ಬೆಂಗಳೂರು, ಜು.10: ತಾವು ಇನ್ನು 3 ತಿಂಗಳ ಕಾಲ ಸ್ವ ಕ್ಷೇತ್ರವಾದ ಯಶವಂತಪುರ ಹಾಗೂ ಆರ್ ಆರ್ ನಗರದ ಎಲ್ಲ ವಾರ್ಡ್ ಗಳಲ್ಲಿ ಕೋವಿಡ್ ನಿಯಂತ್ರಣಕ್ಕೆ ಶ್ರಮವಹಿಸುತ್ತೇನೆ. ಈ ಹಿನ್ನೆಲೆಯಲ್ಲಿ ವಿಕಾಸಸೌಧಕ್ಕೂ ಹೋಗದೆ ಇಲ್ಲಿಯೇ ಕಚೇರಿಯಲ್ಲಿ ಕಾರ್ಯನಿರ್ವಹಣೆ ಮಾಡುತ್ತೇನೆ ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದ್ದಾರೆ.
ಗುರುವಾರವಷ್ಟೇ ಮುಖ್ಯಮಂತ್ರಿಗಳು ಸಭೆ ನಡೆಸಿ ಕೋವಿಡ್ 19 ಸೋಂಕು ನಿಯಂತ್ರಣ ಸಂಬಂಧ ಬೆಂಗಳೂರನ್ನು 8 ವಿಭಾಗಗಳಾಗಿ ವಿಂಗಡಿಸಿ ರಾಜರಾಜೇಶ್ವರಿ ನಗರ ವ್ಯಾಪ್ತಿಗೆ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಅವರನ್ನು ಉಸ್ತುವಾರಿಗಳನ್ನಾಗಿ ನೇಮಿಸಿದ ಹಿನ್ನೆಲೆಯಲ್ಲಿ ಶುಕ್ರವಾರವೇ ಈ ಭಾಗದ ಜನಪ್ರತಿನಿಧಿಗಳು, ಕಾರ್ಪೋರೇಟರ್ ಗಳು ಹಾಗೂ ಆರೋಗ್ಯ, ಬಿಬಿಎಂಪಿ, ಕಂದಾಯ ಇಲಾಖೆಗಳ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದರು.
ಪ್ರತಿ ದಿನ ಏನೇ ದೂರುಗಳಿದ್ದರೂ ತಮಗೆ ವಾಟ್ಸಪ್ ಮಾಡಿ, ತಾವು ಇನ್ನು ಕ್ಷೇತ್ರಕ್ಕೆ ಹೋಗುವ ತನಕ ಬೆಳಗ್ಗೆಯಿಂದ ಸಂಜೆವರೆಗೆ ಯಶವಂತಪುರ ಹಾಗೂ ಆರ್ ಆರ್ ನಗರ ವ್ಯಾಪ್ತಿಯಲ್ಲಿ ಕಚೇರಿ ಮಾಡಿ ಕೆಲಸ ಮಾಡುತ್ತೇನೆ. ಸಂಪುಟ ಸಭೆ ಇಲ್ಲವೇ ಇಲಾಖೆಗೆ ಸಂಬಂಧಪಟ್ಟ ಹಾಗೂ ಮುಖ್ಯಮಂತ್ರಿಗಳ ಸಭೆ ಇದ್ದರೆ ಮಾತ್ರ ವಿಕಾಸಸೌಧ ಕಚೇರಿಗೆ ಭೇಟಿ ಕೊಡುತ್ತೇನೆ. ಅಲ್ಲಿಯವರೆಗೆ ಈ ಭಾಗದಲ್ಲಿಯೇ ಇದ್ದು, ಕೋವಿಡ್ ನಿಯಂತ್ರಣಕ್ಕೆ ಶ್ರಮಿಸುತ್ತೇನೆ ಎಂದು ಸಚಿವರು ತಿಳಿಸಿದರು.
