ನಾನು ಖಾಯಂ ಆಗಿ ಬೆಳಗಾವಿಗೆ ಬಂದದ್ದು 1974ರಲ್ಲಿ. ಆಗ ಬೆಳಗಾವಿಯಲ್ಲಿ ಗಡಿ ಸಮಸ್ಯೆಯಿಂದಾಗಿ ಕನ್ನಡ ಮರಾಠಿ ಭಾಷಿಕರ ಭಾಷಾಭಿಮಾನ ಉತ್ಕೃಷ್ಟವಾಗಿತ್ತು. ಹಿರಿಯ ಸಾಹಿತಿಗಳು, ಕಿರಿಯ ಸಾಹಿತಿಗಳು, ಉದಯೋನ್ಮುಖರು ಎನ್ನದೇ ತಮ್ಮ ಮನದಲ್ಲಿಯ ತುಮುಲವನ್ನು ಪತ್ರಿಕೆಗಳ ಮೂಲಕ ಹೊರಹಾಕುತ್ತಿದ್ದರು. ನಾನಂತು ಹುಬ್ಬಳ್ಳಿಯಿಂದ ಬಂದವನಾಗಿದ್ದೆ. ಅಲ್ಲಿ ವಿಶಾಲ ಕರ್ನಾಟಕ ಮತ್ತು ನೇತಾಜಿ ಪತ್ರಿಕೆಗಳಿಗೆ ಲೇಖನಗಳನ್ನು ಕೊಡುತ್ತಿದ್ದೆ. ಬೆಳಗಾವಿ ಬಡಕಲ ಗಲ್ಲಿಯಲ್ಲಿ ‘ಕರ್ನಾಟಕ ಸಂಘ’ ಸ್ಥಾಪಿಸಿ ಅದರ ಉಪಾಧ್ಯಕ್ಷನಾಗಿದ್ದರಿಂದ ಸ್ಥಳಿಯ ಹಾಗೂ ರಾಜ್ಯಮಟ್ಟದ ಪತ್ರಿಕೆಯವರ ಪರಿಚಯ ಆಯಿತು. ಅದರಲ್ಲಿ ಸ್ಥಳಿಯ ಪತ್ರಿಕೆಗಳಲ್ಲಿ ಕನ್ನಡಮ್ಮ ದಿನಪತ್ರಿಕೆ ದೊಡ್ಡದಾಗಿತ್ತು ಮತ್ತು ಹೊಸ ಬರಹಗಾರರಿಗೆ ಅವಕಾಶ ನೀಡುತಿತ್ತು. ನಾನು ಆಗಾಗ ಕಥೆ, ಕವನ, ಬರೆಯುವದರ ಜೊತೆಗೆ ವಾರದ ಕೌಟುಂಬಿಕ ಚರ್ಚೆ, ನೆನಪಿನ ಸುಳಿಯಲ್ಲಿ ಎಂಬ ಹೆಸರಿನಿಂದ ಧಾರಾವಾಹಿಗಳನ್ನು ಬರೆಯುತ್ತಿದ್ದೆ. ಆಗ ಪತ್ರಿಕೆಯಲ್ಲಿ ಸಾಕಷ್ಟು ತಪ್ಪುತಡಿಗಳಾಗುತ್ತಿದ್ದವು. ಪತ್ರಿಕೆಯಲ್ಲಿ ಹೊಸಮಠ, ರೇಖಾ ಇನಾಮದಾರರಂತಹ ಬರಹಗಾರರಿದ್ದರೂ ಸಣ್ಣಪುಟ್ಟ ತಪ್ಪುಗಳ ಜೊತೆಗೆ ಮೊದಲನೆ ಪುಟದ್ದು ಕೊನೆಯ ಪುಟಕ್ಕೆ, ಕೊನೆಯ ಪುಟದ್ದು ಮಧ್ಯ ಪುಟಕ್ಕೆ ಪ್ರಿಂಟ್ ಆಗುತಿತ್ತು. ಆದರೆ ಪತ್ರಿಕೆಯ ಮಾಲಿಕರು ಅಪ್ಪಟ ಕನ್ನಡಾಭಿಮಾನಿಗಳು, ಕನ್ನಡದ ಧೀಮಂತ ಹೋರಾಟಗಾರರೂ ಆದ ಮಹಾದೇವಪ್ಪ ಟೋಪಣ್ಣವರ ಮುಖನೋಡಿ ಓದುಗರು ಸಂಭಾಳಿಸಿಕೊಂಡು ಓದುತ್ತಿದ್ದರು. ಲೇಖಕರು ಉದಾರಿಗಳಾಗುತ್ತಿದ್ದರು. ಅಂಥ ವಾತಾವರಣದಲ್ಲಿ ಪತ್ರಿಕೆಗೆ ಒಬ್ಬ ನೀಳಕಾಯದ, ಗಿಣಿಮೂಗಿನ, ಚಲುವ ಆಗಮಿಸಿದ. ಮೃದು ಮಾತಿನ, ತೀಕ್ಷ-್ಣಮತಿಯೂ ಬರಹದಲ್ಲಿ, ಫ್ರೂಪ್ ನೋಡುವುದರಲ್ಲಿ ಪ್ರಚಂಡರಾದವರೇ ಎಲ್. ಎಸ್. ಶಾಸ್ತ್ರಿ.
