ಮನಸನ್ನು ಹತೋಟಿಯಲ್ಲಿಟ್ಟುಕೊಂಡು ಮಹತ್ಕಾರ್ಯವನ್ನಾದರೂ ಸಾಧಿಸಬಹುದು: ಹಲಗತ್ತಿ

At least a great work can be accomplished by keeping the mind under control: Halagatti

ಧಾರವಾಡ 14: ವಿದ್ಯಾರ್ಥಿಗಳು ಸತತ ಅಧ್ಯಯನದಿಂದ ಸಹಜವಾಗಿ ಏಕಾಗ್ರತೆಯನ್ನು ಸಾಧಿಸಬಹುದು. ಅಧ್ಯಯನಶೀಲರಾದಾಗ ಚಂಚಲ ಚಿತ್ತವಾದ ಮನಸನ್ನು ಹತೋಟಿಯಲ್ಲಿರಿಸಿಕೊಂಡು ಅಧ್ಯಯನ ಮಾಡಿದರೆ, ಜೀವನದಲ್ಲಿ ಎಂತಹ ಮಹತ್ಕಾರ್ಯವನ್ನಾದರೂ ಸಾಧಿಸಬಹುದೆಂದು ಕ.ವಿ.ವ. ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಅಭಿಪ್ರಾಯಪಟ್ಟರು. 

ಕರ್ನಾಟಕ ವಿದ್ಯಾವರ್ಧಕ ಸಂಘದ ಶಿಕ್ಷಣ ಮಂಟಪವು, ಮಾಳಮಡ್ಡಿಯ ಕೆ.ಇ. ಬೋರ್ಡ್‌ ಪ್ರೌಢ ಶಾಲೆಯಲ್ಲಿ ಪ್ರಸಕ್ತ ಸಾಲಿನ ಎಸ್‌.ಎಸ್‌.ಎಲ್‌.ಸಿ. ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ‘ಅಧ್ಯಯನದಲ್ಲಿ ಏಕಾಗ್ರತೆ ಸಾಧಿಸುವುದು ಹೇಗೆ?’ ವಿಷಯ ಕುರಿತು ಉಪನ್ಯಾಸ ನೀಡುತ್ತಾ ಮಾತನಾಡುತ್ತಿದ್ದರು.  

ಮುಂದುವರೆದು ಮಾತನಾಡಿದ ಅವರು, ವಿದ್ಯಾರ್ಥಿಗಳು ಅಭ್ಯಾಸ ಮಾಡುವಾಗ ಶ್ರದ್ಧೆ ಹಾಗೂ ಆತ್ಮವಿಶ್ವಾಸಗಳನ್ನು ಹೊಂದಿರಬೇಕು. ಖಂಡಿತ ಹೆಚ್ಚು ಅಂಕ ಗಳಿಸುತ್ತೇನೆಂಬ ಛಲದೊಂದಿಗೆ ಓದಬೇಕು. ಸಮಯದ ಸದ್ಬಳಕೆಯನ್ನು ಮಾಡಿಕೊಂಡು ಕ್ರಮಬದ್ಧವಾಗಿ ಅಧ್ಯಯನ ಮಾಡಬೇಕು. ಗುಂಪು ಚರ್ಚೆಯ ಅಧ್ಯಯನ ನಿಮ್ಮಲ್ಲಿ ಏಕಾಗ್ರತೆ ಮೂಡಿಸುತ್ತದೆ. ಪರೀಕ್ಷೆಗಳ ಬಗ್ಗೆ ವಿನಾಕಾರಣ ಸಂಶಯ ಹಾಗೂ ಭಯಪಡಬಾರದು. ಇವು ನಿಮ್ಮನ್ನು ನಿಶಕ್ತರನ್ನಾಗಿ ಮಾಡುತ್ತವೆ. 

ಕೆ.ಇ.ಬೋರ್ಡ್‌ ಪ್ರೌಢ ಶಾಲೆ ಈ ನಾಡಿನ ಪ್ರತಿಷ್ಠಿತ ಸಂಸ್ಥೆಯಾಗಿದ್ದು, 150 ವರ್ಷಗಳಿಂದ ಗುಣಮಟ್ಟದ ಶಿಕ್ಷಣ ನೀಡುತ್ತಾ ಬಂದಿದೆ. ಇಲ್ಲಿ ಅಧ್ಯಯನ ಮಾಡಿದ ಸಹಸ್ರಾರು ವಿದ್ಯಾರ್ಥಿಗಳು ಈ ನಾಡಿನ ಮಹಾನ್ ಸಾಧಕರಾಗಿದ್ದಾರೆ. ಒಂದು ಕಾಲಕ್ಕೆ ಈ ಶಾಲೆ ರಾ​‍್ಯಂಕುಗಳ ಶಾಲೆ ಎಂದೇ ಪ್ರಸಿದ್ಧಿ ಪಡೆದಿತ್ತು. ವಿದ್ಯಾರ್ಥಿಗಳು ನಿಮ್ಮ ತಂದೆ-ತಾಯಿರು ನಿಮಗಾಗಿ ತಮ್ಮ ವೈಯಕ್ತಿಕ ಸುಖ ತ್ಯಾಗ ಮಾಡುತ್ತಿರುವುದನ್ನು ಒಮ್ಮೆ ಸ್ಮರಿಸಿಕೊಂಡರೆ ನೀವು ಸಾಧಕರಾಗಬಹುದು ಎಂದು ಹೇಳಿದರು. 

