ಉಗಾರ ಗ್ರಾಮದೇವತೆ ಜಾತ್ರೆ ಮಂಕಾಗಿಸಿದ ನೀರಿನ ಕೊರತೆ

ಕಾಗವಾಡ 14: ಕಳೆದ ಎರಡು ತಿಂಗಳುಗಳಿಂದ ಕೃಷ್ಣಾ ನದಿ ನೀರಿಲ್ಲದೇ ಬತ್ತಿಹೋಗಿದ್ದು, ಇದರ ಪರಿಣಾಮ ಜನ-ಜಾನುವಾರಗಳಿಗೆ ಕುಡಿಯುವ ನೀರಿನಲ್ಲಿ ವ್ಯತ್ಯಯ, ಬೆಳೆದ ಬೆಳೆಗಳಿಗೆ ನೀರಿಲ್ಲದೇ ಬತ್ತಿಹೋಗುತ್ತಿದ್ದರಿಂದ ರೈತರಲ್ಲಿ ಆತಂಕ, ಈಗ ಉಗಾರ ಗ್ರಾಮದೇವತೆ ಜಾತ್ರೆಯಲ್ಲಿ ನೀರಿನ ಕೊರತೆಯಿರುವದರಿಂದ ಭಕ್ತರಲ್ಲಿ ನಿರಾಸೆ ಭಾವನೆ ಎದ್ದು ಕಾಣುತ್ತಿತ್ತು.

ನೂರಾರು ವರ್ಷಗಳ ಇತಿಹಾಸ ಹೊಂದಿರುವ ಉಗಾರ ಗ್ರಾಮದ ಗ್ರಾಮದೇವತೆ ಲಕ್ಷ್ಮೀದೇವಿ ಜಾತ್ರೆಯಲ್ಲಿ ಸಾವಿರಾರು ಭಕ್ತರು ಉತ್ಸಾಹದಿಂದ ಪಾಲ್ಗೊಂಡು, ದೇವಿಗೆ ದೀರ್ಘನಮಸ್ಕಾರ ಹಾಕುತ್ತಾ ತಮ್ಮ ಹರಿಕೆ ತೀರಿಸುವುದು, ಮುಖ್ಯ ದಿನದಂದು ಎಲ್ಲ ಭಕ್ತರು ಒಂದುಗೂಡಿ ಭಕ್ತಿ, ನಮನ ಸಲ್ಲಿಸುವದರಲ್ಲಿ ಮುಂದಾಗುತ್ತಿದ್ದರು. ಆದರೆ, ಈ ವರ್ಷ ಭಕ್ತರಲ್ಲಿ ಚಿಂತೆ, ನಿರಾಸೆ ವ್ಯಕ್ತವಾಗುತ್ತಿತ್ತು.

ಪ್ರತಿಯೊಬ್ಬರ ಬಾಯಲ್ಲಿ ನದಿಗೆ ನೀರು ಯಾವಾಗ ಬರುತ್ತೇ? ಎಂಬ ಮಾತೇ ಉಲಿಯುತ್ತಿತ್ತು. ಹರಿದಾಡುತ್ತಿತ್ತು. ಕೆಲ ಭಕ್ತರು ನದಿಗೆ ಬೇಗ ನೀರು ಬರಲಿ, ನಿನಗೆ ಜೋಡಕಾಯಿ ಒಡೆಯುತ್ತೇನೆ ಎಂಬ ಹರಿಕೆ ಬೇಡಿಕೊಳ್ಳುತ್ತಿದ್ದುದು ಕಂಡು ಬಂತು.

ಉಗಾರದ ಲಕ್ಷ್ಮೀದೇವಿ ಜಾತ್ರೆಗೆ ಕಳೆದ ಅನೇಕ ವರ್ಷಗಳಿಂದ ಬರುತ್ತಿರುವ ಭಕ್ತರನ್ನು, ಈ ವರ್ಷದ ಜಾತ್ರೆಗೆ ಹೋಲಿಸಿದರೆ ಸುಮಾರು ಶೇ. 40ರಷ್ಟು ಭಕ್ತರ ಸಂಖ್ಯೆ ಕಡಿಮೆವಾಗಿದೆ. ಉಗಾರದ ಕುಟುಂಬದವರು ತಮ್ಮ ನೆಂಟರಿಗೆ, ಈ ಮೊದಲು ಬನ್ನಿರಿ ಎಂದು ಕರೆಯುತ್ತಿದ್ದರು. ಆದರೆ ಈಗ ನಮ್ಮಲ್ಲಿ ನೀರಿನ ವ್ಯವಸ್ಥೆಯಿಲ್ಲಾ. ಬರುವುದು ಬಿಡುವುದು ನಿಮಗೆ ಬಿಟ್ಟದ್ದು ಎಂದು ಹೇಳಿದ್ದರಿಂದ ಹೊರ ಗ್ರಾಮಗಳಿಂದ ಅವರ ಆಪ್ತರು ಬರುವವರ ಸಂಖ್ಯೆ ಕಡಿಮೆವಾಗಿದೆಯೆಂದು ಲಕ್ಷ್ಮೀದೇವಿ ಮಂದಿರದ ಆರ್ಚಕ ರಾಜು ಗುರವ್ ಹೇಳಿದರು.

ಕಳೆದ 15 ವರ್ಷಗಳಿಂದ ಜಾತ್ರೆ ನಿಮಿತ್ಯ ನಾನು ಅಥಣಿಯಿಂದ ಬರುತ್ತೇನೆ. ಆದರೆ, ಈ ಮೊದಲಿನ ಜಾತ್ರೆಗೆ ಬರುವ ಭಕ್ತರ ಸಂಖ್ಯೆ ಮತ್ತು ಇಂದಿನ ಸಂಖ್ಯೆಗೆ ಹೋಲಿಸಿದರೆ ಬಹಳಷ್ಟು ವಿರಳತೆವಿದೆ. ಇದಕ್ಕೆ ಕಾರಣ ಕೃಷ್ಣಾ ನದಿ ನೀರಿಲ್ಲದೇ ಬತ್ತಿಹೋಗಿದ್ದರಿಂದ ಭಕ್ತರಲ್ಲಿ ಬಹಳಷ್ಟು ನಿರಾಸೆ ಇದಿದ್ದ ಬಗ್ಗೆ ಎದ್ದು ಕಾಣುತ್ತಿದೆ ಎಂದು ತಮ್ಮಣ್ಣಾ ಅಥಣಿ ಹೇಳಿದರು.