ಎಲ್. ಎಸ್. ಶಾಸ್ತ್ರಿಯವರು ಮೂಲತಃ ಉತ್ತರ ಕನ್ನಡ ಜಿಲ್ಲೆಯ ಹಚ್ಚ ಹಸುರಿನ ಪ್ರಕೃತಿಯ ತಾಣ, ನಿಸರ್ಗ ರಮಣಿಯ ಒಡಲು, ಸಿರಿಗನ್ನಡ ನಾಡಿನ ಕಾಶ್ಮೀರವೆಂದು ಹೊಗಳಿಸಿಕೊಳ್ಳುವ ಹೊನ್ನಾವರದವರು. ಶಂಭು ಶಾಸ್ತ್ರಿ ನಾಜಗಾರರವರು ನಮ್ಮ ಕ್ಷತ್ರಿಯ ಸಮಾಜದ ಲಕ್ಷ್ಮೀನಾರಾಯಣ ದೇವಸ್ಥಾನದ ಅರ್ಚಕರು, ಸಂಸ್ಕೃತ ವಿದ್ವಾಂಸರು. ಹೀಗಾಗಿ ಶಾಸ್ತ್ರಿಯವರಿಗೆ ತಂದೆಯ ಬಳುವಳಿಯಾಗಿ ಬಂದದ್ದು ಜಾತಿ, ಮತ, ಪಂಥಗಳ ಭೇದವಿಲ್ಲದ ಆಚರಣೆ, ಸುಸಂಸ್ಕೃತ ನಡವಳಿಕೆ ಎನ್ನಬಹುದು. ಶಾಸ್ತ್ರಿಯವರು ಬೆಳಗಾವಿಗೆ ಬಂದಾಗ ನನ್ನ ಒಂದು ಕಾದಂಬರಿ ಕನ್ನಡಮ್ಮ ಪತ್ರಿಕೆಯಲ್ಲಿ ಧಾರಾವಾಹಿಯಾಗಿ ಬರುತಿತ್ತು. ಅದನ್ನು ಅವರು ಗೋಕಾಕದಲ್ಲಿದ್ದುಕೊಂಡು ಓದುತ್ತಿದ್ದರಂತೆ. ನಿಜವಾಗಿ ಅವರ ಮೊದಲ ಭೇಟಿ ಕೃಷ್ಣಮೂರ್ತಿ ಪುರಾಣಿಕರ ಮನೆಯಲ್ಲಿ ಎಂದು ಹೇಳಬಹುದು. ಎಂ. ಎಸ್. ಟೋಪಣ್ಣವರ ಪತ್ರಿಕೆಗೆ ಬಂದ ನಂತರ ನನಗೆ ಶಾಸ್ತ್ರಿಯವರು ಹಲವಾರು ವರ್ಷಗಳ ಗೆಳೆಯರಂತೆ ಆತ್ಮೀಯರಾದರು. ಆಗ ನನ್ನ ಬರವಣಿಗೆಯಲ್ಲಿ ಹೃಸ್ವ, ದೀರ್ಘಗಳ ತಪ್ಪುಗಳು ಬಹಳ ಆಗುತ್ತಿದ್ದವು (ಈಗಲೂ) ಅವುಗಳನ್ನೆಲ್ಲ ಸರಿಯಾಗಿ ತಿದ್ದುಪಡಿ ಮಾಡಿ ಪ್ರಕಟಿಸಹತ್ತಿದರು. ಇದರಿಂದ ನನ್ನ ಬರವಣಿಗೆಗೆ ಒಂದು ನಿರ್ದಿಷ್ಟತೆ ಬಂತು ಎಂದು ಹೇಳಿದರೆ ಅತಿಶೋಕ್ತಿಯಲ್ಲ.
