ಗಾಂಜಾ ಮಾರಾಟ ಮಾಡುತ್ತಿದ್ದ ಮೂವರ ಬಂಧನ

ಬೆಂಗಳೂರು, ಮಾ.20, ಗಾಂಜಾ ಮಾರಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ನಂದಿನಿಲೇಔಟ್ ಪೊಲೀಸರು ಬಂಧಿಸಿ, ಅವರಿಂದ 700 ಗ್ರಾಂ ಗಾಂಜಾ ವಶಪಡಿಸಿಕೊಂಡಿದ್ದಾರೆ.
ಪೀಣ್ಯ 2ನೇ ಹಂತದ ನಿವಾಸಿ ಅಪ್ಸರ್ (37), ಲಗ್ಗೆರೆ ನಿವಾಸಿ ನವೀನ್ (20) ಹಾಗೂ ನಂದಿನಿಲೇಔಟ್ ಕೂಲಿನಗರ ನಿವಾಸಿ ಸೂರ್ಯ (19) ಬಂಧಿತ ಆರೋಪಿಗಳು. ಆರೋಪಿಗಳು ನಂದಿನಿಲೇಔಟ್‌ನ ಕೂಲಿನಗರ ಬ್ರಿಡ್ಜ್‌ ಕೆಳಗೆ ಖಾಲಿ ಜಾಗದಲ್ಲಿ ಮಾದಕ ವಸ್ತು ಗಾಂಜಾವನ್ನು ಆಟೋ ರಿಕ್ಷಾದಲ್ಲಿ ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.ಆರೋಪಿಗಳಿಂದ 700 ಗ್ರಾಂ ತೂಕ ಗಾಂಜಾವನ್ನು ವಶಪಡಿಸಿಕೊಂಡು ನಂದಿನಿಲೇಔಟ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.ಮಲ್ಲೇಶ್ವರಂ ಉಪ ವಿಭಾಗದ ಎಸಿಪಿ ವಿ.ಧನಂಜಯ ಅವರ ಮಾರ್ಗದರ್ಶನದಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್ ಬಿ.ಎನ್.ರೋಹಿತ್, ಪಿಎಸ್ಐ ನಿತ್ಯಾನಂದಾಚಾರಿ, ಶಿವು ಜೋಗಣ್ಣ ಅವರ ತಂಡ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.