ಬೆಂಗಳೂರು, ಜ 9 ಬ್ಯಾಂಕ್ ಗಳಿಂದ 20 ಕೋಟಿ ರೂ ಅಧಿಕ ಸಾಲ ಪಡೆದು, ವಂಚಿಸಿ, ತಲೆಮರೆಸಿಕೊಂಡಿದ್ದ ಇಬ್ಬರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಮೈಸೂರು ಮೂಲದ ಮಂಜುನಾಥ್ (34), ಕೆಂಗೇರಿಯ ರಂಗನಾಥ್ (37) ಬಂಧಿತ ಆರೋಪಿಗಳು. ಅಪಾರ್ಟ್ ಮೆಂಟ್ ಕಟ್ಟುವ ನೆಪದಲ್ಲಿ ಪ್ಲಾಟ್ ಖರೀದಿಸಲು ನಕಲಿ ದಾಖಲೆ ಸೃಷ್ಟಿಸಿ ನಗರದ ವಿವಿಧ ರಾಷ್ಟ್ರೀಕೃತ, ಖಾಸಗಿ ಬ್ಯಾಂಕುಗಳಿಂದ ಸುಮಾರು 20 ಕೋಟಿ ರೂ ಅಧಿಕ ಸಾಲ ಪಡೆದು, ಸುಮಾರು ಒಂದೂವರೆ ವರ್ಷಗಳಿಂದ ಆರೋಪಿಗಳು ತಲೆ ಮರೆಸಿಕೊಂಡಿದ್ದರು. ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ, ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ ಒಂದು ಆಡಿ ಕಾರು, ಒಂದು ಜೀಪ್ ಕಂಪಾಸ್ ಕಾರು ಹಾಗೂ ಕೃತ್ಯಕ್ಕೆ ಬಳಸಿದ್ದ ಲ್ಯಾಪ್ ಟಾಪ್ ಅನ್ನು ಪೊಲೀಸರು ಜಪ್ತಿಮಾಡಿಕೊಂಡಿದ್ದಾರೆ.
ಆರೋಪಿಗಳು ನಿರ್ಮಾಣ ಹಂತದಲ್ಲಿರುವ ಕಟ್ಟಡಗಳನ್ನು ಗ್ರಾಹಕರಿಗೆ ತೋರಿಸಿ, ಅದಕ್ಕೆ ತಾವೇ ಮಾಲೀಕರೆಂದು ಹೇಳಿಕೊಂಡು ಗ್ರಾಹಕರಿಂದ ಕೆವೈಸಿ ದಾಖಲಾತಿಗಳನ್ನು ಪಡೆದುಕೊಂಡು ಬಿಲ್ಡರ್ ಗಳ ಹೆಸರಿನಲ್ಲಿ ನಕಲಿ ಖಾತೆ ತೆರೆದು ಗ್ರಾಹಕರ ಹೆಸರಿನಲ್ಲಿ ಬ್ಯಾಂಕ್ ಸಾಲ ಪಡೆದುಕೊಂಡು ತಮ್ಮ ಖಾತೆಗಳಿಗೆ ಹಣ ವರ್ಗಾವಣೆ ಮಾಡಿಕೊಳ್ಳುವ ಮೂಲಕ ಗ್ರಾಹಕ, ಬ್ಯಾಂಕ್ ಗಳಿಗೆ ವಂಚಿಸುತ್ತಿದ್ದರು ಎಂದು ಪೊಲೀಸ್ ತನಿಖೆ ವೇಳೆ ತಿಳಿದು ಬಂದಿದೆ. ಆರೋಪಿಗಳು ಐಷಾರಾಮಿ ಜೀವನಕ್ಕಾಗಿ ಈ ಕೃತ್ಯ ಎಸಗುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳ ವಿರುದ್ಧ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ತನಿಖೆ ಮುಂದುವರೆದಿದೆ.