ಎಲ್. ಎಸ್. ಅವರನ್ನು ನಾನು 1980 ರಿಂದಲೇ ನಮ್ಮ ನಾಡಹಬ್ಬದ ಕಾರ್ಯಕ್ರಮದಲ್ಲಿ ಪದಾಧಿಕಾರಿಯನ್ನಾಗಿ, ಕವಿಯನ್ನಾಗಿ, ವಾಖ್ಯಾನಕಾರರನ್ನಾಗಿ ಸೇರಿಸಿಕೊಂಡು ಕಾರ್ಯಕಲಾಪಗಳನ್ನು ನಡೆಯಿಸಿಕೊಂಡು ಬಂದಿದ್ದೇನೆ. ಇತ್ತೀಚೆಗಂತೂ ಸಮಾರಂಭದ ಅಧ್ಯಕ್ಷರಾಗಿ, ಮುಖ್ಯ ಅತಿಥಿಗಳಾಗಿ ಪರಿಗಣಿಸಲ್ಪಡುತ್ತಾರೆ. ಚಿಕ್ಕಂದಿನಲ್ಲಿ ಕಲಿತ ಗಮಕ ಕಲೆಯನ್ನು ಮರೆತಿಲ್ಲ. ಗೀತ ರಾಮಾಯಣ ಗೀತಗೋವಿಂದದಂತಹ ಕಾರ್ಯಕ್ರಮಗಳನ್ನು ನಮ್ಮ ನಾಡಹಬ್ಬದ ವೇದಿಕೆಯ ಮೂಲಕ ನೀಡಿದ್ದಾರೆ. ಕಾರ್ಯಕಲಾಪಗಳನ್ನು ನಡೆಸುವಾಗ ನಾಡಗೀತೆಯನ್ನು ಹಾಡುವವರು. ಇಲ್ಲವಾದಾಗ ಯಾವ ಮುಜುಗರವಿಲ್ಲದೆ ನಾಡಗೀತೆಯನ್ನು ಹಾಡುವ ಧೀಮಂತ ಕನ್ನಡ ಅಭಿಮಾನಿ ನಮ್ಮ ಶಾಸ್ತ್ರಿಯವರು. ಅಪರೋಕ್ಷ ಜ್ಞಾನಿಗಳಾದ ದಾಸರ ಕೀರ್ತನೆಗಳನ್ನು, ಬೇಂದ್ರೆ, ಕುವೆಂಪು, ಕೆ. ಎಸ್. ನರಸಿಂಹಸ್ವಾಮಿ, ಲಕ್ಷ್ಮಿನಾರಾಯಣ ಭಟ್ಟರಂತವರ ಭಾವಗೀತೆಗಳನ್ನು ಸುಮಧುರವಾದ ಕಂಠದಿಂದ ಹಾಡುವ ಪರಿ ಅಮೋಘವಾಗಿದೆ. ಬದುಕಿನ ಉದ್ದಕ್ಕೂ ಸಾಹಿತ್ಯ, ಸಂಸ್ಕೃತಿ, ಸಂಗೀತದಲ್ಲಿಯೇ ಮಿಂದು ಏಳುವ ಶಾಸ್ತ್ರಿಯವರು ಅಂಬಿಕಾತನಯರವರ “ನನಗೂ ನಿನಗೂ ಅಂಟಿದ ನಂಟಿನ ಕೊನೆ ಬಲ್ಲವರಾರು ಕಾಮಾಕ್ಷಿಯೇ” ಎನ್ನುತ್ತ ಕಷ್ಟದ ದಿನಗಳನ್ನು ಕಳೆಯುವುದರೊಂದಿಗೆ “ಗಮ ಗಮ ಗಮಾಡಸ್ತಾವ ಮಲ್ಲಿಗೆ... ನೀವು ಹೊಂಟಿದ್ದೀಗ ಎಲ್ಲಿಗೆ?” ಎಂಬ ಸಾಲುಗಳನ್ನು ಗುಣಗುಣಿಸುತ್ತ ಸಂತಸದ ದಿನಗಳನ್ನು ಪತ್ರಿಕಾ ಪ್ರಪಂಚದೊಂದಿಗೆ, ಚುಟುಕುಗಳೊಂದಿಗೆ, ಗಮಕದೊಂದಿಗೆ, ಸಂಗೀತ ಸಂಜೆಯ ಕಂಪು ಸೂಸುವ ಇಂಪುದೊಂದಿಗೆ ಕಾಲಕಳೆಯುತ್ತ ಸಾಂಸ್ಕೃತಿಕ ಕಾರ್ಯಕ್ರಮಗಳ ಹರಿಕಾರರಾಗಿ ಬೆಳಗಾವಿ ಪರಿಸರದಲ್ಲಿ ಬೆಳೆದು ನಿಂತಿದ್ದಾರೆ.
ಶಾಸ್ತ್ರಿಯವರು ಸದಾ ಒಂದಿಲ್ಲೊಂದು ಕಾಯಕದಲ್ಲಿಯೇ ನಿರತರಾದವರು. ಬೆಳಗಾವಿ ಜಿಲ್ಲೆಗೆ ಚುಟುಕು ಸಾಹಿತ್ಯದ ಪರಿಚಯ ಮಾಡಿಕೊಟ್ಟು, ಜಿಲ್ಲಾಮಟ್ಟದ, ವಿಭಾಗಮಟ್ಟದ ಹಾಗೂ ರಾಜ್ಯಮಟ್ಟದ ಚುಟುಕು ಸಾಹಿತ್ಯ ಸಮ್ಮೇಳನಗಳನ್ನು ಅತ್ಯಂತ ಯಶಸ್ವಿಯಾಗಿ ನಡೆಸಿಕೊಟ್ಟ ಹಿರಿಮೆ ಇವರದಾಗಿದೆ. ಇವರೊಂದಿಗೆ ನಾನು ಪ್ರಧಾನಕಾರ್ಯದರ್ಶಿಯಾಗಿ, ಸಂಘಟನಾ ಕಾರ್ಯದರ್ಶಿಯಾಗಿ, ಸಮ್ಮೇಳನಗಳಲ್ಲಿ ಮಹತ್ವದ ಕಾರ್ಯಗಳನ್ನು ಮಾಡಿದ್ದೇನೆ ಎಂಬ ಸಂತಸ ನನಗಿದೆ. ಎರಡು ಬಾರಿ ನನ್ನನ್ನು ಬೆಳಗಾವಿ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷನನ್ನಾಗಿ ಮಾಡಿದ್ದಾರೆ. ಆದರೆ ಸ್ವತಂತ್ರವಾಗಿ ಯಾವ ಕಾರ್ಯಕಲಾಪಗಳನ್ನು ಮಾಡಲು ಆಗಲಿಲ್ಲ. ಯಾಕಂದರೆ ಶಾಸ್ತ್ರಿಯವರಿಗೆ ಸಮಯವಿದ್ದಾಗ ಮಾತ್ರ ಕಾರ್ಯಕಲಾಪಗಳನ್ನು ರೂಪಿಸಿಕೊಳ್ಳಬೇಕು. ಅವರಿಗೆ ಹಲವಾರು ಜನರ ಪುಸ್ತಕಗಳನ್ನು ಪ್ರಕಟಿಸುವುದು, ಪತ್ರಿಕೆಯ ಸಂಪಾದಕೀಯ, ಸಾಪ್ತಾಹಿಕ ಹೊಣೆ, ಅಲ್ಲಿ ಇಲ್ಲಿ ಉಪನ್ಯಾಸಗಳಿಗೆ ಹೋಗುವುದು ಇಂಥದರಲ್ಲಿ ನಿರತನಾದ ಅವರಿಗೆ ಸಮಯ ಸಿಗುವುದು ಕಷ್ಟ. ಅವರಿಗೆ ಸಮಯ ಸಿಕ್ಕಾಗ ನನಗೆ ಕೆಲಸದ ಒತ್ತಡ. ಹೀಗಾಗಿ ನನಗೂ ಅವರಿಗೂ ಸ್ವಲ್ಪು ಮನಸ್ತಾಪ ಆಗಿದ್ದು ಉಂಟು. ಆದರೆ ಮತ್ತೆ ನಾವು ಒಂದಾಗುತ್ತಿದ್ದೆವು. ನಮ್ಮ ಗೆಳೆತನಕ್ಕೆ, ಸಹೋದರತ್ವಕ್ಕೆ ಒಂದೆರಡು ಬಾರಿ ಕಾರ್ಮೋಡ ಬಂದದ್ದು ಉಂಟು, ಅದು ಹೀಗೆ.
