ನವದೆಹಲಿ, ಮೇ 19,ರಿಪಬ್ಲಿಕ್ ಟಿವಿಯ ಪ್ರಧಾನ ಸಂಪಾದಕ ಅರ್ನಾಬ್ ಗೋಸ್ವಾಮಿ ಸದ್ಯಕ್ಕೆ ಬಂಧನ ಭೀತಿಯಿಂದ ಪಾರಾಗಿದ್ದಾರೆ. ಸುಪ್ರೀಂ ಕೋರ್ಟ್ ಮಂಗಳವಾರದ ತನ್ನ ತೀರ್ಪಿನಲ್ಲಿ, ಮಧ್ಯಂತರ ರಕ್ಷಣೆಯನ್ನು ಇನ್ನೂ ಮೂರು ವಾರಗಳವರೆಗೆ ವಿಸ್ತರಿಸಿದೆ. ಪಾಲ್ಘರ್ ಪ್ರಕರಣ ಸೇರಿದಂತೆ ರಿಪಬ್ಲಿಕ್ ಟಿವಿಯಲ್ಲಿ ನಡೆದ ಚರ್ಚೆಗಳಲ್ಲಿ ಅವರ ಹೇಳಿಕೆ ಸಂಬಂಧ ನಡೆದ ವಿಚಾರಣೆಯಲ್ಲಿ ಈ ಆದೇಶ ನೀಡಲಾಗಿದ "ಅರ್ಜಿದಾರರ ವಿರುದ್ಧ ಮೂರು ವಾರಗಳವರೆಗೆ ಯಾವುದೇ ಬಲವಂತದ ಕ್ರಮದಿಂದ ನ್ಯಾಯಾಲಯವು ಮಧ್ಯಂತರ ರಕ್ಷಣೆ ನೀಡುತ್ತದೆ" ಎಂದು ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ನೇತೃತ್ವದ ಮೂವರು ನ್ಯಾಯಾಧೀಶರ ನ್ಯಾಯಪೀಠ ತೀರ್ಪಿನಲ್ಲಿ ತಿಳಿಸಿದೆ. ಆದಾಗ್ಯೂ, ತನಿಖೆಯನ್ನು ಮಹಾರಾಷ್ಟ್ರ ಪೊಲೀಸರಿಂದ ಸಿಬಿಐಗೆ ವರ್ಗಾಯಿಸಲು ಅಪೆಕ್ಸ್ ಕೋರ್ಟ್ ನಿರಾಕರಿಸಿತು. ಆದರೆ ಎಫ್‌ಐಆರ್ ದಾಖಲಾಗಿರುವ ಮುಂಬೈ ಪ್ರಕರಣದ ತನಿಖೆ ಮುಂದುವರಿಯಲಿದೆ ಎಂದು ತಿಳಿಸಿದೆ. "ಭಾರತೀಯ ಸಂವಿಧಾನದ 32 ನೇ ವಿಧಿ ಮೂಲಭೂತ ಹಕ್ಕುಗಳನ್ನು ರಕ್ಷಿಸಲು ನ್ಯಾಯಾಲಯ ಸಮ್ಮತಿಸುತ್ತದೆ. ಪತ್ರಿಕೋದ್ಯಮ ಸ್ವಾತಂತ್ರ್ಯವು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಒಳಪಟ್ಟಿದೆ” ಎಂದು ಸುಪ್ರೀಂಕೋರ್ಟ್ ಮಂಗಳವಾರದ ತನ್ನ ತೀರ್ಪಿನಲ್ಲಿ ಹೇಳಿದೆ.