ನವದೆಹಲಿ, ಫೆ ೧೩: ಭಾರತೀಯ ಮೂಲದ ಮೈಕ್ರೋಸಾಫ್ಟ್ ಸಿಇ ಓ ಸತ್ಯಾ ನಾದೆಲ್ಲಾ ಮತ್ತೊಮ್ಮೆ ತಾಯ್ನಾಡು ಭಾರತದ ಪ್ರವಾಸ ಕೈಗೊಳ್ಳಲು ಸಿದ್ಧರಾಗಿದ್ದಾರೆ.
ಈ ತಿಂಗಳ ಕೊನೆಯಲ್ಲಿ ಅವರು ಭಾರತಕ್ಕೆ ಭೇಟಿ ನೀಡಿ, ಮೈಕ್ರೋಸಾಫ್ಟ್ ಗ್ರಾಹಕರು, ಯುವ ಸಾಧಕರು. ವಿದ್ಯಾರ್ಥಿಗಳು, ಉದ್ಯಮಿಗಳನ್ನು ಭೇಟಿ ಮಾಡುವ ಕಾರ್ಯಕ್ರಮ ನಿಗದಿಯಾಗಿದೆ. ಸತ್ಯಾ ನಾದೆಲ್ಲಾ ಭಾರತ ಭೇಟಿಯನ್ನು ಮೈಕ್ರೋಸಾಫ್ಟ್ ಸಂಸ್ಥೆ ದೃಢೀಕರಿಸಿದೆ. ಆದರೆ ಅವರು ಭಾರತದ ಯಾವ ನಗರಗಳಿಗೆ ಭೇಟಿ ನೀಡಲಿದ್ದಾರೆ ಎಂಬ ವಿವರ ನೀಡಿಲ್ಲ. ಫೆಬ್ರವರಿ ೨೪-೨೬ರವರೆಗೆ ನಾದೆಲ್ಲಾ ಭಾರತ ಪ್ರವಾಸ ಕೈಗೊಳ್ಳುವ ನಿರೀಕ್ಷೆಯಿದೆ.
ರಾಷ್ಟ್ರ ರಾಜಧಾನಿ ದೆಹಲಿ, ಟೆಕ್ ಹಬ್, ಬೆಂಗಳೂರು, ವಾಣಿಜ್ಯ ರಾಜಧಾನಿ ಮುಂಬೈ ನಗರಗಳಿಗೆ ಭೇಟಿ ನೀಡುವ ಸಾಧ್ಯತೆಯಿದೆ ಎಂದು ವಿಶ್ವಾಸಾರ್ಹ ಮೂಲಗಳು ತಿಳಿಸಿವೆ. ಭೇಟಿಯ ವೇಳೆ ಅವರು ದೇಶದ ಉದ್ಯಮದ ಗಣ್ಯರ ಜೊತೆಗೆ ಸರ್ಕಾರಿ ಮುಖ್ಯಸ್ಥರನ್ನೂ ಭೇಟಿಯಾಗುವ ನಿರೀಕ್ಷೆಯಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಭೇಟಿಗೂ ನಾದೆಲ್ಲಾ ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಲಾಗಿದ್ದು, ಆದರೆ, ಈ ಕುರಿತು ಪ್ರಧಾನಿ ಕಚೇರಿಯಿಂದ ಯಾವುದೇ ಅಧಿಕೃತ ಮಾಹಿತಿ ಇಲ್ಲವಾಗಿದೆ.
ಈ ಮಧ್ಯೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಫೆಬ್ರವರಿ ೨೪ ಮತ್ತು ೨೫ ರಂದು ಭಾರತಕ್ಕೆ ಭೇಟಿ ನೀಡಲಿದ್ದು, ಈ ಸಂದರ್ಭದಲ್ಲೇ ನಾದೆಲ್ಲಾ ಅವರ ಭಾರತ ಭೇಟಿ ಮಹತ್ವ ಪಡೆದುಕೊಂಡಿದೆ. ವಿವಾದಾತ್ಮಕ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಕುರಿತು ಟೆಕ್ ದೈತ್ಯ ಇತ್ತೀಚಿಗೆ ಕಳವಳ ವ್ಯಕ್ತಪಡಿಸಿದ್ದರು.