ಆಸ್ಟ್ರೇಲಿಯಾ ಓಪನ್: ಜೊಕೊವಿಚ್ ವಿರುದ್ಧ ಸೆಣಸುವ ಸುವರ್ಣಾವಕಾಶ ಕಳೆದುಕೊಂಡ ಪ್ರಜ್ಞೇಶ್ ಗುಣೇಶ್ವರನ್

ಮೆಲ್ಬೋರ್ನ್, ಜ 21 :    ಭಾರತದ ಅಗ್ರ ಶ್ರೇಯಾಂಕಿತ ಟೆನಿಸ್ ಆಟಗಾರ ಪ್ರಜ್ಞೇಶ್ ಗುಣೇಶ್ವರನ್ ಅವರು ಇಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ಓಪನ್ ಪುರುಷರ ಸಿಂಗಲ್ಸ್ ಮೊದಲನೇ ಸುತ್ತಿನಲ್ಲಿ ಸೋಲು ಅನುಭವಿಸಿದ್ದಾರೆ. ಆ ಮೂಲಕ ವಿಶ್ವದ ಎರಡನೇ ಶ್ರೇಯಾಂಕಿತ ನೊವಾಕ್ ಜೊಕೊವಿಚ್ ವಿರುದ್ಧ ಸೆಣಸುವ ಅವಕಾಶವನ್ನು ಕಳೆದುಕೊಂಡರು.

  
 ಟೂರ್ನಿಯ ಅರ್ಹತಾ ಸುತ್ತಿನ ಕೊನೆಯ ಪಂದ್ಯದಲ್ಲಿ ಸೋಲಿನ ಹೊರತಾಗಿಯೂ 122ನೇ ಶ್ರೇಯಾಂಕಿತ ಪ್ರಜ್ಞೇಶ್ ಗುಣೇಶ್ವರನ್ ಅವರು ಅದೃಷ್ಟದಿಂದ ಪ್ರಧಾನ ಸುತ್ತಿಗೆ ಲಗ್ಗೆ ಇಟ್ಟಿದ್ದರು.  ಆದರೆ, ವೇಳಾಪಟ್ಟಿಯ ಪರಿಷ್ಕರಿಸಿದ ಪರಿಣಾಮ ಮಂಗಳವಾರ ಬೆಳಗ್ಗೆ ಆಡಿದ್ದ ಮೊದಲ ಸುತ್ತಿನ ಹಣಾಹಣಿಯಲ್ಲಿ ಜಪಾನ್ ನ ವೈಲ್ಡ್ ಕಾರ್ಡ್ ತಾತ್ಸುಮ ಇಟೋ ವಿರುದ್ಧ 4-6, 2-6, 5-7 ಅಂತರದಲ್ಲಿ ಸೋಲು ಅನುಭವಿಸಿದರು. ಒಟ್ಟಾರೆ, ಎರಡು ಗಂಟೆ ಒಂದು ನಿಮಿಷಗಳ ಕಾಲ ನಡೆದ ಸುದೀರ್ಘ ಕಾಳಗದಲ್ಲಿ ಭಾರತದ ಆಟಗಾರನಿಗೆ ನಿರಾಸೆ ಆಯಿತು.
  
ಈ ಸೋಲಿನೊಂದಿಗೆ ಪ್ರಜ್ಞೇಶ್ ಗುಣೇಶ್ವರನ್ ಅವರು  ಸರ್ಬಿಯಾ ಸ್ಟಾರ್ ಆಟಗಾರ ನೊವಾಕ್ ಜೊಕೊವಿಚ್ ವಿರುದ್ಧ ಎರಡನೇ ಸುತ್ತಿನಲ್ಲಿ ಸೆಣಸಬಹುದಾದ ಸುವರ್ಣ ಅವಕಾಶವನ್ನು ಕಳೆದುಕೊಂಡರು. ಚೆನ್ನೈ ಆಟಗಾರನ ಬದಲಿಗೆ ಇದೀಗ ಇಟೋ ಅವರು ವಿಶ್ವದ ಎರಡನೇ ಶ್ರೇಯಾಂಕಿತ ಆಟಗಾರನ ವಿರುದ್ಧ ಸೆಣಸಲಿದ್ದಾರೆ.
  
ವಿಂಬಲ್ಡನ್, ಫ್ರೆಂಚ್ ಓಪನ್ ಹಾಗೂ ಯುಎಸ್ ಓಪನ್ ಆಡಿದ್ದ ಪ್ರಜ್ಞೇಶ್ ಗುಣೇಶ್ವರನ್ ಅವರಿಗೆ ಆಸ್ಟ್ರೇಲಿಯಾ ಓಪನ್ ಸತತ ಐದನೇ ಗ್ರ್ಯಾನ್ ಸ್ಲ್ಯಾಮ್ ಆಗಿತ್ತು. ಆದರೆ, ಮೊದಲನೇ ಸುತ್ತಿನಲ್ಲಿ ಸೋಲು ಅನುಭವಿಸಿದರು. ಗುಣೇಶ್ವರನ್ ಸೋಲಿನೊಂದಿಗೆ ಭಾರತದ  ಏಕೈಕ ಸಿಂಗಲ್ಸ್ ಸವಾಲು ಅಂತ್ಯವಾಯಿತು. ಪುರಿಷರ ಡಬಲ್ಸ್ ವಿಭಾಗದಲ್ಲಿ ಭಾರತದ ಡಿವಿಜ್ ಶರಣ್ ಹಾಗೂ ಜತೆಗಾರ ಅರ್ಟೆಮ್ ಸಿಟಾಕ್ ಜೋಡಿಯು ಮೊದಲನೇ ಸುತ್ತಿನಲ್ಲಿ ಸ್ಪಾನೀಷ್ ಪೋರ್ಚುಗೀಸ್ ನ ಪ್ಯಾಬ್ಲೊ ಕಾರೆನೊ ಮತ್ತು ಜಾವೊ ಸೌಸ ಜೋಡಿಯ ವಿರುದ್ಧ ಸೆಣಸಲಿದೆ.
  
ರೋಹನ್ ಬೋಪಣ್ಣ ಹಾಗೂ  ಜಪಾನ್ ನ ಯಸುಟಕ ಯುಚಿಯಮ್ ಜೋಡಿಯು 13 ನೇ ಶ್ರೇಯಾಂಕದ ಅಮೆರಿಕದ ಬಾಬ್ ಬಿಯನ್ ಹಾಗೂ ಮೈಕ್ ಬ್ರಿಯನ್ ಜೋಡಿಯನ್ನ ಸೆಣಸಲಿದೆ.
  
 ಮಹಿಳಾ ಡಬಲ್ಸ್ ವಿಭಾಗದಲ್ಲಿ ಭಾರತದ ಸಾನಿಯಾ ಮಿರ್ಜಾ ಹಾಗೂ ಉಕ್ರೈನ್ ನ ನದಿಯಾ ಕಿಚ್ನಾಕ್ ಜೋಡಿಯು ಚೀನಾದ ಕ್ಸಿಯುನ್ ಹಾನ್ ಮತ್ತು ಲಿನ್ ಝು ಜೋಡಿಯ ವಿರುದ್ಧ ಕಾದಾಟ ನಡೆಸಲಿದೆ.