ಸೋಮವಾರದ ನಂತರ ಆರ್ ಆರ್ ನಗರದ ಉಪ ವಿಭಾಗಗಳಿಗೆ ಕಾರ್ಪೋರೇಟರ್ ಸೇರಿದಂತೆ 10 ಜನರ ತಂಡವನ್ನು ರಚನೆ ಮಾಡಲಾಗುವುದು. 6 ಸಬ್ ಡಿವಿಜನ್ ಗಳನ್ನಾಗಿ ಮಾಡಿ ಎಲ್ಲ ಪತ್ರಿಕೆಗಳಿಗೂ ಜಾಹೀರಾತು ಕೊಟ್ಟು ಯಾರನ್ನು ಸಂಪರ್ಕ ಮಾಡಬೇಕು ಎಂಬ ಮಾಹಿತಿಯನ್ನು ಕೊಡಲಾಗುವುದು. ಇದರಿಂದ ಸಾರ್ವಜನಿಕರಿಗೂ ಸಹ ಅನುಕೂಲವಾಗಲಿದೆ ಎಂದು ಸಚಿವರು ತಿಳಿಸಿದರು.
ಕೋವಿಡ್ 19 ನಿಯಂತ್ರಣಕ್ಕೆ ಸಂಬಂಧಪಟ್ಟಂತೆ ರಾಜರಾಜೇಶ್ವರಿ ನಗರ ವ್ಯಾಪ್ತಿಯ 9 ವಾರ್ಡ್ ಗಳ ಕಾರ್ಪೋರೇಟರ್ ಗಳನ್ನು ವೈಯುಕ್ತಿಕವಾಗಿ ಕರೆದು ಸಭೆ ನಡೆಸುತ್ತೇನೆ. ಸೋವಾರವೇ ಸಭೆ ನಡೆಸಲು ವ್ಯವಸ್ಥೆ ಮಾಡಿ ಎಂದು ಸಹಕಾರ ಸಚಿವರು ಹಾಗೂ ರಾಜರಾಜೇಶ್ವರಿ ನಗರದ ಮೇಲುಸ್ತುವಾರಿ ಎಸ್.ಟಿ.ಸೋಮಶೇಖರ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ತಾವು ಸಚಿವನಾದಾಗಿನಿಂದ ಒಂದು ದಿನವೂ ಆರಾಮ ಹಾಗೂ ವಿರಾಮವನ್ನು ತೆಗೆದುಕೊಂಡಿಲ್ಲ. ಎಪಿಎಂಸಿಗೆ ಭೇಟಿ ಕೊಡುವುದು, ಮೈಸೂರು ಉಸ್ತುವಾರಿ ನೋಡಿಕೊಳ್ಳುವುದು, ಪ್ರತಿ ಜಿಲ್ಲೆಗಳಿಗೆ ಭೇಟಿ ನೀಡುವುದು ಸೇರಿದಂತೆ ಕ್ಷೇತ್ರದಲ್ಲಿ ಅವಿರತವಾಗಿ ಸುತ್ತಾಡುತ್ತಿದ್ದೇನೆ ಎಂದು ಸಚಿವರು ತಿಳಿಸಿದರು.
ಆರ್ ಆರ್ ನಗರ ಹಾಗೂ ಯಶವಂತಪುರ ವ್ಯಾಪ್ತಿಯ ಇಂಜಿನಿಯರ್ ಗಳನ್ನು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಾರ್ಯಗಳಿಗೆ ನಿಯೋಜನೆ ಮಾಡದಂತೆ ಕ್ರಮವಹಿಸಲಾಗುವುದು, ಈ ಬಗ್ಗೆ ಮುಖ್ಯಮಂತ್ರಿಗಳ ಜೊತೆಯೂ ಚರ್ಚೆ ನಡೆಸಲಾಗುವುದು. ಇನ್ನು 2-3 ತಿಂಗಳು ಅವರು ಕ್ಷೇತ್ರದಲ್ಲೇ ಲಭ್ಯರಿರುವಂತೆ ನೋಡಿಕೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು.
ಇನ್ನು ಟೆಸ್ಟಿಂಗ್ ವರದಿ ವಿಳಂಬ ಹಿನ್ನೆಲೆ ಅನೇಕ ದೂರುಗಳು ಬಂದಿದ್ದು, ಮುಖ್ಯಮಂತ್ರಿಗಳ ಗಮನಕ್ಕೆ ತಂದು ಶೀಘ್ರದಲ್ಲೇ ಕ್ರಮವಹಿಸಲಾಗುವುದು. ಪ್ರತಿದಿನ ಮುಖ್ಯಮಂತ್ರಿಗಳು, ಗೃಹಮಂತ್ರಿಗಳು, ಆರೋಗ್ಯ ಸಚಿವರು ಹಾಗೂ ಎಲ್ಲ ಸಚಿವರು ಕೋವಿಡ್ ಬಗ್ಗೆಯೇ ಚರ್ಚೆ ನಡೆಸುತ್ತಿದ್ದೇವೆ. ನಮ್ಮ ಸರ್ಕಾರ ಸದಾ ಸಾರ್ವಜನಿಕರ ಹಿತರಕ್ಷಣೆಗೆ ಇದೆ ಎಂದು ಸೋಮಶೇಖರ್ ತಿಳಿಸಿದರು.
