ಲೋಕದರ್ಶನ ವರದಿ
ಬೆಳಗಾವಿ 16: ಇತ್ತಿಚಿಗೆ ಬೆಳಗಾವಿ ಜಿಲ್ಲೆಯಲ್ಲಿ ಉಂಟಾದ ಪ್ರವಾಹ ಪರಿಸ್ಥಿತಿಯಲ್ಲಿ ಜೈನ ಇಂಟರ್ನ್ಯಾಷನಲ್ ಟ್ರೆಡ್ ಅರ್ಗನೈಝೇಶನ ವತಿಯಿಂದ ಹಾಗೂ ಬೆಳಗಾವಿ ವಿವಿಧ ಸಂಘಟನೆಗಳ ಸಹಕಾರದಿಂದ ನೆರವು ನೀಡಲಾಯಿತು ಎಂದು ಜಿತೋ ಯುವ ಘಟಕದ ಅಧ್ಯಕ್ಷ ಅಮಿತ ದೋಷಿ ಅವರು ಇಂದಿಲ್ಲಿ ಹೇಳಿದರು.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಾರಂಭದಲ್ಲಿ ಸಂತ್ರಸ್ತರಿಗೆ ಸಹಾಯ ಮಾಡುತ್ತಿದ್ದ ಸ್ವಯಂ ಸೇವಕರಿಗೆ ಸಹಾಯ ನೀಡುವ ಉದ್ದೇಶದಿಂದ ಸ್ವಯಂ ಸೇವಕರೊಂದಿಗೆ ಕೈಜೋಡಿಸಲಾಯಿತು. ಆದರೆ ಜನರ ಸಂಕಷ್ಟಗಳು ಹಾಗೂ ಅವರಿಗೆ ಅಗತ್ಯವಾದ ವಸ್ತುಗಳನ್ನು ನಿಡಲೇಬೇಕೆಂಬ ಉದ್ದೇಶದಿಂದ ಕಾರ್ಯವನ್ನು ಕೈಗೆತ್ತಿಕೊಳ್ಳಲಾಯಿತು. ಕೇವಲ ಒಂದೆರೆಡು ದಿನಗಳಲ್ಲಿ ಜನರು ಅನೇಕ ವಸ್ತುಗಳನ್ನು ನೀಡಲು ಮುಂದೆ ಬಂದರು ಎಂದು ಅವರು ತಿಳಿಸಿದರು.
ಹಿಂದವಾಡಿಯಲ್ಲಿನ ಮಹಾವೀರ ಭವನವನ್ನು ಕೇಂದ್ರಸ್ಥಾನವನ್ನಾಗಿ ಮಾಡಿಕೊಂಡು ಕಾರ್ಯ ಆರಂಭಿಸಿದಾಗ ಬಹುತೇಕ ಜನರು ಎಲ್ಲ ಅಗತ್ಯವಸ್ತುಗಳನ್ನು ತಂದು ಕೊಡಲು ಪ್ರಾರಂಭಿಸಿದರು. ಇದರಿಂದ ಸಾಕಷ್ಟು ಪ್ರಮಾಣದಲ್ಲಿ ಅಕ್ಕಿ, ಕುಡಿಯುವ ನೀರು, ಬೆಳೆಕಾಳು, ಮಸಾಲೆ ಪದಾರ್ಥಗಳು, ಹೊಸ ಬಟ್ಟೆಗಳು, ಸೇರಿದಂತೆ ಇನ್ನುಳಿದ ವಸ್ತುಗಳ ಸಂಗ್ರಹ ಮಾಡಲಾಯಿತು.
ತದನಂತರ ಜಿಲ್ಲೆಯಲ್ಲಿ ಅಗತ್ಯವಿರುವ ಮತ್ತು ಸಂತ್ರಸ್ತರಿರುವ ಸ್ಥಳಗಳನ್ನು ಗುರುತಿಸಿ ಅಲ್ಲಿ ಈ ಎಲ್ಲ ವಸ್ತುಗಳನ್ನು ರವಾನೆ ಮಾಡಲಾಯಿತು. ನಮ್ಮ ಈ ಕಾರ್ಯಕ್ಕೆ ಆರ್.ಎಸ್.ಎಸ್.ಲಾಯಿನ್ಸ್ ಕ್ಲಬ, ರೋಟರಿ ಕ್ಲಬ್ ಸೇರಿದಂತೆ ಅನೇಕ ಸಂಘ ಸಂಸ್ಥೆಗಳು ಕೈ ಜೋಡಿಸಿದ್ದರ ಪರಿಣಾಮ ಈ ಕಾರ್ಯ ನಡೆಸಲು ಸಾಧ್ಯವಾಯಿತು ಎಂದು ಅವರು ತಿಳಿಸಿದರು.
