ಬೆಳಗಾವಿ, ಜ 8 ಸಂವಿಧಾನವನ್ನು ಅರ್ಥ ಮಾಡಿಕೊಂಡರೆ ತಾಯಿಯನ್ನು ಅರ್ಥ ಮಾಡಿಕೊಂಡ ಹಾಗೆ. ತಾಯಿ ಹಾಕಿ ಕೊಟ್ಟ ಮಾರ್ಗದಲ್ಲಿ ನಾವು ಮುಂದೆ ಸಾಗಬೇಕು. ರಾಷ್ಟ್ರಗೀತೆ, ಲಾಂಛನ ನೀಡಿ ನಿಜವಾದ ಭಾರತ ನಿರ್ಮಾಣ ಮಾಡಿದ್ದು ನಮ್ಮ ಸಂವಿಧಾನ ಎಂದು ರಾಜ್ಯ ಹೈಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಹೇಳಿದ್ದಾರೆ.
ಬೆಳಗಾವಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಸಾರ್ವಜನಿಕ ಶಿಕ್ಷಣ ಇಲಾಖೆ , ವಕೀಲರ ಸಂಘ ಹಾಗೂ ಸಮುದಾಯ ಕರ್ನಾಟಕ ಸಂಘಟನೆಗಳ ಆಶ್ರಯದಲ್ಲಿ ನಡೆದ 'ಸಂವಿಧಾನ ಓದು' ಹಾಗೂ ಕಾನೂನು ಅರಿವು ನೆರವು ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಳೆದ 70 ವರ್ಷಗಳಿಂದ ನಾವು ಹೊಸ ಶಿಕ್ಷಣ ಪಡೆಯಲು ಸಾಧ್ಯವಾಗಿಲ್ಲ. ಹೊಸ ಚಿಂತನೆಗಳು ಬಂದರೆ ನಮ್ಮ ಸಂವಿಧಾನವನ್ನು ಅರ್ಥ ಮಾಡಿಕೊಳ್ಳಬಹುದು. ರಾಜಕೀಯ ಅಧಿಕಾರ ಎಂದರೆ ಕಾನೂನುಗಳನ್ನು ರಚನೆ ಮಾಡುವದು ಕಾನೂನುಗಳನ್ನು ಜಾರಿ ಮಾಡುವ ಅಧಿಕಾರ ಎಂದರು.
ಒಂದು ಕಾಲದಲ್ಲಿ ರಾಜಕೀಯ ಅಧಿಕಾರ ರಾಜರ ಕೈಯಲ್ಲಿ ಇತ್ತು; ಬಳಿಕ ಆ ಅಧಿಕಾರ ಪ್ರಜಾಪ್ರಭುತ್ವ ವ್ಯವಸ್ಥೆಯ ಅಧೀನಕ್ಕೆ ಬಂದಿದೆ. ಪ್ರಜಾಪ್ರಭುತ್ವದಲ್ಲಿ ಶಾಸಕಾಂಗ, ನ್ಯಾಯಾಂಗ, ಕಾರ್ಯಾಂಗ ವ್ಯವಸ್ಥೆ ಜಾರಿಯಾಗಿದೆ. ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗದ ನಿಯಮಗಳನ್ನು ಪಾಲನೆ ಮಾಡುವದು ಪ್ರತಿಯೊಬ್ಬರ ಆದ್ಯ ಕರ್ತವ್ಯ ಹಾಗೂ ಜವಾಬ್ದಾರಿ ಎಂಬುದನ್ನು ನಾವೆಲ್ಲಾ ಅರಿಯಬೇಕಿದೆ ಎಂದು ಹೇಳಿದರು.
