ನವದೆಹಲಿ, ಜ 30: ಹೊಸದಾಗಿ ತಿದ್ದುಪಡಿ ಮಾಡಿರುವ ಪೌರತ್ವ ಕಾನೂನು ವಿರೋಧಿಸಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ (ಜೆಎಂಐ) ವಿಶ್ವವಿದ್ಯಾಲಯದಿಂದ ರಾಜ್‍ಘಾಟ್‍ಗೆ ನಡೆದ ಪ್ರತಿಭಟನಾ ಮೆರವಣಿಗೆ ವೇಳೆ ವಿಶ್ವವಿದ್ಯಾಲಯ ವಿದ್ಯಾರ್ಥಿ ಮೇಲೆ ಗುಂಡು ಹಾರಿಸಲಾಗಿದೆ.
ಗುಂಡು ಹಾರಿಸಿದ ಆರೋಪಿಯನ್ನು ವಶಕ್ಕೆ ತೆಗೆದುಕೊಳ್ಳಲಾಗಿದ್ದು, ಗಾಯಾಳುವನ್ನು ಹೋಲಿ ಫ್ಯಾಮಿಲಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿರುವ ವೀಡಿಯೊವೊಂದರಲ್ಲಿ, ಆರೋಪಿ ಬೀದಿಗಳಲ್ಲಿ ಬಂದೂಕು ಹಿಡಿದು ‘ಯೆ ಲೋ ಆಜಾದಿ’ ಎಂದು ಕೂಗುತ್ತಿರುವುದು ಕಂಡುಬಂದಿದೆ.
ಮಂಗಳವಾರ ಶಹೀನ್ ಬಾಗ್‍ನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಪ್ರತಿಭಟನಾಕಾರರತ್ತ ವ್ಯಕ್ತಿಯೊಬ್ಬ ಬಂದೂಕು ಗುರಿಯಾಗಿಸಿದ ಎರಡು ದಿನಗಳ ನಂತರ ಈ ಘಟನೆ ನಡೆದಿದೆ. ಇಂದು ಬಂಧಿತನಾದ ವ್ಯಕ್ತಿ ಪರವಾನಗಿ ಪಡೆದ ಬಂದೂಕು ಹೊಂದಿದ್ದಾನೆ ಎಂದು ಮೂಲಗಳು ತಿಳಿಸಿವೆ.
ಘಟನೆಯ ನಂತರ, ಇಂದು, ಆ ಪ್ರದೇಶದಲ್ಲಿ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಭದ್ರತಾ ವ್ಯವಸ್ಥೆಯನ್ನು ಬಿಗಿಗೊಳಿಸಲಾಗಿದೆ.