ಮೈಸೂರು, ನ 19 : ಮಾಜಿ ಸಚಿವ ತನ್ವೀರ್ ಸೇಠ್ ಅವರಿಗೆ ಗನ್ಮ್ಯಾನ್ ಆಗಿ ನಿಯೋಜಿಸಲಾಗಿದ್ದ ನಗರ ಸಶಸ್ತ್ರ ಮೀಸಲು (ಸಿಎಆರ್) ಕಾನ್ಸ್ ಟೇಬಲ್ ಫೈರೋಜ್ ಖಾನ್ ಅವರನ್ನು ನಗರ ಪೊಲೀಸ್ ಆಯುಕ್ತರು ಮಂಗಳವಾರ ಅಮಾನತುಗೊಳಿಸಿದ್ದಾರೆ.
ಕರ್ತವ್ಯಲೋಪದ ಆರೋಪದ ಮೇಲೆ ಫೈರೋಜ್ ಖಾನ್ ಅವರನ್ನು ಅಮಾನತು ಮಾಡಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಕೆ.ಟಿ.ಬಾಲಕೃಷ್ಣ ಹೇಳಿದ್ದಾರೆ. ದಾಳಿ ನಡೆದಾಗ ಫೈರೋಜ್ ಖಾನ್, ತನ್ವೀರ್ ಸೇಠ್ ಹಿಂದೆ ಇದ್ದರೂ, ದಾಳಿಯನ್ನು ತಡೆಯುವಲ್ಲಿ ವಿಫಲರಾಗಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ಮಧ್ಯೆ, ಈ ತಿಂಗಳ 17 ರ ರಾತ್ರಿ ಮಚ್ಚೇಟಿನಿಂದ ಭೀಕರವಾಗಿ ಹಲ್ಲೆಗೊಳಗಾದ ಸೇಠ್ ಅವರು ವೈದ್ಯಕೀಯ ಚಿಕಿತ್ಸೆಗೆ ಸ್ಪಂದಿಸುತ್ತಿದ್ದು, ಅವರ ಸ್ಥಿತಿ ಸುಧಾರಿಸುತ್ತಿದೆ ಎಂದು ಕೊಲಂಬಿಯಾ ಏಷ್ಯಾ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.
ಶಾಸಕರ ಸ್ಥಿತಿ ಸ್ಥಿರವಾಗಿದೆ. ಆದರೂ ಅವರನ್ನು ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ (ಐಸಿಯು) ಇರಿಸಲಾಗಿದೆ. ನಿನ್ನೆ ಸಂಜೆಯಿಂದ ಅವರಿಗೆ ವೆಂಟಿಲೇಟರ್ ತೆಗೆಯಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಕಳೆದ 17 ರ ತಡರಾತ್ರಿ ಮೈಸೂರಿನ ಬಾಲ ಭವನದಲ್ಲಿ ನಡೆದ ವಿವಾಹ ಸಮಾರಂಭದ ನಂತರ ಆರ್ಕಿಸ್ಟ್ರಾ ವೀಕ್ಷಿಸುತ್ತಿದ್ದ ಸೇಠ್ ಅವರ ಮೇಲೆ 24 ವರ್ಷದ ಫರ್ಹಾನ್ ಪಾಷಾ ಮಚ್ಚಿನಿಂದ ಅವರ ಕುತ್ತಿಗೆಗೆ ಬೀಸಿದ್ದ.
ಈ ಮಧ್ಯೆ, ನಗರ ಪೊಲೀಸರು ರಚಿಸಿರುವ ವಿಶೇಷ ಪೊಲೀಸ್ ಆಯುಕ್ತ (ಕಾನೂನು ಮತ್ತು ಸುವ್ಯವಸ್ಥೆ) ಎಂ. ಮುತ್ತುರಾಜ್ ನೇತೃತ್ವದ ವಿಶೇಷ ತನಿಖಾ ತಂಡ (ಎಸ್ಐಟಿ) ತನಿಖೆಯನ್ನು ಮುಂದುವರಿಸಿದೆ.