2014ರಲ್ಲಿ ನನ್ನ “ಹಿಂದುಸ್ಥಾನ ಕೀ ಪಾವನ ಯಾತ್ರಾ” ಎಂಬ ಗ್ರಂಥವನ್ನು ಬಿಡುಗಡೆ ಕಾಶಿಯಲ್ಲಿ ಏರಿ್ಡಸಿದ್ದೆ. ನನ್ನ ಕುಟುಂಬದ ಸದಸ್ಯರೊಂದಿಗೆ ಅಣ್ಣನ ಸಮಾನರೆಂದು ಶಾಸ್ತ್ರಿಯವರನ್ನು ಕರೆದುಕೊಂಡು ಹೋಗಿ ವಾರಣಾಸಿಯಲ್ಲಿ 3-4 ದಿನ ಇದ್ದು ಆರಾಮವಾಗಿ ಹೋಗಿಬಂದೆವು. ಆದರೆ ಅವರಿಗೆ ಹಾರ್ಟಸರ್ಜರಿ ಆಗಿತ್ತು. ಪ್ರಕೃತಿ ಬಹಳ ಸೂಕ್ಷ್ಮವಾಗಿತ್ತು. ಅಂಥದರಲ್ಲಿ ಕಾಶಿಯಾತ್ರೆ ಚಳಿಗಾಲದ ಸಮಯದಲ್ಲಿ ಮಾಡಿದ್ದರಿಂದ ತೊಂದರೆಗೀಡಾಗಿದ್ದು, ಕೆಮ್ಮು ಕಫ ಹೆಚ್ಚಾಗಿದ್ದು, ಬೇಗ ಆರೋಗ್ಯ ಸುಧಾರಿಸದೇ ಇದ್ದದ್ದು ಇದರ ಪರಿಣಾಮದಿಂದ ಅವರು ನನ್ನ ಮೇಲೆ ಸ್ವಲ್ಪು ಸಿಟ್ಟಾದರು. ನಂತರ ನಾನು ಅವರನ್ನು ಕಂಡು ಚರ್ಚಿಸಿದ ನಂತರ “ಕಾಶಿಯಾತ್ರೆ ಮಾಡಿಸಿದ್ದಕ್ಕೆ ಧನ್ಯವಾದ” ಎಂದರು. ಹೀಗೆ ನನ್ನ ಪ್ರೀತಿಯ ಅಣ್ಣನನ್ನು ಕಾಶಿಯಾತ್ರೆ ಮಾಡಿಸಿದ ಹೆಮ್ಮೆ ನನ್ನದು.