ಕಳೆದ 10 ದಿನಗಳಲ್ಲಿ ಪ್ರತಿ 12 ರಿಂದ 15 ಸಾವಿರ ಜನರಿಗೆ ಆಗುವಷ್ಟು ದಿನಸಿ ಸಾಮಾನುಗಳನ್ನು ವಿತರಿಸಲಾಗಿದೆ. ಯಾರು ಎಷ್ಟು ಕೊಟ್ಟರು, ಕೊಟ್ಟಂತ ಸಾಮಾನು ಎಲ್ಲಿ ಯಾರಿಗೆ ತಲುಪಿತು ಎಂಬುದರ ಬಗ್ಗೆ ನೋಂದಣಿ ಮಾಡಲಾಗಿದೆ. ಇದೀಗ ಒಂದು ಕಿಟ್ ತಯಾರಿಸಲಾಗುತ್ತಿದ್ದು, ಇದರಲ್ಲಿ 5 ಕೆಜಿ ಅಕ್ಕಿ,1 ಕೆಜಿ ಬೆಳೆಕಾಳು, ಸಾಂಬಾರ ಪದಾರ್ಧ, ಅಡುಗೆ ಎಣ್ಣೆ, ಟೂತಪೇಸ್ಟ, ಸಾಬುನು, ಸೇರಿದಂತೆ ಎಲ್ಲವನ್ನು ಸೇರಿಸಿ ಪ್ರವಾಹ ಪಡೀತ ಪ್ರದೇಶದ ಪ್ರತಿಯೊಂದು ಕುಟುಂಬಕ್ಕೆ ವಿತರಿಸಲಾಗುತ್ತಿದೆ.
ಅದಲ್ಲದೆ ಮುಂಬರುವ ಎರಡು ದಿನಗಳಲ್ಲಿ 5 ಸಾವಿರ ಸ್ವೇಟರ್ ಹಂಚಿಕೆ ಮಾಡುವ ಗುರಿ ಹೊಂದಲಾಗಿದೆ ಎಂದು ತಿಳಿಸಿದ ಅವರು, ಈ ಕಾರ್ಯದಲ್ಲಿ ಸಹಕರಿಸಿದ ಎಲ್ಲ ಸಂಘ ಸಂಸ್ಥೆಗಳಿಗೆ ಹಾಗೂ ಸಹಾಯ ಹಸ್ತ ಚಾಚಿದವರಿಗೆ ಜಿತೋ ಸಂಸ್ಥೆ ಋಣಿಯಾಗಿದೆ ಎಂದು ಅವರು ತಿಳಿಸಿದರು.
ಇಂದು ಮೆಗಾ ಆರೋಗ್ಯ ತಪಾಸಣೆ ಶಿಬಿರ: ಜೀತೋ ಸಂಸ್ಥೆಯ ವತಿಯಿಂದ ಆಗಸ್ಟ 15 ರಂದು ಬೆಳಗಾವಿ ತಾಲೂಕಿನ ಮಣ್ಣೂರ ಗ್ರಾಮದಲ್ಲಿ ಬೆಳಿಗ್ಗೆ 9 ಗಂಟೆಯಿಂದ ಸಾಯಂಕಾಲ 4 ಗಂಟೆಯವರೆಗೆ ಉಚಿತ ಮೆಗಾ ಆರೋಗ್ಯ ತಪಾಸಣೆ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ.
ಈ ಶಿಬಿರದಲ್ಲಿ 18 ನುರಿತ ವೈದ್ಯರು ಭಾಗವಹಿಸಿ ಜನರ ಆರೋಗ್ಯ ತಪಾಸಣೆ ನಡೆಸಲಿದ್ದಾರೆ ಎಂದು ಜಿತೋ ಬೆಳಗಾವಿ ವಿಭಾಗದ ಕಾರ್ಯದಶರ್ಿ ವಿಕ್ರಮ ಜೈನ ಅವರು ತಿಳಿಸಿದರು. ಪತ್ರಿಕಾಗೋಷ್ಟಿಯಲ್ಲಿ ಮನೋಜ ಸಂಚೇತಿ, ಭಾರತಿ ಹರದಿ, ಅಕ್ಷಯ ಜಕ್ಕನ್ನವರ, ಅಮೋಘ ನಿಲಜಗಿ, ನಿವೇದಿತಾ ಅಂಕಲಗಿ, ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.