ಶ್ರೀನಗರ, ಫೆ.3 : ಜೈಷ್ -ಇ-ಮುಹಮ್ಮದ್ ಸಂಘಟನೆಗೆ ವಸತಿ ಮತ್ತಿತರ ಸೌಲಭ್ಯ ದೊರಕಿಸಿಕೊಡುತ್ತಿದ್ದ ಜೆಇಎಂ ಕಮಾಂಡರ್ ಸೇರಿ ನಾಲ್ವರು ಸ್ಥಳೀಯ ಕಾರ್ಯಕರ್ತರನ್ನು ದಕ್ಷಿಣ ಕಾಶ್ಮೀರ ಜಿಲ್ಲೆಯ ಪುಲ್ವಾಮದಲ್ಲಿ ಪೊಲೀಸರು ಬಂಧಿಸಿದ್ದಾರೆ.
ಖಚಿತ ಮಾಹಿತಿಯ ಮೇರೆಗೆ ಪೊಲೀಸರು ಪುಲ್ವಾಮದ ಖ್ರೂ ಮತ್ತು ಅವಾಂತಿಪೊರದಲ್ಲಿ ದಾಳಿ ನಡೆಸಿ ನಾಲ್ವರು ಸ್ಥಳೀಯ ಕಾರ್ಯಕರ್ತರನ್ನು ಬಂಧಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಖ್ರೂ ಎಂಬಲ್ಲಿಯ ನಿವಾಸಿಗಳಾದ ಮುಹಮ್ಮದ್ ಅಮೀನ್, ಮುಹಮ್ಮದ್ ರಫೀಕ್, ಫಯಾಝ್ ಲೋನ್ ಮತ್ತು ಅವಾಂತಿಪೊರದ ನಿವಾಸಿ ಮಕ್ಬೂಲ್ ದಾರ್ ಬಂಧಿತರು.
ಆರೋಪಿಗಳು ಅವಾಂತಿಪೊರ ಪ್ರದೇಶದಲ್ಲಿ ಜೆಇಎಂಗೆ ಸಹಾಯ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಅವಾಂತಿಪೊರದಲ್ಲಿ ಇತ್ತೀಚೆಗೆ ನಡೆದ ಗುಂಡಿನ ಚಕಮಕಿಯಲ್ಲಿ ಜೆಇಎಂ ಕಮಾಂಡರ್ ಖಾರಿ ಯಾಸಿರ್ ಮತ್ತು ಆತನ ಸಹಚರರು ಹತರಾಗಿದ್ದರು.
"ಕಾನೂನಿನ ಸಂಬಂಧಿತ ವಿವಿಧ ಪ್ರಕರಣಗಳು ಆಯಾ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿವೆ ಮತ್ತು ಈ ವಿಷಯದಲ್ಲಿ ಹೆಚ್ಚಿನ ತನಿಖೆ ಪ್ರಗತಿಯಲ್ಲಿದೆ" ಎಂದು ಅವರು ಹೇಳಿದರು.
ಈ ಪ್ರದೇಶದಲ್ಲಿ ಉಗ್ರ ಸಂಬಂಧಿತ ಚಟುವಟಿಕೆಗಳನ್ನು ಬೆಂಬಲಿಸುವಲ್ಲಿ ಈ ನಾಲ್ಕು ಜನರ ಪಾತ್ರದ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.