2017ರಲ್ಲಿ “ಬೆಳಗಾವಿ ಚಳುವಳಿಗಳು ಮತ್ತು ನಾಡಹಬ್ಬ” ಎಂಬ ನನ್ನ ಗ್ರಂಥ ಹೊರಬಂತು. ಅದರ ಪ್ರುಫನ್ನು ಶಾಸ್ತ್ರಿಯವರೇ ನೋಡುತ್ತಿದ್ದರು. (ನನ್ನ ಎಲ್ಲ ಪುಸ್ತಕಗಳ ಪ್ರುಫ್ ನೋಡುವವರು ಶಾಸ್ತ್ರಿಯವರೇ. ಅವರು ಕೊನೆಯಬಾರಿ ನೋಡಿದ ಮೇಲೆಯೇ ನನ್ನ ಗ್ರಂಥಗಳು ಮುದ್ರಣಗೊಳ್ಳುವುದು. ಇದು ಬಹುವರ್ಷಗಳಿಂದ ನಡೆದು ಬಂದಿದೆ.) ಅದರಲ್ಲಿ ನಾನು ಕೇವಲ ಬೆಳಗಾವಿಯಲ್ಲಿಯ ಹೋರಾಟಗಳಿಗೆ ಮತ್ತು ನಾಡಹಬ್ಬದ ಕಾರ್ಯಕಲಾಪಗಳನ್ನು ನಿವೇದಿಸಿದ್ದೆ. ಈ ಚುಟುಕು ಪರಿಷತ್ತುಗಳನ್ನಾಗಲಿ, ಸಾಹಿತ್ಯಿಕ ಕಾರ್ಯಕಲಾಪಗಳನ್ನಾಗಲಿ ಬರೆದಿರಲಿಲ್ಲ. ಒಬ್ಬ ಸಾಮಾನ್ಯ ನಾಗರಿಕನಾಗಲಿ, ಒಂದು ಚಿಕ್ಕ ಸಂಘಗಳು ಕನ್ನಡಕ್ಕಾಗಿ ಕೆಲಸ ಮಾಡಿದ್ದನ್ನು ನಿರೂಪಿಸಿದ್ದೆ. ಕೊನೆಯ 10-15 ಪುಟಗಳಿರುವಾಗ ಶಾಸ್ತ್ರಿಯವರಿಗೆ ಕೋಪ ಬಂದು ಒಂದು ಚೀಟಿ ಕಳಿಸಿದರು. “ಚಿಕ್ಕ ಚಿಕ್ಕ ಸಂಘ-ಸಂಸ್ಥೆಗಳ ಕೆಲಸವನ್ನು ನಿಮ್ಮ ಗ್ರಂಥದಲ್ಲಿ ಬರೆದಿದ್ದಿರಿ, ನಾನು ಹಲವಾರು ಸಂಘಟನೆಗಳನ್ನು ಏರಿ್ಡಸಿದ್ದೇನೆ. ಚುಟುಕು ಸಾಹಿತ್ಯ ಪರಿಷತ್ತಿನ ಬಗ್ಗೆ ಬರೆದಿಲ್ಲ. ನೀವು ಮುದ್ದಾಂ ಹೀಗೆ ಮಾಡಿದ್ದೀರಿ” ಎಂದು ಕೆಂಡಾಮಂಡಲರಾದರು. ನನಗೆ ಧರ್ಮ ಸಂಕಟ. ಈ ಗ್ರಂಥ ಕೇವಲ ಹೋರಾಟಗಳ ಬಗ್ಗೆ ಮತ್ತು ನಮ್ಮ ನಾಡಹಬ್ಬದ ಬಗ್ಗೆ ಎಂದು ಈ ಚೌಕಟ್ಟಿನಲ್ಲಿ ಆ ಗ್ರಂಥವನ್ನು ಬರೆದಿದ್ದೆ. ಅದರಲ್ಲಿ ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ನಡೆದ ಕೆಲವು ಘಟನೆಗಳನ್ನು ಬರೆದಿದ್ದೆ. ಯಾಕಂದರೆ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಹೇಗೆ ವಿಶ್ವಸ್ಥ ಮಂಡಳಿಯನ್ನಾಗಿ ಮಾಡಿಕೊಂಡವು. ಅದಕ್ಕಾಗಿ ಕನ್ನಡ ಸಂಘಟನೆಗಳು ಯಾವರೀತಿ ಹೋರಾಡಿದವು