ಯಾವ ಕಡೆಯೂ ಪಾಸಿಟಿವ್ ಬಂದ ಮೇಲೆ ಯಾವ ರೋಗಿಗಳನ್ನು ಕಾಯಿಸದೇ ಆಸ್ಪತ್ರೆಗಳಿಗೆ ಕರೆದೊಯ್ಯುವ ಕೆಲಸವಾಗಬೇಕು. ಈ ಬಗ್ಗೆ ಎಲ್ಲ ಸಚಿವರೂ ಸೂಚನೆ ಮಾಡುತ್ತಿದ್ದಾರೆ. ಇನ್ನು 2-3 ದಿನಗಳಲ್ಲಿ ಯಾವ ರೀತಿ ಕೆಲಸವನ್ನು ಮಾಡಬೇಕು ಎಂಬ ನಿಟ್ಟಿನಲ್ಲಿ ಸರ್ಕಾರದ ವತಿಯಿಂದ ಮಾಡುತ್ತೇನೆ. ಇನ್ನು ಸರ್ಕಾರದ ವತಿಯಿಂದ ಯಾವುದೇ ತೊಂದರೆ ಇದ್ದರೂ ಸಹ ಸರಿಪಡಿಸುವ ಕೆಲಸವನ್ನೂ ಮಾಡುತ್ತೇನೆ. ಇಲ್ಲಿ ಪೊಲೀಸ್ ಉನ್ನತಾಧಿಕಾರಿಗಳ ಸಹಿತ ಹಲವು ಅಧಿಕಾರಿಗಳು ಸ್ಪಂದಿಸುತ್ತಿದ್ದಾರೆ ಎಂದು ಸಚಿವರು ತಿಳಿಸಿದರು.
ಇನ್ನು ಯಾವುದೇ ವಾರ್ಡ್ ನಲ್ಲಿ ದೂರುಗಳು ಬಂದರೆ ಆಯಾ ವಾರ್ಡ್ ಗಳ ಕಾರ್ಪೋರೇಟರ್ ಹಾಗೂ ಇಂಜಿನಿಯರ್ ಗಳೇ ಹೊಣೆಗಾರರಾಗುತ್ತಾರೆ. ಹೀಗಾಗಿ ತಕ್ಷಣ ದೂರುಗಳಿಗೆ ಸ್ಪಂದಿಸಿ ಬಗೆಹರಿಸಬೇಕು. ಈ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕು. ಆರ್ ಆರ್ ನಗರದಲ್ಲಿ ಯಾವ ಕಡೆ ಸ್ಯಾನಿಟೈಸರ್ ಇಲ್ಲ ಎಂಬ ದೂರುಗಳು ಬರುತ್ತಿವೆಯೋ ಅಲ್ಲಿಗೆ ಸೂಕ್ತ ವ್ಯವಸ್ಥೆ ಮಾಡಿ ಬೇಕಾದ ಸೌಕರ್ಯವನ್ನು ಒದಗಿಸಬೇಕು ಎಂದು ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.
ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಗಳನ್ನು ಹಾಕಲೇಬೇಕು. ಅವರು ಜನಪ್ರತಿನಿಧಿಗಳೇ ಆಗಿರಲಿ, ಅವರ ಆಪ್ತರೇ ಆಗಿರಲಿ ಅಥವಾ ಜನಸಾಮಾನ್ಯರೇ ಆಗಿರಲಿ ದಂಡ ವಿಧಿಸಬೇಕು. ಈ ಕೆಲಸವನ್ನು ಪೊಲೀಸರು ಯಾವುದೇ ಮುಲಾಜಿಲ್ಲದೆ ಮಾಡಲಿ, ಅವರಿಗೆ ನನ್ನ ಬೆಂಬಲವಿದೆ ಎಂದು ಸಚಿವರಾದ ಸೋಮಶೇಖರ್ ಹೇಳಿದರು.