ಅಧ್ಯಕ್ಷತೆ ವಹಿಸಿದ್ದ ಕೆ.ಇ. ಬೋರ್ಡ್‌ ಕಾರ್ಯದರ್ಶಿ ಡಿ. ಎಸ್ ರಾಜಪುರೋಹಿತ ಮಾತನಾಡಿ, ಕ.ವಿ.ವ. ಸಂಘಕ್ಕೆ 134 ವರ್ಷಗಳ ಇತಿಹಾಸವಿದೆ. ಏಕೀಕರಣಕ್ಕೆ ಬುನಾದಿ ಹಾಕಿದ್ದೆ ಕರ್ನಾಟಕ ವಿದ್ಯಾವರ್ಧಕ ಸಂಘ. ಪರೀಕ್ಷಾ ಪರಿಣಾಮ ಸುಧಾರಣೆಗೆ ಸಂಘದ ಪ್ರಯತ್ನ ದೊಡ್ಡದು. ಪಿಯುಸಿ, ಎಸ್‌.ಎಸ್‌.ಎಲ್‌.ಸಿ. ನಿಮ್ಮ ವಿದ್ಯಾರ್ಥಿ ಜೀವನದ ಮಹತ್ವದ ತಿರುವು. ಈ ಕಾರ್ಯಕ್ರಮವನ್ನು ವಿದ್ಯಾರ್ಥಿಗಳು ಸದುಪಯೋಗ ಮಾಡಿಕೊಳ್ಳಬೇಕು. ನಿಮ್ಮ ಯಶಸ್ಸಿನ ಹಿಂದೆ ನಿಮ್ಮ ಗುರುಗಳು, ಪಾಲಕರ ಸಹಕಾರಯುತ ಪ್ರಯತ್ನ ದೊಡ್ಡದು. 

ಡಿಮ್ಹಾನ್ಸ ಮನೋಆರೋಗ್ಯ ಸಮಾಜ ಕಾರ್ಯಕರ್ತರಾದ ಪ್ರಶಾಂತ ಪಾಟೀಲ ಪರೀಕ್ಷೆಗಾಗಿ ವಿದ್ಯಾರ್ಥಿಗಳು ಹೇಗೆ ಸಿದ್ಧರಾಗಬೇಕೆಂದು ಉಪನ್ಯಾಸ ನೀಡಿದರು. ಮಕ್ಕಳು ಸಂವಾದ ಕಾರ್ಯಕ್ರಮದಲ್ಲಿ ಸಮಸ್ಯೆಗೆ ಪರಿಹಾರ ಕಂಡುಕೊಂಡರು.  

ಮುಖ್ಯಾಧ್ಯಾಪಕರಾದ ಎನ್‌.ಎಸ್‌. ಗೋವಿಂದರಡ್ಡಿ ಸ್ವಾಗತಿಸಿದರು. ಶಿಕ್ಷಣ ಮಂಟಪ ಸಂಚಾಲಕ ವೀರಣ್ಣ ಒಡ್ಡೀನ ಪ್ರಾಸ್ತಾವಿಸಿದರು. ಸಂಗಮೇಶ ಹಡಪದ ನಿರೂಪಿಸಿದರು. ಪ್ರಕಾಶ್ ಕವಲಿ ವಂದಿಸಿದರು. 

ಕಾರ್ಯಕ್ರಮದಲ್ಲಿ ಎಂ. ವ್ಹಿ. ಕವಳಿ, ಅಭಿನಂದನ್‌. ಎಸ್‌. ಡಿ. ಜಹಗೀರದಾರ, ವಿಜಯಲಕ್ಷ್ಮಿ ಕಲ್ಯಾಣಶೆಟ್ಟರ, ಮಹಾಂತೇಶ ಎಸ್‌. ನರೇಗಲ್, ಸೇರಿದಂತೆ, ವಿದ್ಯಾರ್ಥಿಗಳು, ಶಿಕ್ಷಕರು, ಸಿಬ್ಬಂದಿ ಇದ್ದರು.