ನಮಗೊಂದು ಸಂವಿಧಾನ ಬೇಕು, ಆ ಸಂವಿಧಾನದ ಮೂಲಕ ಅಧಿಕಾರ ಮುನ್ನಡೆಯಬೇಕು. ಹಾಗಾಗಿ ಸಂವಿಧಾನ ಅರಿಯುವುದು ಮುಖ್ಯ. ರಾಷ್ಟ್ರಗೀತೆ, ರಾಷ್ಟ್ರ ಲಾಂಛನ ನೀಡಿ ನಿಜವಾದ ಭಾರತದ ನಿರ್ಮಾಣ ಆಗಿದ್ದು ಭಾರತದ ಸಂವಿಧಾನ ಜಾರಿ ಆದ ನಂತರ ಎಂದರು.
ದೇಶದ ಎಲ್ಲಾ ಸಮುದಾಯದ ಜನರ ಜೀವನವನ್ನು ಉತ್ತಮ ಪಡಿಸಿದ್ದು ಭಾರತದ ಸಂವಿಧಾನ. ಜಾತಿ, ಭೇದ, ಲಿಂಗ ತಾರತಮ್ಯ ಮಾಡದೇ ಎಲ್ಲರಿಗೂ ಸಮಾನವಾದ ಹಕ್ಕು ನೀಡಿದ್ದು ಸಂವಿಧಾನ. ಅಂತಹ ಸಂವಿಧಾನವನ್ನು ನಾವು ಯಾವಗಾದರೂ ಓದಿಕೊಂಡಿದ್ದೇವೆಯೇ ಎಂಬುದನ್ನು ಪ್ರಶ್ನೆ ಮಾಡಿಕೊಳ್ಳಬೇಕು. ಮಹಾತ್ಮಾ ಗಾಂಧಿ ಅವರ ಅಹಿಂಸಾ ಮಾರ್ಗ, ಅಂಬೇಡ್ಕರ್ ಅವರ ಸಾಮಾಜಿಕ ನ್ಯಾಯ, ಬುದ್ದನ ಶಾಂತಿ ಮಾರ್ಗ ಹಾಗೂ ಬಸವಣ್ಣನವರ ಸಮಾನತೆಯ ಮಾರ್ಗದಿಂದ ಭಾರತದ ಸಂವಿಧಾನ ನಿರ್ಮಾಣ ಮಾಡಲು ಸಾದ್ಯವಾಗಿದೆ ಎಂದು ನಾಗಮೋಹನ್ ದಾಸ್ ಹೇಳಿದರು.
ಜಿಲ್ಲಾ ನ್ಯಾಯಾಧೀಶ ಆರ್.ಜೆ. ಸತೀಶ ಸಿಂಗ್ ಮಾತನಾಡಿ, ನಮ್ಮ ದೇಶದ ಪ್ರತಿಯೊಬ್ಬ ನಾಗರಿಕರಿಗೆ ಸಂವಿಧಾನ ಗೊತ್ತಿರಬೇಕು. ಸಂವಿಧಾನವನ್ನು ಪ್ರತಿಯೊಬ್ಬರೂ ಅರ್ಥ ಮಾಡಿಕೊಳ್ಳಬೇಕು. ನಾವು ನಮ್ಮ ಜೀವನದ ಬಗ್ಗೆ ಅಷ್ಟೇ ಕಾಳಜಿ ವಹಿಸುತ್ತಿದ್ದೇವೆ ವಿನಃ ಮತ್ತೊಬ್ಬರ ಬಗ್ಗೆ ವಿಚಾರ ಮಾಡುತ್ತಿಲ್ಲ ಎಂದು ಹೇಳಿದರು.