ಕೋವಿಡ್ ಮುಗಿಯುವವರೆಗೂ ಸಹ ಆರ್ ಆರ್ ನಗರ ವ್ಯಾಪ್ತಿಯಲ್ಲಿ ಒಂದು ಸಣ್ಣ ದೂರುಗಳು ಬರದಂತೆ ನಾವು ನೋಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ ಸಲಹೆ ನೀಡಿದರು.
ಲಾಕ್ ಡೌನ್ ಇದ್ದಾಗ ಪ್ರಕರಣ ಹೆಚ್ಚು ಇರಲಿಲ್ಲ. ಯಾವಾಗ ಸಡಿಲಿಕೆಯಾಯಿತೋ ಆ ನಂತರ ಬೆಂಗಳೂರು ಸೇರದಂತೆ ರಾಜ್ಯದ ಎಲ್ಲ ಕಡೆ ಸೋಂಕಿತರ ಪ್ರಕರಣಗಳು ಹೆಚ್ಚಾಗತೊಡಗಿದವು. ಈ ಸಂಬಂಧ ರಾಜ್ಯ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳುತ್ತಿದೆ. ಸಾರ್ವಜನಿಕರು ತಾಳ್ಮೆ ಹಾಗೂ ಸಹಕಾರವನ್ನು ನೀಡಬೇಕು ಎಂದು ಸಚಿವರು ಕೋರಿಕೊಂಡರು.
ಪಾಸಿಟಿವ್ ಪ್ರಕರಣ ಬಂದ ಬೀದಿಗಳಲ್ಲಿ ಹಾಗೂ ಮನೆಗಳಲ್ಲಿ ಸಮರ್ಪಕವಾಗಿ ಸ್ಯಾನಿಟೈಸ್ ಮಾಡಲಾಗುತ್ತಿದೆಯೇ? ಎಂದು ಅಧಿಕಾರಿಗಳಿಗೆ ಪ್ರಶ್ನಿಸಿದ ಸಚಿವರು, ಈ ಬಗ್ಗೆ ದೂರುಗಳು ಬರದಂತೆ ಕ್ರಮ ವಹಿಸಬೇಕು. ಜೊತೆಗೆ ಎಲ್ಲೆಲ್ಲಿ ಸಮಸ್ಯೆ ಕಂಡಬಂದರೂ ತಕ್ಷಣವೇ ಸ್ಪಂದಿಸಿ ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.
ಆರ್ ಆರ್ ನಗರದ ಮಾಜಿ ಶಾಸಕರು ಹಾಗೂ ಬಿಜೆಪಿ ಮುಖಂಡರಾದ ಮುನಿರತ್ನ ಅವರು ಮಾತನಾಡಿ, ನಮ್ಮ ಕ್ಷೇತ್ರದಲ್ಲಿ ಕೋವಿಡ್ ಸಮಸ್ಯೆಗಳು ಕೆಲವು ಕಡೆ ಹೆಚ್ಚಾಗುತ್ತಿದ್ದು, ನಾವೆಲ್ಲ ಸೇರಿ ನಿಯಂತ್ರಣಕ್ಕೆ ಒತ್ತು ಕೊಡುತ್ತಿದ್ದೇವೆ. ಕೆಲವು ಕಡೆ ಸರಿಯಾಗಿ ಸ್ಪಂದನೆ ಸಿಗುತ್ತಿಲ್ಲ. ಅವುಗಳ ಬಗ್ಗೆ ಶೀಘ್ರವೇ ಕ್ರಮ ಕೈಗೊಳ್ಳಬೇಕು ಎಂದು ಸಚಿವರಿಗೆ ಮನವಿ ಮಾಡಿದರು.
ಸಹಕಾರ ಸಚಿವರಾದ ಎಸ್.ಟಿ.ಸೋಮಶೇಖರ್ ಅವರನ್ನು ಕ್ಷೇತ್ರದ ಕೋವಿಡ್ ನಿಯಂತ್ರಣಕ್ಕೆ ಉಸ್ತುವಾರಿಯನ್ನಾಗಿ ನೇಮಕ ಮಾಡಿರುವುದು ಸಂತಸದ ವಿಷಯ. ಅವರು ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸುವ ವ್ಯಕ್ತಿತ್ವವನ್ನು ಹೊಂದಿದ್ದಾರೆ ಎಂದು ಹೇಳಿದರು.
