ಶೇಡಬಾಳ 09 : ಕಾಗವಾಡ ವಿಧಾನಸಭಾ ಮತಕ್ಷೇತ್ರದ ಬಿಜೆಪಿ ನೂತನ ಶಾಸಕ ಶ್ರೀಮಂತ ಬಾಳಾಸಾಬ ಪಾಟೀಲರು ಬೆಳಗಾವಿಯಿಂದ ವಿಜಯಶಾಲಿಗಳಾಗಿ ಕಾಗವಾಡ ಮತಕ್ಷೇತ್ರಕ್ಕೆ ಅವರ ಸುಪುತ್ರರಾದ ಶ್ರೀನಿವಾಸ ಶ್ರೀಮಂತ ಪಾಟೀಲ, ಯೋಗೇಶ ಶ್ರೀಮಂತ ಪಾಟೀಲ ಆಗಮಿಸುತ್ತಿದ್ದಂತೆ ಕಾಗವಾಡ ಗ್ರಾಮದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಅವರ ಅಭಿಮಾನಿಗಳು ಅವರಿಗೆ ಭವ್ಯ ಸ್ವಾಗತ ನೀಡಿ ಗ್ರಾಮಕ್ಕೆ ಬರಮಾಡಿಕೊಂಡರು.
ಮಧ್ಯಾಹ್ನ 12 ಗಂಟೆಗೆ ಮತ ಎಣಿಕೆ ಮುಗಿಸಿಕೊಂಡು ಕಾಗವಾಡ ಕ್ಷೇತ್ರಕ್ಕೆ ಆಗಮಿಸಿದ ನೂತನ ಶಾಸಕ ಶ್ರೀಮಂತ ಪಾಟೀಲರ ಪುತ್ರರು ಶಿರಗುಪ್ಪಿ, ಜುಗೂಳ, ಮಂಗಾವತಿ, ಕಾಗವಾಡ, ಶೇಡಬಾಳ, ಉಗಾರ ಬುದ್ರುಕ, ಉಗಾರ ಖುರ್ದ ಮೊದಲಾದ ಗ್ರಾಮಗಳಲ್ಲಿ ಭವ್ಯ ಸ್ವಾಗತ ನೀಡಿ ಮೆರವಣಿಗೆಯ ಮೂಲಕ ಬರಮಾಡಿಕೊಂಡರು.
ಸುಮಾರು 2 ಕಿ.ಮೀ. ವರೆಗೆ ಮೆರವಣಿಗೆ ಮುಂದೆ ವಾದ್ಯ ವೈಭವ, ಪಟಾಕಿ, ಗುಲಾಲ, ಸಿಹಿ ಹಂಚುತ್ತಾ ಜೈ ಕಾರ ಹಾಕುತ್ತಾ ಪ್ರತಿ ಗ್ರಾಮಗಳಲ್ಲಿ ಮೆರವಣಿಗೆ ಮಾಡಲಾಯಿತು. ಈ ಸಮಯದಲ್ಲಿ ನೂತನ ಶಾಸಕರಾಗಿ ಆಯ್ಕೆಯಾದ ಶ್ರೀಮಂತ ಬಾಳಾಸಾಬ ಪಾಟೀಲರ ಪುತ್ರ ಶ್ರೀನಿವಾಸ ಪಾಟೀಲ ಮಾತನಾಡಿ ಜಿಲ್ಲೆ, ರಾಜ್ಯದಲ್ಲಿಯೇ ಅತ್ಯಂತ ತುರುಸಿನಿಂದ ಕೂಡಿದ್ದ ಈ ಉಪಚುನಾವಣೆಯಲ್ಲಿ ದಾಖಲೆ ಮತಗಳ ಅಂತರದಿಂದ ನಮ್ಮ ತಂದೆಯವರಾದ ಶ್ರೀಮಂತ ಪಾಟೀಲರನ್ನು ಗೆಲ್ಲಿಸಿದ ನಿಮಗೆಲ್ಲರಿಗೂ ಋಣಿಯಾಗಿದ್ದೇವೆ. ನಿಮ್ಮ ಈ ಪ್ರೀತಿ, ವಿಶ್ವಾಸಕ್ಕೆ ಚ್ಯುತಿ ಬರದಂತೆ ಸದಾ ಕಾಲ ನಿಮ್ಮ ಸೇವೆ ಸಲ್ಲಿಸಲು ಬದ್ಧನಾಗಿರುತ್ತೇವೆ.
ಮುಂದಿನ ಮೂರುವರೆ ವರ್ಷಗಳ ಅಧಿಕಾರಾವಧಿಯಲ್ಲಿ ಕಾಗವಾಡ ಕ್ಷೇತ್ರವನ್ನು ರಾಜ್ಯದಲ್ಲಿ ಒಂದು ಮಾದರಿ ಕ್ಷೇತ್ರವನ್ನಾಗಿ ಮಾರ್ಪಡಿಸುವುದಾಗಿ ಭರವಸೆ ನೀಡಿದರು. ಬಡ ಜನರ, ದೀನ ದಲಿತರ, ಅಲ್ಪಸಂಖ್ಯಾತರ ಹಾಗೂ ಹಿಂದುಳಿದ ವರ್ಗಗಳ ಸೇವೆಗೆ ಕಂಕಣಬದ್ಧರಾಗಿದ್ದು ಇನ್ನು ಹೆಚ್ಚಿನ ನಿಮ್ಮ ಪ್ರೀತಿ ವಿಶ್ವಾಸಕ್ಕೆ ಪಾತ್ರರಾಗಿ ಸದಾ ಕಾಲ ನಿಮ್ಮ ಸೇವೆಗೆ ಸಿದ್ಧರಿರುವದಾಗಿ ಹೇಳಿದರು.
ಈ ಸಮಯದಲ್ಲಿ ಕಾಗವಾಡ ಜಿಪಂ ಸದಸ್ಯ ಅಜೀತ ಚೌಗಲಾ, ಹಿರಿಯ ಮುಖಂಡರಾದ ಸುಭಾಷ ಕಟಾರೆ, ಪ್ರಕಾಶ ಮಿಜರ್ೆ, ಸದಾಶಿವ ಚೌಗಲೆ, ನಾಥಗೌಡ ಪಾಟೀಲ, ಬಾಳಾಸಾಬ ಕುಂಬೋಜೆ, ಬಾಳಾಸಾಬ ಕಲ್ಲೋಳೆ, ಬಾಳಾಸಾಬ ಚೌಗಲೆ, ಕಾಕಾಸಾಬ ಚೌಗಲೆ, ವಿಠ್ಠಲ ಪವಾರ, ಅವಿನಾಥ ದೇವನೆ, ಸಚೀನ ಕವಟಗೆ, ಅಮರ ಸಿಂಧೆ, ಜಾವೀದ ಶೇಖ, ಪ್ರಕಾಶ ಪಾಟೀಲ, ಬಾಳು ಕಾಂಬಳೆ ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಬಿಜೆಪಿ ಕಾರ್ಯಕರ್ತರು, ಗ್ರಾಮಸ್ಥರು ಇದ್ದರು.