ಎಂಬುದನ್ನು ನಿರೂಪಿಸಬೇಕಾಗಿತ್ತು. ಹೀಗಾಗಿ ನಾನು ಕನ್ನಡ ಸಾಹಿತ್ಯ ಪರಿಷತ್ತ ಬಗ್ಗೆ ಬರೆದಿದ್ದೆ. ಚುಟುಕು ಸಾಹಿತ್ಯದ ಬಗ್ಗೆ ಯಾವ ಜಿದ್ದಾಜಿದ್ದಿ ಇರಲಿಲ್ಲ. ಅದು ತನ್ನಷ್ಟಕ್ಕೆ ತಾನು ಸದ್ದು ಗದ್ದಲವಿಲ್ಲದೆ ನಡೆದುಕೊಂಡು ಬಂದಿತ್ತು. ಅದರಲ್ಲಿ ಯಾವ ರಾಜಕೀಯವಾಗಲಿ, ಮತ್ಸರವಾಗಲಿ ಇರಲಿಲ್ಲ. ಹೀಗಾಗಿ ನಾನು ಬರೆದಿರಲಿಲ್ಲ. ಆದರೆ ಶಾಸ್ತ್ರಿಯವರು ತಪ್ಪು ಭಾವಿಸಿ ನನ್ನ ಸಂಸ್ಥೆಯನ್ನೇ ಬಿಟ್ಟು ಎಲ್ಲ ಸಂಘಗಳ ಬಗ್ಗೆ ಬರೆದಿದ್ದಾರೆ ಎಂದು ಸಿಟ್ಟಾಗಿದ್ದರು. ಕೊನೆಯ ಗಳಿಗೆಯಲ್ಲಿ ಮತ್ತೆ ಚುಟುಕು ಸಾಹಿತ್ಯದ ಬಗ್ಗೆ, ಸಮ್ಮೇಳನಗಳ ಬಗ್ಗೆ ವಿವರವಾಗಿ ಬರೆದೆ. ಈ ಸಮಯದಲ್ಲಿ ಕೆಲವರು ನಮ್ಮ ಸ್ನೇಹಕ್ಕೆ ವಿಘ್ನತರಲು ಸಾಕಷ್ಟು ಶ್ರಮವಹಿಸಿದರು. ಆದರೆ ನಮ್ಮಲ್ಲಿ ಪ್ರೀತಿ, ವಿಶ್ವಾಸ ಬಹು ಆಳವಾದದ್ದು. ಯಾವದೇ ಸಿಟ್ಟು ಸೆಡವು ಕ್ಷಣಿಕ. ನಂತರ ಎಲ್ಲವೂ ಮಂಗಮಾಯ. ಮತ್ತೆ ಅದೇ ಪ್ರೀತಿ, ವಿಶ್ವಾಸದಿಂದ ಇರುತ್ತೇವೆ. ಜೀವನವೆಂದರೆ ಸಿಟ್ಟು ಸೆಡವು, ಕೋಪ, ತಾಪ ಇದ್ದದ್ದೆ. ಅದರೊಂದಿಗೆ ಹಾಸ್ಯ, ನಲಿವು, ಸಂತಸ ಕೂಡಾ ನನ್ನ ಹಾಗೂ ಶಾಸ್ತ್ರಿಯವರ ಮಧ್ಯದಲ್ಲಿ ಇದೆ. ಅವರ ಸ್ನೇಹ ಹಾಲು ಸಕ್ಕರೆಯಂತೆ ಎಂಬುದು ಸತ್ಯ. ಇದೇ ಪ್ರೀತಿ ಕೊನೆಯವರೆಗೆ ಆ ಭಗವಂತ ನೆರವೇರಿಸಲಿ ಎಂಬುದೇ ನನ್ನ ಆಸೆ. ಅವರಿಗೆ ಈಗ 75-76 ವರ್ಷ. ಇನ್ನೂ 30-35 ವರ್ಷ ಬಾಕಿ ಇವೆ. ಅಂದರೆ ಮನುಷ್ಯನ ಆಯುಷ್ಯ 110. ಹೀಗಾಗಿ ಅವರು ಇನ್ನೂ ಸಾಕಷ್ಟು ಗ್ರಂಥಗಳನ್ನು ರಚಿಸಲಿ, ಸಾಂಸ್ಕೃತಿಕ ಕಾರ್ಯಕಲಾಪಗಳನ್ನು ಏರಿ್ಡಸಲಿ, ಆಯುಷ್ಯ ವೃದ್ಧಿಸಲಿ, ಆರೋಗ್ಯ ಭಾಗ್ಯವನ್ನು ದೇವರು ದಯಪಾಲಿಸಲಿ ಎಂದು ಪ್ರಾರ್ಥಿಸಿ ಈ ಲೇಖನಕ್ಕೆ ವಿರಾಮ ಹೇಳುತ್ತೇನೆ.
- * * * -