ಸಭೆಯಲ್ಲಿ ಕೇಳಿಬಂದ ಸಮಸ್ಯೆಗಳು;
ಪೊಲೀಸ್ ಸಿಬ್ಬಂದಿ ಸೇರಿ 148 ಮಂದಿಯ ಕೋವಿಡ್ ಪರೀಕ್ಷೆ ಮಾಡಿಸಿದ್ದು, ಒಂದು ವಾರವಾದರೂ ವರದಿ ಬಾರದೇ ಇರುವುದು ಸಮಸ್ಯೆಯಾಗುತ್ತಿದೆ. ಇದರಿಂದ ಸೋಂಕು ಹರಡುವ ಸಾಧ್ಯತೆ ಹೆಚ್ಚೇ ಇದೆ ಎಂದು ಅಧಿಕಾರಿಗಳು ಸಚಿವರ ಗಮನಕ್ಕೆ ತರಲಾಯಿತು.
ವಾರ್ಡ್ ಗಳಲ್ಲಿ ಪಾಸಿಟಿವ್ ಪ್ರಕರಣಗಳು ಕಂಡುಬಂದಾಗ ವೈದ್ಯಾಧಿಕಾರಿಗಳು ಅವರವರ ಮನೆಗಳಿಗೆ ಹೋಗಿ ಅಲ್ಲಿನ ಸ್ಥಿತಿ, ವಯಸ್ಸು ಸೇರಿದಂತೆ ವರದಿ, ಮಾಹಿತಿಗಳನ್ನು ಪಡೆಯಬೇಕಿದೆ. ಪಾಸಿಟಿವ್ ಇರುವವರ ಮನೆಗೆ ಹೋಗಿ ವೈದ್ಯರ ಆರೋಗ್ಯಕ್ಕೂ ಅಪಾಯಕಾರಿಯಾಗಿದ್ದು, ಪ್ರೊಟೆಕ್ಷನ್ ಕಿಟ್ ಗಳ ಸಮಸ್ಯೆಯೂ ಇದ್ದು, ಇವುಗಳಿಗಾಗಿಯೇ ಪ್ರತ್ಯೇಕ ತಂಡವನ್ನು ಮಾಡಬೇಕೆಂದು ಮನವಿ ಮಾಡಲಾಯಿತು.
ಸ್ವ್ಯಾಬ್ ಕೊಟ್ಟ ಮೇಲೆ ಮನೆಯಲ್ಲಿರಲಿ
ಕೋವಿಡ್ ಪರೀಕ್ಷೆ ಮಾಡಿಸಿದ ಮೇಲೆ ವರದಿ ಬರುವ ತನಕ ಮನೆಯಿಂದ ಹೊರಗಡೆ ಬರದಂತೆ ನೋಡಿಕೊಳ್ಳಬೇಕು. ಪ್ರೈಮರಿ ಹಾಗೂ ಸೆಕೆಂಡರಿ ಕಾಂಟ್ಯಾಕ್ಟ್ ಗಳನ್ನು ಬಹಳ ಜಾಗರೂಕತೆಯಿಂದ ಗುರುತಿಸಿ ನಿಯಂತ್ರಣಕ್ಕೆ ತರಬೇಕು ಎಂಬ ಸಲಹೆ, ಸೂಚನೆಯನ್ನು ಈ ಸಂದರ್ಭದಲ್ಲಿ ನೀಡಲಾಯಿತು.
ಅಧಿಕಾರಿಗಳಿಂದ ಇಲ್ಲ ಸ್ಪಂದನೆ; ಆರೋಪ
ಅಧಿಕಾರಿಗಳಿಂದ ಸೂಕ್ತ ಸ್ಪಂದನೆ ಸಿಗುತ್ತಿಲ್ಲ. ಬಹಳ ಸಬೂಬುಗಳು ಕೇಳಿಬರುತ್ತಿವೆ. ಪಾಸಿಟಿವ್ ಬಂದ ಕೇಸ್ ಗಳ ಮನೆಯವರಿಗೆ ಮೂಲ ಸೌಲಭ್ಯ ನೀಡುತ್ತಿಲ್ಲ. ಸಾಮಾನ್ಯ ಅಗತ್ಯ ವಸ್ತುಗಳಾದ ಹಾಲು, ತರಕಾರಿ ಸಹ ಅವರ ಮನೆ ಬಾಗಿಲಿಗೆ ಸಿಗುತ್ತಿಲ್ಲ. ಹೀಗಾಗಿ ಅವರು ಅನಿವಾರ್ಯವಾಗಿ ಮನೆಯಿಂದ ಹೊರಬಂದು ಕೊಳ್ಳುವ ಪರಿಸ್ಥಿತಿ ಇದೆ. ಸೀಲ್ ಡೌನ್ ವ್ಯವಸ್ಥೆಯೂ ಸರಿಯಾಗಿ ಆಗುತ್ತಿಲ್ಲ ಎಂಬ ದೂರುಗಳು ಕೆಲವು ಕಾರ್ಪೋರೇಟರ್ ಗಳಿಂದ ಕೇಳಿಬಂದಿದೆ.
