ಬೆಳಗಾವಿ 29: ಭಾರತಕ್ಕೆ ಅದೇ ತಾನೆ ಸ್ವಾತಂತ್ರ್ಯ ಬಂದ ದಿನಗಳಲ್ಲಿಯ ಕಥಾವಸ್ತು ಇದು. ಪುರಾಣ ಕಾಲದಿಂದಲೂ ಸತ್ಯವನ್ನು ಮುಚ್ಚಿಟ್ಟು ಸುಳ್ಳು ತನ್ನ ಪ್ರಾಭಲ್ಯ ಮೆರೆಯುತ್ತ ಬಂದಿದೆ. ಇಂದಿಗೂ ಅದೇ ನಡೆಯುತ್ತ ಬಂದಿದೆ ಎಂಬ ವಿಷಯದ ಮೇಲೆ 'ನಾ ಸತ್ತಿಲ್ಲ ಎಂಬ ನಾಟಕವನ್ನು ರಚನೆ ಮಾಡಿದೆ. ಎಲ್ಲ ಪಾತ್ರಗಳಿಗೂ ಜೀವ ತುಂಬಿದ ರಂಗಸಂಪದದ ಕಲಾವಿದರು ನನ್ನ ವಿಚಾರಗಳನ್ನು ಪ್ರೇಕ್ಷಕರಿಗೆ ತಲುಪಿಸಿದ್ದಾರೆ. ಇದೊಂದು ಯಶಸ್ವಿ ಪ್ರಯೋಗ ಎಂದು 'ನಾನು ಸತ್ತಿಲ್ಲ ನಾಟಕದ ಕೃತಿಕಾರ, ಸಂಶೋದಕ ವಿಜಯಪುರದ ಡಾ. ಕೃಷ್ಣ ಕೊಲ್ಹಾರ ಕುಲಕರ್ಣಿಯವರು ಇಂದಿಲ್ಲಿ ಹೇಳಿದರು.
ನಗರದ ರಂಗಸಂಪದದವರು ನಗರದ ಕೋನವಾಳ ಬೀದಿಯಲ್ಲಿರು ಲೋಕಮಾನ್ಯ ರಂಗಮಂದಿರದಲ್ಲಿ ದಿ. 28 ಶನಿವಾರದಿಂದ ದಿ. 30 ಸೋಮಾರದ ವರೆಗೆ ಮೂರು ದಿನಗಳ ಕಾಲ "ನಾಡಹಬ್ಬ ನಾಟಕೋತ್ಸವ" ಹಮ್ಮಿಕೊಂಡಿದ್ದಾರೆ. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಡಾ. ಕೃಷ್ಣ ಕೊಲ್ಹಾರ ಕುಲಕರ್ಣಿಯವರು ಮೇಲಿನಂತೆ ಅಭಿಪ್ರಾಯ ವ್ಯಕ್ತ ಪಡಿಸಿದರು. ಮುಂದೆ ಮಾತನಾಡಿದ ಅವರು ನನಗೂ ಬೆಳಗಾವಿಗೂ ಅವಿನಾಭಾವ ಸಂಬಂಧ ಐವತ್ತು ವರ್ಷಗಳ ಹಿಂದೆ ನಾನು ಕೋನವಾಳ ಬೀದಿಯಲ್ಲಿಯೇ ವಾಸಿಸುತ್ತಿದ್ದೆ. ಈಗ ಅದೇ ಬೀದಿಯಲ್ಲಿ ನನ್ನ ನಾಟಕ ಪ್ರದರ್ಶನಗೊಳ್ಳುತ್ತಿರುವುದು ನನಗೆ ತುಂಬ ಸಂತೋಷವನ್ನುಂಟು ಮಾಡಿದೆ ಎಂದು ಹೇಳಿದರು.
ಅಧ್ಯಕ್ಷತೆಯನ್ನು ವಹಿಸಿದ್ದ ಹಿರಿಯ ನ್ಯಾಯವಾದಿಗಳಾದ ಎಸ್. ಎಮ್. ಕುಲಕಣರ್ಿಯವರು ಡೋಲು ಬಾರಿಸುವುದರೊಂದಿಗೆ ನಾಟಕೋತ್ಸವವನ್ನು ಉದ್ಘಾಟಿಸಿದರು.