ದೇಶದಲ್ಲಿ ಪ್ರತಿಭಟನೆ ಆದರೆ ಸಾಕು ಸಾರ್ವಜನಿಕ ಆಸ್ತಿ ಹಾನಿ ಮಾಡಲು ನಮ್ಮ ಜನ ಮುಂದಾಗುತ್ತಾರೆ. ನಮ್ಮ ಮಕ್ಕಳಿಗೆ ನಾವು ಮನೆಯಿಂದಲೆ ಸಂಸ್ಕೃತಿ ಕಲಿಸಬೇಕು. ನಮ್ಮ ಮನೆಯನ್ನು ಮೊದಲು ನಾವು ಸರಿಪಡಿಸಿಕೊಳ್ಳಬೇಕು. ಸಂವಿಧಾನವನ್ನು ಪ್ರತಿಯೊಬ್ಬರು ಓದವುದು ನಮ್ಮ ಆದ್ಯ ಕರ್ತವ್ಯ ಎಂದು ಹೇಳಿದರು.
ಜಿಲ್ಲಾ ಪಂಚಾಯತ್ ಸಿಇಓ ಡಾ.ರಾಜೇಂದ್ರ ಕೆ. ವಿ ಮಾತನಾಡಿ, ಒಬ್ಬ ನಾಗರಿಕನಿಗೆ ಅಧಿಕಾರಿಯನ್ನಾಗಿ ಮಾಡೊದು ಸಂವಿಧಾನ. ಸಂವಿಧಾನ ಕೆಲವರಿಗೆ ಮಾತ್ರ ಸಿಮೀತ ಆಗಿದೆ ಎಂಬ ತಪ್ಪು ಕಲ್ಪನೆ ಇದೆ. ಸಂವಿಧಾನ ರಚನೆ ಮಾಡಲು ಅಂಬೇಡ್ಕರ್ ಅವರು ದೀರ್ಘ ಅಧ್ಯಯನ ಮಾಡಿ ಸಂವಿಧಾನ ರಚನೆ ಮಾಡಿದ್ದಾರೆ. ಆದರೆ ಅಷ್ಟು ವರ್ಷಗಳು ಕಳೆದರು ನಮ್ಮ ಜನರಿಗೆ ಸಂವಿಧಾನ ಅರ್ಥ ಮಾಡಿಕೊಳ್ಳಲು ಆಗಿಲ್ಲ. ನಾವೆಲ್ಲರೂ ಸಂವಿಧಾನದ ಏಜೇನ್ಸಿಗಳಾಗಬೇಕು ಮತ್ತು ಸಂವಿಧಾನದ ಚಾಂಪಿಯನ್ಸ್ ಆಗಬೇಕು ಎಂದು ಹೇಳಿದರು .
ಜಿಲ್ಲಾಧಿಕಾರಿ ಡಾ.ಎಸ್.ಬಿ. ಬೊಮ್ಮನಹಳ್ಳಿ ಮಾತನಾಡಿ, "ನಮಗೆ ಸಂವಿಧಾನ ಅರಿವು ಇಲ್ಲದೆ ಸಾಕಷ್ಟು ತಪ್ಪು ಮಾಡುತ್ತೇವೆ. ಮೂಲ ಸಂವಿಧಾನವನ್ನು ಬಹಳ ಜನ ಇದುವರೆಗೆ ಓದಿಕೊಂಡಿಲ್ಲ. ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ ನಂತರ ದೇಶದ ಭವಿಷ್ಯಕ್ಕಾಗಿ ಸಂವಿಧಾನ ರಚನೆ ಮಾಡಲಾಗಿದೆ" ಎಂದು ಹೇಳಿದರು.
ಬೆಳಗಾವಿಯ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರಾದ ಡಾ. ಎ.ಬಿ. ಪುಂಡಲೀಕ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕರರಾದ ಬಸವರಾಜ ವರವಟ್ಟಿ, ಸಂವಿಧಾನ ಓದು ಅಭಿಯಾನ ಸಮಿತಿಯ ಸದಸ್ಯರಾದ ಕೆ.ಎಚ್.ಪಾಟೀಲ್, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಡಾ. ಉಮಾ ಸಾಲಿಗೌಡರ ಮತ್ತಿತರರು ಉಪಸ್ಥಿತರಿದ್ದರು.