ಲಾಕ್ ಡೌನ್ ಕೊನೆಯ ಹಂತದಲ್ಲೂ ಜನತೆ ಸೂಕ್ತ ಬೆಂಬಲ ನೀಡಬೇಕು: ವೆಂಕಯ್ಯ ನಾಯ್ಡು

ನವದೆಹಲಿ, ಏ 7,ಕೋರನ್ ವೈರಸ್ ನಿಯಂತ್ರಣ ಉದ್ದೇಶದಿಂದ ದೇಶಾದ್ಯಂತ ಜಾರಿಗೊಳಿಸಿರುವ ಲಾಕ್ ಡೌನ್ ಅವಧಿ ಎರಡು ವಾರಗಳು ಪೂರ್ಣಗೊಂಡಿದ್ದು, ಮೂರನೇ ವಾರದ ನಿರ್ಣಾಯಕ ಹಂತದಲ್ಲಿ ದೇಶದ ಜನತೆ ಇದೇ ರೀತಿಯ ಸಹಕಾರ ನೀಡಬೇಕು ಎಂದು ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ದೇಶದ ಜನತೆಗೆ ಮನವಿ ಮಾಡಿದ್ದಾರೆ. ಕೇಂದ್ರ ಸರ್ಕಾರ ಜನರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿದ್ದು, ಜನಾರೋಗ್ಯದಿಂದ ದೇಶದ ಆರ್ಥಿಕ ಸ್ಥಿರತೆಗೂ ನಾಂದಿಯಾಗಲಿದೆ. ಕೊರೋನಾ ವೈರಸ್ ಅನ್ನು ನಿಯಂತ್ರಿಸಲು ಸರ್ಕಾರ ಕೈಗೊಂಡಿರುವ ಕಾರ್ಯತಂತ್ರಗಳು ಉತ್ತಮವಾಗಿವೆ. ಇದೇ ಸ್ಪೂರ್ತಿಯಿಂದ ಜನತೆ ಏಪ್ರಿಲ್ 14ರ ವರೆಗೆ ಸಾಮಾಜಿಕ ಅಂತರ ಕಾಯ್ದುಕೊಂಡು ಸರ್ಕಾರದ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಹೇಳಿದ್ದಾರೆ.ಈ ಕುರಿತು ಸರಣಿ ಟ್ವೀಟ್ ಮಾಡಿರುವ ಉಪರಾಷ್ಟ್ರಪತಿ ಅವರು, ವಲಸೆ ಕಾರ್ಮಿಕರು, ಅವಕಾಶ ವಂಚಿತರಿಗೆ ಸರ್ಕಾರ ಸೂಕ್ತ ಪರಿಹಾರ ಸಾಮಗ್ರಿಗಳನ್ನು ಒದಗಿಸುತ್ತಿವೆ. ಪ್ರಧಾನಿ ನರೇಂದ್ರ ಮೋದಿ ಅವರ ಮನವಿಗೆ ಓಗೊಟ್ಟ ದೇಶದ ಜನತೆ ತನ್ನಲ್ಲಿ ಅಂತರ್ಗತವಾಗಿರುವ ಆದ್ಯಾತ್ಮದ ಸದ್ಗುಣಗಳನ್ನು ಪ್ರದರ್ಶಿಸಿ, ದೇಶದ ಮೌಲ್ಯ ಹೆಚ್ಚಿಸಿದ್ದಾರೆ ಎಂದು ವೆಂಕಯ್ಯ ನಾಯ್ಡು ಪ್ರತಿಪಾದಿಸಿದ್ದಾರೆ.