖೆಯ ಸಿಬ್ಬಂದಿ ರಾಮಕೃಷ್ಣಪ್ಪ ಹಾಗೂ ಲಕ್ಷ್ಮೀಕಾಂತ ಉಪಸ್ಥಿತರಿದ್ದರು. ಜಾಗೃತಿ ಕಾರ್ಯಕ್ರಮದ ಅಂಗವಾಗಿ ಕಲಾ ತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಛಾಯಾಚಿತ್ರ ಪ್ರದರ್ಶನ ಫೆ.20 ರಂದು ಸಹ ಇರುತ್ತದೆ.