ಪ್ಯಾರಿಸ್, ನ 6: ಮಾಲಿ ದೇಶದಲ್ಲಿ ಅಲ್-ಖೈದಾನೊಂದಿಗೆ ಸಂಪರ್ಕ ಹೊಂದಿದ್ದ ಆಫ್ರಿಕಾದ ಜಿಹಾದಿ ಗುಂಪಿನ ಹಿರಿಯ ಉಗ್ರ ನಾಯಕ ಕಳೆದ ತಿಂಗಳು ಹತ್ಯೆಯಾಗಿದ್ದಾನೆ ಎಂದು ಫ್ರಾನ್ಸ್ ಘೋಷಿಸಿದೆ. ಗ್ರೂಪ್- ಟು- ಸಪೋರ್ಟ್ ಇಸ್ಲಾಂ, ಮುಸ್ಲೀಮ್ಸ್ (ಜಿಎಸ್ಎಂ) ಎಂಬ ಗುಂಪಿನ ಸಹ-ಸಂಸ್ಥಾಪಕ ಮೊರಾಕ್ಕೋದ ಅಲಿ ಮೇಚೌ ಮಾಲಿಯಲ್ಲಿ ಅಕ್ಟೋಬರ್ 8 ರ ರಾತ್ರಿ ಮಾಲಿ ಸೇನೆ ಮತ್ತು ಅಮೆರಿಕ ಪಡೆಗಳ ಬೆಂಬಲದೊಂದಿಗೆ ಕಳೆದ ತಿಂಗಳು ಕೊಲ್ಲಲ್ಪಟ್ಟಿದ್ದಾನೆ ಎಂದು 'ನ್ಯಾಷನಲ್' ಮಾಧ್ಯಮ ವರದಿ ಮಾಡಿದೆ. ಮಂಗಳವಾರ ಪಶ್ಚಿಮ ಆಫ್ರಿಕಾದ ಅಧಿಕೃತ ಭೇಟಿಯಿಂದ ವಿಮಾನದಲ್ಲಿ ವಾಪಸ್ಸಾಗುತ್ತಿದ್ದ ವೇಳೆ ಫ್ರಾನ್ಸ್ ರಕ್ಷಣಾ ಸಚಿವೆ ಫ್ಲಾರೆನ್ಸ್ ಪಾರ್ಲ್ ಈ ವಿಷಯ ಪ್ರಕಟಿಸಿದ್ದಾರೆ. ಜಿಹಾದಿ ದಾಳಿಯ ನಂತರ ಅನೇಕ ಸೈನಿಕರು ಸಾವನ್ನಪ್ಪಿದ ನಂತರ ಯೂರೋಪ್ ಪಡೆಗಳ ಹೆಚ್ಚಿನ ಬೆಂಬಲವನ್ನು ನೀಡುವುದಾಗಿ ಮಾಲಿ ದೇಶಕ್ಕೆ ಪಾರ್ಲ್ ಧೈರ್ಯ ತುಂಬಿದ ನಂತರ ಈ ಪ್ರಕಟಣೆ ಹೊರಬಿದ್ದಿದೆ. 'ಅಮೆರಿಕ ಸೇರಿದಂತೆ ಸಹೇಲ್ನಲ್ಲಿ ಮೇಚೌ ಎರಡನೇ ಮೋಸ್ಟ್ ವಾಂಟೆಡ್ ಭಯೋತ್ಪಾದಕನಾಗಿದ್ದ" ಎಂದು ಪಾರ್ಲ್ ಹೇಳಿದ್ದಾರೆ. ಸಾಹೇಲ್ನಲ್ಲಿ ನಡೆದ ಅತಿ ಭೀಕರ ದಾಳಿಯ ಹೊಣೆಯನ್ನು ಜಿಎಸ್ಐಎಂ ಹೊತ್ತಿದೆ. ಫ್ರಾನ್ಸ್, ಆಫ್ರಿಕದ ನೆರೆ ದೇಶಗಳು ಮತ್ತು ವಿಶ್ವಸಂಸ್ಥೆ ನೆರವಿನ ಹೊರತಾಗಿಯೂ ಮಾಲಿ ಸೇನೆ ಬಂಡುಕೋರರ ದಾಳಿಯನ್ನು ನಿಯಂತ್ರಿಸಲು ಹೆಣಗಾಡುತ್ತಿದೆ. 2014 ರಲ್ಲಿ ಸಾಹೇಲ್ನಲ್ಲಿ ತನ್ನ 4,500 ಬಲಿಷ್ಠ ಬಾರ್ಖೇನ್ ಪಡೆಗಳನ್ನು ಫ್ರಾನ್ಸ್ ನಿಯೋಜಿಸಿತ್ತು. ಮಾಲಿಗೆ ಸೇನಾ ಸಹಾಯವನ್ನು ಹೆಚ್ಚಿಸಲು ಯೂರೋಪ್ ದೇಶಗಳ ಮನವೊಲಿಸುವ ಪ್ರಯತ್ನದಲ್ಲಿ ಪ್ರಗತಿಯಾಗುತ್ತಿದೆ ಎಂದು ಫ್ರಾನ್ಸ್ ಸಚಿವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.