ಡಿಸಿಪಿ ರಮೇಶ್ ಕುಮಾರ್ ಮಾತನಾಡಿ, ಕೋವಿಡ್ ಪರೀಕ್ಷೆ ಬಳಿಕ ವರದಿ ಬರುವುದು ವಿಳಂಬವಾಗುತ್ತದೆ, ಪಾಸಿಟಿವ್ ಪತ್ತೆಯಾದ ಬಳಿಕ ಬಿಬಿಎಂಪಿಯವರು ಕೆಲವೊಮ್ಮೆ ಮರುದಿನ ಸೋಂಕಿತರ ಮನೆಗೆ ಬರುತ್ತಾರೆ, ಇಷ್ಟರ ಮಧ್ಯೆ ಭಯಗೊಂಡಿರುವ ಸೋಂಕಿತರು ಹಾಗೂ ಅವರ ಮನೆಯವರಿಂದ ದೂರಿನ ಕರೆಗಳು ಬರುತ್ತಲೇ ಇದ್ದು, ಇಂತಹ ಸಮಸ್ಯೆಗಳು ಪರಿಹಾರಗೊಳ್ಳಬೇಕು ಎಂದು ಮನವಿ ಮಾಡಿದರು.
ಸರಿಯಾಗಿ ಕ್ವಾರಂಟೇನ್ ಆಗಲಿ
ಒಬ್ಬ ಪಾಸಿಟಿವ್ ಸೋಂಕಿತನಿಂದ 15 ಮಂದಿ ಪ್ರೈಮರಿ ಕಾಂಟ್ಯಾಕ್ಟ್ ಇರುತ್ತದೆ. ಹೀಗಾಗಿ ಅವರನ್ನು ಪತ್ತೆ ಹಚ್ಚಿ ಕ್ವಾರಂಟೇನ್ ಮಾಡಬೇಕು. ಕಂಟೈನೆಂಟ್ ಝೋನ್ ವೈದ್ಯಾಧಿಕಾರಿಗಳು ಮಾತ್ರ ಹೋಗುವಂತಾಗಬೇಕು, ಶಂಕಿತ ಸೋಂಕಿತರು ಹೊರಬಂದು ಪರೀಕ್ಷೆ ಮಾಡಿಸಿಕೊಳ್ಳುವ ಪರಿಸ್ಥಿತಿ ಬರಬಾರದು, ಹೋಂ ಕ್ವಾರಂಟೇನ್ ನಲ್ಲಿದ್ದವರು ನಿಗದಿತ ದಿನದವರೆಗೆ ಕಡ್ಡಾಯವಾಗಿ ಮನೆಯಲ್ಲೇ ಇರುವಂತೆ ಮಾಡಬೇಕು ಎಂಬ ಸಲಹೆಗಳು ವ್ಯಕ್ತವಾದವು.
ಆರ್ ಆರ್ ನಗರ ಮಾಜಿ ಶಾಸಕರು, ಬಿಜೆಪಿ ಮುಖಂಡರಾದ ಮುನಿರತ್ನ,
ಆರ್ ಆರ್ ನಗರ ವಲಯದ ಜೆಸಿ ಜಗದೀಶ್, ಕೋವಿಡ್ ಉಸ್ತುವಾರಿ ಐಎಎಸ್ ಅಧಿಕಾರಿ ಡಾ.ವಿಶಾಲ್, ಬೆಂಗಳೂರು ದಕ್ಷಿಣ ಎಸಿ ಶಿವಣ್ಣ, ಡಿಸಿಪಿ ರಮೇಶ್ ಕುಮಾರ್, ರಾಮನಗರ ಎಸಿಪಿ ಸೇರಿದಂತೆ 14 ವಾರ್ಡ್ ನ ಪಾಲಿಕೆ ಸದಸ್ಯರು, ಇಂಜಿನಿಯರ್ ಗಳು, ಆರೋಗ್ಯ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಹಾಜರಿದ್ದರು.