ಅಣ್ಣ ತಮ್ಮಂದಿರ ಕೌಟುಂಬಿಕ ಜಗಳದಲ್ಲಿ ಅಣ್ಣ ಸಾಯದಿದ್ದರೂ ಸತ್ತಿದ್ದಾನೆಂದು ಹೇಳಿ ಅಣ್ಣ ಆಸ್ತಿಯನ್ನು ತಮ್ಮ ಲಪಟಾಯಿಸಬೇಕೆಂಬ ಸಂಚಿನ ಕತೆಯೇ 'ನಾ ಸತ್ತಿಲ್ಲ ನಾಟಕ. ಕೋರ್ಟ ದೃಶ್ಯದಲ್ಲಿ ಪ್ರಾರಂಭವಾಗುವ ನಾಟಕ ಅದೇ ದೃಶ್ಯದಲ್ಲಿಯೇ ಮುಕ್ತಾಯಗೊಳ್ಳುತ್ತದೆ. ಇದರಲ್ಲ ಭಾಗವಹಿಸಿದ ಎಲ್ಲ ಪಾತ್ರಧಾರಿಗಳು ತಮ್ಮ ತಮ್ಮ ಪಾತ್ರಗಳಿಗೆ ಜೀವತುಂಬಿ ನ್ಯಾಯವನ್ನೊದಗಿಸಿಕೊಟ್ಟಿದ್ದಾರೆ.
ಡಾ. ಅರವಿಂದ ಕುಲಕರ್ಣಿ(ಸತ್ಯವಂತರಾವ್) ಪ್ರಸಾದ ಕಾರಜೋಳ(ಧನವಂತರಾವ), ವಾಮನ ಮಾಳಗಿ(ವಿವೇಕರಾವ), ವೆಂಕಟೇಶ ಕುಲಕರ್ಣಿ (ನ್ಯಾಯಾಧೀಶರು), ಶ್ರೀನಿವಾಸ ಕುಲಕರ್ಣಿ(ಬೀರಪ್ಪ), ಪ್ರಶಾಂತ ಪಾಂಡವ(ಕೋರ್ಟಿನ ಸಿಪಾಯಿ), ಶಿರೀಷ ಜೋಶಿ(ಪ್ರಚಂಡ ಆಚಾರ), ಪೂಜಾ ಕಾರಜೋಳ (ಕೋರ್ಟ ಕ್ಲರ್ಕ), ಜಯಶ್ರೀ ಕ್ಷೀರಸಾಗರ(ಟೈಪಿಸ್ಟ್) ಪಾತ್ರದಲ್ಲಿ ಕಾಣಿಸಿಕೊಂಡರೆ ನಾಟಕಕ್ಕೆ ನಿರ್ದೇಶನ ನೀಡಿರುವ ಶರಣಗೌಡ ಪಾಟೀಲ (ಬಂಡೇರಾವ) ವಕೀಲನ ಪಾತ್ರದಲ್ಲಿ ಕಾಣಿಕೊಂಡಿದ್ದಾರೆ. ವಿಠ್ಠಲ ಅಸೋದೆ (ನೆಳಲು ಬೆಳಕು), ರಫೀಕ್ ಶೇಖ್( ಹಿನ್ನಲೆ ಗಾಯನ)
ಒಟ್ಟಿನಲ್ಲಿ "ನಾನು ಸತ್ತಿಲ್ಲ ನಾಟಕ 75 ನಿಮಿಷಗಳ ಕಾಲ ಪ್ರೇಕ್ಷಕರ ರಂಜಿಸುವುದರ ಜೊತೆಗೆ ಸತ್ಯವನ್ನು ಮುಚ್ಚಿಡುತ್ತಾರೆಂಬ ಸತ್ಯವನ್ನು ಬಿಚ್ಚಿಟ್ಟಿತ್ತು. ಸಂಭಾಷಣೆ ಕಡಿಮೆಯಿದ್ದ ಸತ್ಯವಂತರಾವ ಪಾತ್ರದ ಡಾ. ಅರವಿಂದ ಕುಲಕರ್ಣಿಯವರು ಹಾವಭಾವದಲ್ಲಿ ತಮ್ಮ ನೋವನ್ನು ತುಂಬ ಚೆನ್ನಾಗಿ ತೋರಿಸಿಕೊಂಡರು. ತಮ್ಮ ಗಾಂಭಿರ್ಯದಿಂದಲೇ ಧನವಂತರಾವ ಪಾತ್ರದ ಪ್ರಸಾದ ಕಾರಜೋಳ ಎಲ್ಲರ ಗಮನ ಸೆಳೆದರು. ಪ್ರಚಂಡ ಆಚಾರಿ ಪಾತ್ರದ ಶಿರೀಷ ಜೋಶಿ ತಮ್ಮ ಮಾತುಗಳಿಂದ ಎಲ್ಲರನ್ನೂ ನಗೆಗಡಲಲ್ಲಿ ತೇಲಿಸಿದರು. ನ್ಯಾಯವಾದಿ ಪಾತ್ರದ ವಾಮನ ಮಾಳಗಿ ಹಾಗೂ ಶರಣಗೌಡ ಪಾಟೀಲರ ಅಭಿನಯದಲ್ಲಿ ನೈಜತೆಯಿತ್ತು. ಸಾಕ್ಷಿ, ವಾದ, ಪ್ರತಿವಾದಗಳು ಮುಗಿದ ತಕ್ಷಣವೇ ತೀರ್ಪನ್ನು ನೀಡುವ ನ್ಯಾಯಾಧೀಶರು ಅದಕ್ಕಾಗಿ ಸ್ವಲ್ಪ ಸಮಯ ತೆಗೆದುಕೊಳ್ಳಬೇಕಾಗಿತ್ತು. ಕೋರ್ಟ ಬಾಗಲಿಲ್ಲಿ ನಿಂತು ಹೆಸರನ್ನು ಕೂಗುವ ಸಿಪಾಯಿ ನ್ಯಾಯಾಧೀಶರ ಪಕ್ಕದಲ್ಲಿ ಏಕೆ ನಿಲ್ಲುತ್ತಾನೋ ತಿಳಿಯಲಿಲ್ಲ. ಕೋರ್ಟ ದೃಶ್ಯದಲ್ಲಿ ದುಂಡುಮೇಜಿದ್ದು ನಾಲ್ಕಾರು ವಕೀಲರು ಕುಳಿತಿಕೊಂಡಿದ್ದರೆ ಇನ್ನೂ ನೈಜವೆನಿಸುತ್ತಿತ್ತು. ಸಂಭಾಷಣೆ ಸರಿಯಾಗಿ ಕೇಳದೆ ಹಿನ್ನಲೆ ಸಂಗೀತ ಸ್ವಲ್ಪ ಕಿರಿಕಿರಿಯನುಂಟು ಮಾಡಿತು.
ಕೊನೆಗೂ ನಾಟಕದಲ್ಲಿ ಸತ್ಯಕ್ಕೆ ಜಯ ಸಿಗಲಿಲ್ಲವಲ್ಲ ಕೆಲ ಪ್ರೇಕ್ಷಕರು ಮನಸ್ಸಿಗೆ ಬೇಸರವನ್ನುಂಟು ಮಾಡಿಕೊಂಡರು. ಒಟ್ಟಿನಲ್ಲಿ ಸಮಾಜಕ್ಕೆ ಸಂದೇಶ ನೀಡುವುದರ ಜೊತೆಗೆ ಮನಸ್ಸನ್ನು ಮುದಗೊಳಿಸುವಲ್ಲಿ ಈ ನಾಟಕ ಯಶಸ್ವಿಯಾಯಿತು. ಪದ್ಮಾ ಕುಲಕಣರ್ಿ ನಿರೂಪಿಸಿದರು. ಶಿರೀಷ ಜೋಶಿ ಪರಿಚಯಿಸಿದರು. ಶಾಂತಾ ಆಚಾರ್ಯ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಆರ್. ಬಿ. ಕಟ್ಟಿ ಅತಿಥಿಗಳನ್ನು ಗೌರವಿಸಿದರು.
ಶರಣಗೌಡ ಪಾಟೀಲ ವಂದಿಸಿದರು.